badge

Wednesday, January 9, 2013

ಯಾರು ಹಿತವರು ನಮಗೆ?..!!



ದೃಶ್ಯ I  

ಸಿಗ್ನಲ್ ಹಸಿರಾಗುತ್ತಲೇ ತಾಳ್ಮೆಗೆಡುತ್ತಾ "ಪೀಂ ಪೀಂ ಪೋಂ ಪೋಂ"  ಎಂದು ಹಾರ್ನ್ ಮಾಡುತ್ತಿದ್ದ ಗಾಡಿಗಳನ್ನು ನೋಡಿ ನನಗೂ ಸ್ವಲ್ಪ ರೇಗಿತ್ತು. ಅಷ್ಟೇನೂ ಹೆಚ್ಚು ವಾಹನಗಳಿರದ ಸಾಧಾರಣ ಟ್ರಾಫಿಕ್ , ಮತ್ತೇಕೆ ಜನ ಇಷ್ಟು ಅಸಮಧಾನ ವ್ಯಕ್ತ ಪಡಿಸುತ್ತಿದ್ದಾರೋ ಎಂದು ಅನಿಸ ತೊಡಗಿತು. ಬೆಂಗಳೂರಿನ ಅತೀ ಪ್ರತಿಷ್ಟಿತ ರಸ್ತೆ. ಮೊಟ್ಟ ಮೊದಲ ಬಾರಿಗೆ ಮೆಟ್ರೋ ಚಾಲ್ತಿಯಾದ ಮಾರ್ಗ. ಮತ್ತೆ ಹತ್ತು ಹಲವು ಹೊಸ-ಹಳೆ ಬಹು ಮಹಡಿಯ ಕಟ್ಟಡಗಳು. ದೇಶ ವಿದೇಶಗಳಿಂದ ಬಂದ, ವಿವಿಧ ವೇಷ ಭೂಷಣಗಳ, ವಿವಿಧ ಭಾಷೆಗಳನ್ನಾಡುವ , ಎಲ್ಲ ಜಾತಿ ಮತದ, ಹಿರಿ -ಕಿರಿ ಯರು ಓಡಾಡುವ ರಸ್ತೆ. ಅಲ್ಲೇ ಒಂದು BMTC  ಬಸ್ ನಿಲ್ದಾಣ. ಆದರೆ ಆ ಮಾರ್ಗವಾಗಿ ಓಡಾಡುವ ಬಸ್ ಸಂಖ್ಯೆ ಅತೀ ವಿರಳ. ಬಸ್ ನಿಲ್ದಾಣದಲ್ಲೂ ಇರುವುದು ಒಬ್ಬರೋ - ಇಬ್ಬರೋ ಅಷ್ಟೇ. ಅಲ್ಲೇ ಸ್ವಲ್ಪ ಕಣ್ಣಾಡಿಸಿದರೆ ಒಂದೆರಡು ಕಡೆ ಕಾಣಸಿಗುವ ಹುಡುಗಿಯರು. ನೋಡಲು ಹೇಗಿದ್ದರೂ , ಅಂಗಾಂಗ ಕಾಣುವ ಹಾಗೆ ಧರಿಸಿರುವ ವಸ್ತ್ರಗಳು. ಹೋಗಿ ಬರುವ ಗಂಡಸರನ್ನು ನೋಡುತ್ತಾ, ಮೋಹಕ ನಗೆ ಬೀರುತ್ತಾ, ನಿಲ್ಲುವ ಆಟೋ - ಟ್ಯಾಕ್ಸಿ, ಬೈಕ್ ಗಳ ಹತ್ತಿರ ಹೋಗಿ ನಿಂತು ಮಾತಾಡಿಸಿ ಮತ್ತೆ ಬಂದು ನಿಲ್ಲುವ ಲಲನೆಯರು. ಸ್ವಲ್ಪ ದೂರ, ಅಗೋ ಆ ಸಿಗ್ನಲ್ ಹತ್ತಿರದ ಮರದ ಕೆಳಗೆ ಒಂದು ಆಟೋ. ಅವನು ಸಹ
ತನ್ನ ಆಟೋವಿನ ಹಿಂದೂ ಮುಂದೂ ಪಾರ್ಕ್ ಮಾಡುವ ಗಂಡಸರ ಹಿಂದೆ ಹೋಗಿ "ಸರ್ ಆಟೋ ಬೇಕಾ ?" ಎಂದು ಮುಗುಳ್ನಕ್ಕು ಅವರ ಉತ್ತರಕ್ಕಾಗಿ ಕಾಯುವವ ... ಅರ್ಥ ಮಾಡಿಕೊಂಡು ಹೌದು ಎನ್ನುವವರನ್ನು ಕರೆದುಕೊಂಡು ಆಟೋನಲ್ಲಿ ಕೂರಿಸಿ ತನ್ನ ಹತ್ತಿರದ ಆಲ್ಬಮ್ ತೋರಿಸಿ ಬೆಲೆ ವಿಷಯಕ್ಕೆ ಇಳಿಯುವವ.ಮತ್ತಿನ್ನೂರು ಮುನ್ನೂರು ಗಜಗಳಲ್ಲೇ ಹೊಯ್ಸಳ ಗಾಡಿಯ ಎಲ್ಲ ದೀಪಗಳನ್ನು ಆರಿಸಿ ಕುಳಿತು ಹರಟೆ ಹೊಡೆಯುತ್ತಿರುವ ಆರಕ್ಷಕರು.   

ಇಷ್ಟು ಪೀಠಿಕೆ ಹಾಕಿದ ಮೇಲೆ  ಇಲ್ಲಿ ನಡೆಯುತ್ತಿರುವುದಾದರೂ ಏನು ಎಂದು ಅರ್ಥ ಮಾಡಿಕೊಂಡವರು ಜಾಣರು. ಇಷ್ಟು ಹೇಳಿದ ಮೇಲೂ ಇನ್ನೂ ತಿಳಿಯದೆ ಇದ್ದರೆ ನಿಮ್ಮಂಥ ಮುಗ್ಧ ಮನುಷ್ಯ ಇನ್ನೂ ಈ ಪ್ರಪಂಚದಲ್ಲಿ ಇದ್ದಾರೆ ಎಂಬ ಹೆಮ್ಮೆ. ಇಲ್ಲಿ ನಡೆಯುತ್ತಿರುವುದು ಶುಧ್ಧ ಮಾಂಸದ ಧಂಧೆ. ವಯಸ್ಸಿನ ಹೆಣ್ಣು ಮಕ್ಕಳು ಬೀದಿಯಲ್ಲಿ ನಿಂತು ಗಂಡಸರಿಗೆ  ತಮ್ಮನ್ನು ತಾವೇ ಮಾರಿಕೊಳ್ಳುವುದು! ಕೆಲವೊಮ್ಮೆ ಆಟೋ ಡ್ರೈವರ್ ಗಳ ಮೂಲಕ ಕಾರುಬಾರು. ಒಮ್ಮೆ ನೋಡಿಯೇ ಅರ್ಥ ಮಾಡಿಕೊಳ್ಳಬಹುದಾದ ಇಷ್ಟು ನೇರವಾದ ವಿಷಯ , ಪೋಲೀಸರ ಗಮನಕ್ಕೆ ಬಾರದೆ ಇರುವುದೇ? ಅವರ ಮೇಲೂ ನನಗೆ ಅನುಮಾನ !!! ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಜೊತೆಗೆ ಅಕ್ರಮ ಧಂದೆ ಯ ಸಿಟಿ ಎನ್ನಬಹುದೇನೋ.

ದೃಶ್ಯ II

ಹಳ್ಳಿಯ ಸ್ವಲ್ಪ ಹೊರಗೆ ಸರ್ಕಾರಿ ಪ್ರಾಥಮಿಕ ಶಾಲೆಯ ಅಂಗಳ. ಅಲ್ಲೊಂದು ಮರದ ಸುತ್ತ ಮಕ್ಕಳಿಗೆ ಕೂರಲೆಂದು ಮಾಡಿದ ಕಟ್ಟೆ. ಅದರಡಿ ಬಳಪದ ಕಲ್ಲಿನಿಂದ ಚೌಕಗಳನ್ನು ಬರೆದು ಆಟವಾಡುತ್ತಿರುವ ಬಾಲೆಯರು. ಇನ್ನೇನು ಅಸ್ತವಾಗೋ ನಿರ್ಧಾರ ಮಾಡಿರುವ ಅರ್ಕದೇವ, ಕೆನ್ನೀರು ಚೆಲ್ಲುತ್ತಾ ಹೊಲ ಗದ್ದೆ ಶಾಲೆಯ ಮೇಲೂ ರಂಗು ಚೆಲ್ಲಿದ್ದ. ಬಾಲೆಯರ ಮೆತ್ತನೆಯ ಮುಂಗುರುಳುಗಳನ್ನು ಮಿನುಗುವ ಪುಟ್ಟ ಪುಟ್ಟ ಕಂಗಳಿಗೆ ತೂರುವ ತಂಗಾಳಿ. ಅವುಗಳನ್ನು ಮುದ್ದು ಕೈಗಳಿಂದ ಸರಿಸುತ್ತಾ ಹುಣಿಸೆ ಬೀಜಗಳಿಂದ ಚೌಕಾಬಾರ ಆಡುತ್ತಿರುವ ಇಬ್ಬರು ಬಾಲೆಯರು. ವಯಸ್ಸು ಏಳೊ ಎಂಟೋ ಅಷ್ಟೇ. ಕಟ್ಟೆಯ ಮೇಲೆ ಕೂತ ಮಕ್ಕಳಿಗೆ ಆಡುವ ಸಂಭ್ರಮ! ಅಲ್ಲೇ ಶಾಲೆಯ ಜಗುಲಿಯ ಮೇಲೆ ಬೀಡಿ ಸೇದುತ್ತಾ ಆಡುತ್ತಿರುವ ಮಕ್ಕಳನ್ನು ಗಮನಿಸುತ್ತಿರುವ ಎರಡು ಹಸಿದ  ಕಣ್ಣುಗಳು. ಬೀಡಿ ಪೂರ್ತಿ ಸೇದಿ ಎಸೆದು ಹೋಗಿ, ಇಬ್ಬರಲ್ಲಿ ಒಬ್ಬರನ್ನು ನೆಪ ಮಾಡಿ ಕಳಿಸುವ ಉಪಾಯ ಹೂಡಬೇಕು! ಕೆಲಸ ಮುಗಿದ ಮೇಲೆ ಮಗುವನ್ನು ಹೆದರಿಸಿ ಅಥವಾ ಏನಾದರು ಕೊಡಿಸಿ ಆದದ್ದನ್ನು ಮರೆಯಿಸಿದರಾಯಿತು. ಬೀಡಿಯನ್ನು ಕಾಲಿಂದ ಹೊಸೆದು ಇನ್ನೇನು ಹೊರಡಬೇಕೆನ್ನುಕೊಳ್ಳುವಷ್ಟರಲ್ಲೇ ಹೊಗೆಯಿಂದಾಗಿ ಎದೆಯಲ್ಲಿ ಕಫ ಕೂತು ಜೋರಾಗಿ ಕೆಮ್ಮಲು ಶುರು ಮಾಡಿದನು. ಕೆಮ್ಮಿನ ಶಬ್ದ ಕೇಳಿ ಅತ್ತ ನೋಡಿದ ಮಗುವಿನ ಕಂಗಳು ಭಯದಿಂದ ಸ್ಥಬ್ದವಾದುವು. ಒಮ್ಮೆಲೇ ಉಸಿರು ಹಿಡಿದು, ಎವೆಯಿಕ್ಕದೆ ಒಂದು ಘಳಿಗೆ ಅತ್ತ ನೋಡುತ್ತಿರುವಾಗಲೇ, ಎದುರಿಗಿದ್ದ ಮಗು, ಗೆಳತಿ ಹೀಗೇಕೆ ಬೆದರಿದಳೊ ಎಂದುಕೊಳ್ಳುವಾಗಲೇ , ಅತ್ತ ನೋಡುತ್ತಿದ್ದ ಮಗು "ಕಾಶಿ ಬಂದ ಕಣೇ ! ಬಾರೆ ಓಡೋಣ " ಎಂದು ಆಟವನ್ನು ಅಲ್ಲೇ ಮುಗಿಸಿ ಎದ್ದೆವೋ ಬಿದ್ದೆವೋ ಎಂಬಂತೆ ಓದತೊದಗಿದುವು !!!... ಓಡುತ್ತಿದ್ದ ,ಮಕ್ಕಳನ್ನು ಹಿಡಿಯುವ ಪ್ರಯತ್ನ ಮಾಡಲು ಹೋಗದೆ ಕ್ಯಾಕರಿಸಿ ಉಗಿದು, "ಥೂ ಹಾಳು ಮುಂಡೇರು " ಎಂದು ಬೈದು ಮನೆಯತ್ತ ಹೊರಟ ...

ಕಾಶಿ ಓದು ಬರಹವಿಲ್ಲದೇ ಅಲ್ಲಿ ಇಲ್ಲಿ ಸುತ್ತಿ ದಿನಕಳೆಯುತ್ತಿದ್ದ. ಕೆಲಸ ಕಾರ್ಯಗಳಿಲ್ಲದೇ ಸಮಯ ಕಳೆಯಲು ಶಾಲೆಯ ಹತ್ತಿರ ಬರುತ್ತಿದ್ದವ ಅಲ್ಲಿ ಪುಟ್ಟ ಹೆಣ್ಣು ಮಕ್ಕಳನ್ನು ಬೈದು ಬೆದರಿಸಿ ಅವರ ಮೈ ಕೈ ಮುಟ್ಟುವುದು ಮಾಡುತ್ತಿದ್ದ. ಕೆಲವು ಮಕ್ಕಳಿಗೆ ತಿನ್ನಲು ಏನಾದರು ಕೊಟ್ಟು ಪುಸಲಾಯಿಸುತ್ತಿದ್ದ. ಸ್ವಲ್ಪ ದೊಡ್ಡ ಮಕ್ಕಳಿಗೆ ಇದು ತಿಳಿದು ಅವರಲ್ಲೇ ಮಾತಾಡಿಕೊಂಡು ಕಾಶಿ ಬಂದಾಗ ಓಡಿ ಹೋಗುವುದೆಂದು ನಿರ್ಧರಿಸಿದ್ದರು. ಕಾಶಿಯ ವಿಷಯ ಲಂಪಟತೆ ಕೆಲವು ಹಿರಿಯರಿಗೆ ತಿಳಿದಿದ್ದರೂ ಅವರು ಏನೂ ಹೇಳುತ್ತಿರಲಿಲ್ಲ. ಅವರೆಲ್ಲರೂ ತಮ್ಮ ತಮ್ಮ ಮನೆಯ ಹೆಣ್ಣುಮಕ್ಕಳನ್ನು ಮಾತ್ರ ಅವನಿಂದ ದೂರವಿರುವಂತೆ ಹೇಳುತ್ತಿದ್ದರು. ತಿಳಿಯದೆ ಅವನಿಂದ ಮೋಸ ಹೋದ ಪುಟ್ಟ ಬಾಲೆಯರು ಅವನ ನೆರಳು ಕಂಡರೂ
ಭಯದಿಂದ ನಡುಗುತ್ತಿದ್ದರು. 

ದೃಶ್ಯ III
ಮದುವೆ ಮುಗಿದು ಎಲ್ಲವನ್ನು ಪ್ಯಾಕ್ ಮಾಡಲು ಇದ್ದವರೆಲ್ಲ ಅತ್ತಿಂದಿತ್ತ ಇತ್ತಿಂದತ್ತ ತಿರುಗಾಡುತ್ತಿದ್ದರು. ಅಲ್ಲಿ ಬಿದ್ದಿದ್ದ ಬಲೂನ್, ಹೂವುಗಳನ್ನು ಎತ್ತಿಕೊಂಡು ಆಡುತ್ತಿರುವ ಪುಟಾಣಿಗಳು, "ಹಶ್ಶಾ ಬುಸ್ಶಾ ಆಲ್ ಫಾಲ್ ಡೌನ್ ...ಹ್ಹ ಹ್ಹ ಹಹಹಾ " ಎಂದು ಕಿಲಕಿಲನೆ ನಗುತ್ತಾ ಆಡುತ್ತಿರುವ ಮಕ್ಕಳು. ಕೆಲವರು ಮೆಟ್ಟಿಲನ್ನು ಹತ್ತಿ ಇಳಿಯೋ ಆಟವಾಡಿದರೆ, ಇನ್ನು ಕೆಲವರು ಅಡುಗೆ ಮನೆಯತ್ತ ಓಡಿ ಹಪ್ಪಳ ಸಂಡಿಗೆಗಳನ್ನು ಮೆಲ್ಲುತ್ತಾ ಕೇಕೆ ಹಾಕಿ ಕುಣಿಯುವವರು. ಇವೆಲ್ಲ ಆಟಗಳನ್ನು ಆಡಲು ಸ್ವಲ್ಪ ದೊಡ್ಡವರಾದ, ಹಾಗು ಹೆಂಗಸರೊಡನೆ ಬೆರೆಯಲು ಚಿಕ್ಕವರಾದ ಗುಂಪಿನ ಒಂದೆರಡು ಹೆಣ್ಣು ಮಕ್ಕಳು. ಈಗ ತಾನೇ ಬೆಳೆಯುತ್ತಿರುವ ಆ ಕಿಶೋರಿಯರನ್ನು ವಿಧ ವಿಧ ರೀತಿಯ ದೃಷ್ಟಿಯಲ್ಲಿ ನೋಡುವವರು. ಸಂಜೆ ಮನೆಗೆ ತಲುಪುವ ಭರಾಟೆ, ವಧುವನ್ನು ಮನೆ ತುಂಬಿಸಿಕೊಳ್ಳೋ ಕಾರ್ಯಕ್ರಮ ಇತ್ಯಾದಿ, ರಾತ್ರಿ ಉಪಾಹಾರವೆಲ್ಲಾ ಆದಮೇಲೆ, ಎಲ್ಲಾರೂ ದಣಿದು ಸಿಕ್ಕ ಸಿಕ್ಕ ಜಾಗಗಳಲ್ಲೇ ವಿರಮಿಸಿದರು. ಇವೆಲ್ಲವುಗಳ ಮಧ್ಯದಲ್ಲಿ ಅತ್ತ ಪುಟ್ಟ ಮಕ್ಕಳೆಲ್ಲಾ ಅಮ್ಮಂದಿರ ಜೊತೆ ಮಲಗಿದರೆ, ದೊಡ್ಡವರೆಲ್ಲ ಹರಟುತ್ತ ಒಂದೇ ಕಡೆ ಸೇರಿದ್ದರು. ಈ ಕಿಶೋರಿಯರಿಗೆ ಅಲ್ಲೇನು ಕೆಲಸ, ಮತ್ತವರು ಮಾತಾಡಬೇಕಾದ ವಿಷಯಗಳು ಆ ವಯಸ್ಸಿಗೆ ಸೂಕ್ತವಾದುವಲ್ಲ ಎಂದೆನಿಸಿ ಅವರನ್ನು
ಯಾವುದೋ  ಒಂದು ಕೋಣೆಗೆ ಹೋಗಿ ಮಲಗಿರೆಂದು ಕಳುಹಿಸಿದರು. ಇವರಿಬ್ಬರೇ ಕೋಣೆ ಸೇರಿ ಬೆಳಗ್ಗಿನಿಂದ ಆದ ಎಲ್ಲ ಸ್ವಾರಸ್ಯಕರ ವಿಷಯಗಳನ್ನು ಮೆಲುಕು ಹಾಕುತ್ತ ನಿದ್ರೆಗೆ ಸರಿದರು. ಹಗಲಿನಿಂದಲೂ ರಾತ್ರಿಯವರೆಗೆ ಇವರಿಬ್ಬರನ್ನು ಗಮನಿಸುತ್ತ ಸರಿಯಾದ ಸಮಯಕ್ಕಾಗಿ ಹೊಂಚು ಹಾಕುತ್ತಿದ್ದ ದೂರದ ಸಂಬಂಧಿ, ಸುಮಾರು ನಲವತ್ತರ, ಈ ಕಿಶೋರಿಯರ ತಂದೆಯ ವಯಸ್ಸಿನ ರಾಜು ಮಾಮನ ಮೇಲೆ ಯಾರಿಗೂ ಅವಮಾನ ಬಂದಿರಲಾರದು... ಬಾಲೆಯರಿಬ್ಬರ ಮಾತು ಮುಕ್ತಾಯವಾಗಿ, ಅವರು ನಿದ್ದೆಗೆ ಜಾರಿರುವುದು ಖಾತ್ರಿ ಮಾಡಿಕೊಂಡು ನಿಧಾನವಾಗಿ ಕೋಣೆಗೆ ಸೇರಿಕೊಂಡ...


ಮೇಲಿನ ಸಂಧರ್ಭಗಳು ಓದುಗರಿಗೆ ಏನನ್ನು ತೋರಿಸಿಕೊಡುತ್ತದೋ ನನಗೆ ತಿಳಿಯದು. ಆದರೆ ಇದು ಸರ್ವೇ ಸಾಮಾನ್ಯವಾಗಿರುವ ಸಂಗತಿ. ಕೆಲವರು ನಿರ್ಲಕ್ಷಿಸುತ್ತಾರೆ, ಕೆಲವರು ಈ ಲೋಕವೇ ಹೀಗೆಂದು ನಿಟ್ಟುಸಿರು ಬಿಡುತ್ತಾರೆ. ಹಾಗಾಗಿ ಕಾಶಿ -ರಾಜುವಿನಂಥ ಹಲವಾರು ಕಾಮುಕರು ನಮ್ಮ ಮನೆಯ ಪುಟ್ಟ ಹೆಣ್ಣುಮಕ್ಕಳ ಮುಗ್ಧತೆಯ ಲಾಭ ಪಡೆಯುತ್ತಾರೆ. ಹಾಗೆಂದು ಮೊದಲನೇ ದೃಶ್ಯಕ್ಕೂ ಮಿಕ್ಕಿದೆರಡು ದೃಶ್ಯಕ್ಕೂ ಏನು ಸಂಬಧವೆಂದು ಹೇಳುತ್ತೇನೆ. ನನಗೂ ನಿಮ್ಮ ಹಾಗೆಯೇ ಟ್ರಿನಿಟಿ ವೃತ್ತ, ಹೆಬ್ಬಾಳ ಫ್ಲೈ ಓವರ್ ಸಮೀಪ ನಿಲ್ಲುವ ವೇಶ್ಯಾವಾಟಿಕೆ ನಡೆಸುವ ಹೆಂಗಸರನ್ನು ನೋಡಿ ಅಪಾರ ಕೋಪ ಹಾಗು  ಜಿಗುಪ್ಸೆ ಉಂಟಾಗುತ್ತಿತ್ತು. ಗೆಳಯರೊಡನೆ ಈ ವಿಷಯ ಚರ್ಚಿಸುವಾಗ ನನ್ನಿಂದಲೇ ಅತೀ ಉಗ್ರ ಪ್ರತಿಕ್ರಿಯೆ ದೊರೆಯುತ್ತಿತ್ತು. ಹಾಗೆಯೇ ನಮ್ಮ ಹೊಸದಿಗಂತ ಪತ್ರಿಕೆಯ ಮಾಜಿ  ಸಂಪಾದಕರಾದ ಶ್ರೀ ಶಿವಸ್ವಾಮಿ ಅವರೊಡನೆ ಇದೇ ವಿಚಾರ ಚರ್ಚಿಸಿದೆ. ಮರ್ಯಾದಸ್ತರು ಓಡಾಡುವ ಇಂತಹ ನಗರಗಳಲ್ಲಿ ಹೀಗೆ ಅನುಚಿತವಾಗಿ ರಸ್ತೆ ಬದಿಗಳಲ್ಲಿ ನಿಲ್ಲುವ ಬಗೆ ಬಹು ಅಸಹ್ಯಕರ ಎಂದೂ ಹೇಳಿದೆ. ಆಗ ಶಿವಸ್ವಾಮಿಯವರ ಉತ್ತರವನ್ನು ಕೇಳಿ ನಾನೇ ಚಕಿತಳಾದೆ!  ನಮ್ಮ ಸುತ್ತಮುತ್ತಲೇ ಇದ್ದು, ವಯಸ್ಸಿನ ಪರಿಗಣನೆ ಮಾಡದೆ ಇನ್ನೂ ಹುಟ್ಟಿ ಬೆಳೆಯದ, ಆಡುವ ವಯಸ್ಸಿನ ಮಕ್ಕಳನ್ನು ದುರುಪಯೋಗಿಸುವ ಇಂತಹ ಕಾಮುಕರು ನಮ್ಮ ಮಕ್ಕಳನ್ನು ಬಿಟ್ಟು ಅಂತಹ ಸ್ಥಳಗಳಿಗೆ ಹೋಗಿ ತಮ್ಮ ಕಾಮ ತ್ರಷೆ ತೀರಿಸಿಕೊಳ್ಳಬಹುದಲ್ಲವೇ?!!! ಹೌದು ಎಂದು ಒಪ್ಪಿಗೆ ನೀಡುವ ಧೈರ್ಯ ನನಗೆ ಇರಲಿಲ್ಲ... ಮರ್ಯಾದೆ ಬಿಟ್ಟು ಹೊರಗೆ ಹಣ ತೆತ್ತು ಪಡೆಯುವ ಗೋಜಿಗೆ ಹೋದವರೆಷ್ಟೋ! ಮತ್ತು ಅಕ್ಕಪಕ್ಕದ ಹೆಣ್ಣು ಮಕ್ಕಳ ಮುಗ್ಧತೆಯನ್ನು ದುರ್ಬಳಕೆ ಮಾಡುವವರಿನ್ನೆಷ್ಟೋ!!!

ನಿಮ್ಮ ಗಮನಕ್ಕೆ ಇಂತಹ ನಿರ್ದಯಿಗಳು ಬಂದಲ್ಲಿ ಹಿಂದೂ ಮುಂದು ನೋಡದೆ ಅವರನ್ನು ಅವಮಾನಿಸಿ. ಅವರ ಕುಕ್ರತ್ಯಗಳು ಎಲ್ಲರಿಗೂ ತಿಳಿದು ಅವರವರ ಮನೆ ಮಕ್ಕಳನ್ನು ಇಂಥವರಿಂದ ದೂರವಿಡಲಿ.. ನಿಮ್ಮ ಮನೆಯ ಹೆಣ್ಣು ಮಕ್ಕಳ ಜೊತೆ ವಿಶ್ವಾಸದಿಂದ ಮಾತನಾಡಿಸಿ ಅವರ ಜೊತೆ ಹೀಗೆ ಯಾರಾದರು ವ್ಯವಹರಿಸುತ್ತಾರೆಯೋ ಎಂದು ತಿಳಿಯಿರಿ. ಗದರಿಸಿ ಕೇಳಿದರೆ ಮೊದಲೇ ಭಯಭೀತರಾದ ಮಕ್ಕಳು ಇನ್ನೂ ಹೆದರಬಹುದು. ಪುಟ್ಟ ಹೆಣ್ಣು ಮಕ್ಕಳಿಗೆ ಯಾರೇ ಆಗಲಿ, ಮೈ ಕೈ ಮುತ್ತಿ ಮಾತಾಡಿಸಿದರೆ ಪ್ರತಿರೋಧಿಸಲು ಉತ್ತೇಜಿಸಿ...
ನಾಳೆ ನಮ್ಮ ಮಕ್ಕಳು ಬೆಳೆಯುವಾಗ ಇನ್ನೇನು ಹೊಸ ತೊಂದರೆಗಳು ಬರಬಹುದೋ ಎಂಬ ವಿಚಾರ ಬಂದರೆ ನನಗೆ ಈಗಲೇ ಗಾಬರಿಯಾಗುತ್ತದೆ. ಮುಗ್ದತೆಯ, ವಿಶ್ವಾಸದ ಕೊಲೆ ಮಾಡಿ, ಇನ್ನೂ ಚಿಗುರದ ಮೊಗ್ಗುಗಳನ್ನೇ ಚಿವುಟುವ ಕಾಮಂಧರೋ? ಗೌರವಸ್ಥರು ತಿರುಗಾಡುವ ಸ್ಥಳಗಳಲ್ಲಿ ನಿಂತ ವೇಶ್ಯೆಯರ ಸಹವಾಸ ಮಾಡಿ HIV ನಂಥಹ ಮಹಾಮಾರಿಯನ್ನು ಸ್ವಾಗತಿಸಿ, ಪಾಪವರಿಯದವರಿಗೆ ಹರಡುವ ಕಾಮುಕರೋ? ಯಾರು ಹಿತವರು ನಮಗೆ?!!


Image Courtesy : Times Of India : http://timesofindia.indiatimes.com/city/bhopal/Madhya-Pradesh-NGO-sends-minor-girls-to-boys-hostel-as-punishment/articleshow/17961483.cms

Sunday, April 8, 2012

ಮರೀಚಿಕೆಯ ಬೆನ್ನೇರಿ ..

Photo courtesy : Internet

ಅಶೋಕ ಸ್ಥಾರಣ ಸ್ಥಾರ ಶೂರಃ ಶೂರಿರ್ಜನೇಶ್ವರಃ 
ಅನುಕೂಲಃ ಶತಾವರ್ತ ಪದ್ಮೀ ಪದ್ಮ ನಿಭೇಕ್ಷಣಃ|| ||
ತಾರಹ ನೆಂಬ ವಿಷ್ಣುವಿನ ಇನ್ನೊಂದು ನಾಮ ಮನಸ್ಸಿನಲ್ಲೇ ಧ್ಯಾನಿಸುತ್ತಾ  ಒಂದು ವಿಶೇಷ ಸ್ಥೈರ್ಯ ಬಂದ ಹಾಗೆನಿಸಿತು. ಹೌದು ಅವನೇ ಈ ಮಹಾಸಾಗರ ದಾಟುವ ಶಕ್ತಿ ನೀಡುವವ. ಅದೆಷ್ಟೇ ಬಿರುಗಾಳಿ ಏಳಲಿ, ರಾಕ್ಷಸ ಗಾತ್ರದ ಅಲೆ ಇರಲಿ, ಅವನೆದುರು ಅದು ತ್ರಣಮಾತ್ರ. ನನ್ನ ನಿರ್ಧಾರ ನನಗೆ ಸರಿಯೆನಿಸಿತ್ತು. ಇಷ್ಟು ಚಿಕ್ಕ ಊರಿನಲ್ಲಿ, ಇಂಥ ಮನೆಯಲ್ಲಿ ಹುಟ್ಟಿ – ಬೆಳೆದು ಇಂತಹ ನಿರ್ಧಾರಕ್ಕೆ ಬರಲು ಧೈರ್ಯ ಕೊಟ್ಟವನೇ ನಾನು ಚಿಕ್ಕಂದಿನಿಂದಲೂ ನಂಬಿ ನಿಂತ ಮಹಾವಿಷ್ಣು...
“ಏನೇ ಮೂಕಾಂಬಿಕೆ, ನಿನ್ನಪ್ಪ ಶ್ರಿಂಗೇರಿಯ ಶ್ರೀಪಾದರ ಮಗನಿಗೇ ನಿನ್ನ ಕೊಡಬೇಕೆಂದು ಇದ್ದಾನಂತೆ!! ಗಂಡನ ಮನೆ ಹೋಗೋ ತಯಾರಿ ಹೇಗಿದ್ಯೇ.. ಬೆಂಗಳೂರಿಗೆ ಹೋಗ್ತಿಯೇನೆ ಸುಬ್ಬೀ ” ಎಂದು ಬೊಚ್ಚು ಬಾಯಿಮಾಡಿ ನನ್ನನ್ನು ಕೀಟಲೆ ಮಾಡುವ ವೆಂಕಟೇಶ ಶಾಸ್ತ್ರಿಯವರಿಗೆ ಏನು ಹೇಳಬೇಕೋ ತೋಚದೆ ಕಲ್ಯಾಣಿಯಿಂದ ನೀರು ತರುವೆ ಎಂದು ನೆಪಮಾಡಿ ಓಡುವ ಭರದಲ್ಲಿ ಧೊಪ್ಪೆಂದು ಬಿದ್ದು ಕೂರುವ ಜಾಗವೆಲ್ಲ ನೋವಾಗಿ, ನಗು, ಅಳು, ನಾಚಿಕೆ ತಡೆಯಲಾರದೆ ಓಡಿದ ಪರಿ ನೆನೆದು ಈಗಲೂ ನಗು ಬರುತ್ತದೆ. ನೀರಿಗಾಗಿ ನನ್ನೊಡನೆ ಬರುತ್ತಿದ್ದ ಅಮಾವಾಸ್ಯೆ ಮುಖದ ಪೂರ್ಣಿಮಳಿಗೂ ಅಚ್ಚರಿ, ಅಸೂಯೆ ಮೂಡಿ “ಹೌದೇನೇ! ನಂಗೆ ಹೇಳಲೇ ಇಲ್ಲಾ” ಎಂದು ಸೊಲ್ಲುತ್ತಾ ಆದಷ್ಟೂ ತನ್ನ ಅಸೂಯೆಯನ್ನು ಮರೆಮಾಚುತ್ತಾ ಹುಸಿ ಮುನಿಸು ತೋರಿಸಲು ಯತ್ನಿಸಿದಾಗೆ ಅದೆಷ್ಟು ಜಂಭ ಪಟ್ಟಿದ್ದೆ. ಮತ್ತಿನ್ನೇನು, ಬಿ.ಎ ಫಸ್ಟ್ ಕ್ಲಾಸ್, ನೋಡಲೂ ಸುಂದರವಾಗಿರುವ ನನ್ನಂಥ ಹುಡುಗಿಯ ಕೈ ಹಿಡಿಯಲು ‘ಅವನೂ’ ಛೀ ಅವನಲ್ಲ “ಅವರೂ” ಪುಣ್ಯ ಮಾಡಿರಬೇಕಲ್ಲವೇ. ಇನ್ನು ಹತ್ತನೇ ಓದಿರುವ ಕರಿ ಮುಖದ ಪೂರ್ಣಿಮಳಿಗೆ ಇನ್ನೆಂಥ ಗಂಡು ಸಿಗುವುದು ಸಾಧ್ಯ. ಮದುವೆಯ ದಿನವಂತೂ ನನ್ನ ಕಡೆ ಪದೇಪದೇ ನೋಡಿ ಮೆಚ್ಚುಗೆಯ ದೃಷ್ಟಿ ಬೀರುವ ಅವರನ್ನು ನೋಡಿ ಇಂಥ ಸುದ್ರೂಪ ಸುಂದರಾಂಗನ ಮಡದಿ ನಾನೇ ಎಂದು ಬೀಗಿದೆ.
 ಕೃಷ್ಣವೇಣಿ ಗೌತಮೀನಾಂ ಪಯೋಷ್ನಿ ನರ್ಮದ ಜಲೈ.. ಎಂದು ಕಲಶಕ್ಕೆ ಅಲಂಕಾರ ಮಾಡುತ್ತಾ ಕುಲಿತಿದ್ದಾಗ ಅವರೊಮ್ಮೆ “ದಿಸ್ ಇಸ್ ಅಟ್ಟರ್ ನಾನ್-ಸೆನ್ಸ್, ಏನ್ ವರ್ಷ ಪೂರ್ತಿ ಮಂತ್ರ ಹೇಳ್ಕೊಂಡು .. ಗೆಟ್ ಅ ಲೈಫ್.. ಯಾವ್ದಾದ್ರು ಜಾಬ್ ಸಿಗುತ್ತಾ ನೋಡ್ಬಾರ್ದ ..” ಎಂದು ಹೇಳಿದಾಗ ಒಮ್ಮೆ ದುಃಖ ಒತ್ತರಿಸಿ ಬಂತಾದರೂ ಹೊರಗೆ ದುಡಿಯುವ ಗಂಡಸಿಗೆ ಮನೆಯಲ್ಲಿ ನನ್ನಂಥ ಗೊಡ್ಡು ಸಂಪ್ರದಾಯದ ಹೆಂಡತಿ ಸಿಕ್ಕಳೆಂದು ಬೇಸರವಿರಬಹುದು ಎಂದು ಟೈಟನ್ ಕಂಪೆನಿಯಲ್ಲಿ ಡಾಟಾ ಎಂಟ್ರಿ ಕೆಲಸಕ್ಕೆ ಸೇರಿಕೊಂಡೆ. ಅಂತಹ ಅಪರೂಪವಾದ ಕೆಲಸವೇನು ಆಗಿರದಿದ್ದರೂ ನನ್ನ ಸ್ವಂತ ಖರ್ಚಿಗೆ ಸಾಕಾಗುವಷ್ಟು ಸಂಬಳ ಕೊಡುತ್ತಿತ್ತು, ಮತ್ತೆ ಮನೆಯಿಂದ ಸ್ವಲ್ಪ ದೂರವಾಗಿ ನಾನು ಸಹ ಹೊರಗಿನ ಪ್ರಪಂಚ ನೋಡಲು ಸಹಾಯ ಮಾಡಿತು. ಮೊದಮೊದಲು ಸರಿಯಾದ ಬಸ್ ಹಿಡಿದು ಹೋಗುವುದು ಭಯವಾದರೂ ಕಾಲಕ್ರಮೇಣ ಅದು ಸಹ ರೂಢಿಯಾಗ ತೊಡಗಿತು.
ಇಂಥ ಕಂಪೆನಿಯಲ್ಲಿ ಕೆಲಸ ಮಾಡಲು ಅಲ್ಲಿ ಕೆಲಸ ನಿರ್ವಹಿಸುವ ಬೇರೆ ಹೆಣ್ಣುಮಕ್ಕಳಂತೆ ನಾನು ಹೊಸ –ಹೊಸ ವಿನ್ಯಾಸದ ಬಟ್ಟೆ ಬರೆ ತೊಟ್ಟುಕೊಳ್ಳುವ ಮನಸ್ಸಾಗಿ ಜೊತೆಗೆ ಕೆಲಸ ಮಾಡುವ ಹರಿಣಿಯ ಜೊತೆ ಮಲ್ಲೇಶ್ವರಂನಲ್ಲಿ ಸೀರೆ, ಚೂಡಿದಾರ್ ಎಲ್ಲ ಹೊಸದಾಗಿ ಕೊಳ್ಳತೊಡಗಿದೆ. ಇದೆಲ್ಲ ಗಮನಿಸುತ್ತಿದ್ದ ಇವರು ಇತ್ತೀಚಿಗೆ ಹೋಗಿ ಬರುವಾಗಲೆಲ್ಲ “ಏನು ಸಮಾಚಾರ, ಇತ್ತಲಿಂದೀಚೆಗೆ ಭಾರೀ ಬದಲಾವಣೆಗಳಾಗುತ್ತಿವೆ .. ನಿಮ್ಮ ಕಂಪೆನಿ ಬಾಸ್ ಇನ್ನೊಂದು ಮದುವೆಯಾಗೋ ಯೋಚನೆ ಮಾಡ್ತಾ ಇದ್ದಾನೇನೋ” ಎಂದು ಮೂದಲಿಸಿದಾಗ ಆದ ಅವಮಾನ ಮತ್ತು ದುಃಖ ಸೇರಿಸಿ “ಸುಮ್ಮನೆ ಮನೇಲಿ ಇದ್ದವಳನ್ನ ಆಫೀಸಿಗೆ ಹೋಗು ಅಂದಿರಿ.. ಈಗ ಏನೆಲ್ಲಾ ಅಸಂಬದ್ಧ ಮಾತಾಡ್ತೀರಿ ಛೀ !!!” ಎಂದು ಅತ್ತಿದ್ದೆ. ಆಗ  ನನ್ನನ್ನು ರಮಿಸುತ್ತ “ತಮಾಷೆಗೆ ಕಣೆ !” ಎಂದು ನನ್ನನ್ನು ಕೆಲಸ ಬಿಡದಂತೆ ಪ್ರೇರೇಪಿಸಿದರು.
ಆಗೊಂದು ದಿನ “ನನಗೆ ಇನ್ನು ಮುಂದೆ ಮಧ್ಯಾಹ್ನ ೨ ಗಂಟೆಗೆ ಷಿಫ್ಟ್ ” ಎಂದು ಹೇಳಿ “ಇನ್ನು ಮುಂದೆ ಮಧ್ಯಾಹ್ನದ ಅಡುಗೆ ಮಾಡಿ ಹೋಗು.. ಕೇಳಿಲ್ಲಿ , ಇನ್ನೊಂದು ಜನಕ್ಕೆ ಆಗುವಂತೆ ಸ್ವಲ್ಪ ಜಾಸ್ತಿ ಮಾಡು ನನ್ನ ಕಲೀಗ್ ಒಬ್ರು ದಿನಾ ಊಟಕ್ಕೆ ಬರುತ್ತಾರೆ ” ಎಂದಾಗ ಬೇಸರಿಸದೆ ಅವರು ಹೇಳಿದ ಮಾತು ಪಾಲಿಸುತ್ತಿದ್ದೆ. ಹೀಗೆ ಪ್ರತಿ ದಿನ ರಾತ್ರಿ ತುಂಬಾ ತಡವಾಗಿ ಬರುತ್ತಿದ್ದರಿಂದ, ಮತ್ತು ನಾನು ಬೇಗನೆ ಎದ್ದು ಎಲ್ಲ ತಯಾರಿ ಮಾಡಬೇಕಾದ್ದರಿಂದ ವಾರಗಟ್ಟಲೇ ಇವರ ತಲೆಯೇ ಕಾಣದಂತಾಗುತ್ತಿತ್ತು. ಮದುವೆಯಾಗಿ ವರ್ಷಕ್ಕೂ ಮೊದಲೇ ಇಂಥ ಬೇಸರಿಕೆ ನನ್ನ ಮೇಲೆ ಯಾಕೆಂದೇ ತಿಳಿಯದಾಯಿತು.
ಅಮೊಘಃ ಪುಂಡರೀಕಾಕ್ಷ ವ್ರಷಕರ್ಮ ವ್ರಷಾಕೃತಿಹಿ....
ಬೇರೆ ಬೇರೆ ಅವತಾರಗಳಲ್ಲಿ ಮತ್ತೆ ಬರುತ್ತಾನೆಂದ ಭಗವಂತ ನನ್ನ ಉದ್ಹ್ಧರಿಸಲು ಬಂದೆ ಬರುತ್ತಾನೆ ಎಂದು ಮನಸ್ಸಿಗೆ ಧೈರ್ಯ ತಂದುಕೊಂಡೆ. ಆದಷ್ಟೂ ಅವರ ಇಚ್ಛೆಗೇ ತಕ್ಕಂತೆ ಉಡುವುದು, ತೊಡುವುದು , ಅಡುಗೆ ಮಾಡಿ ಬಡಿಸುವುದು ಎಲ್ಲಾ ಮಾಡಿದೆ. ಸಣ್ಣ ಊರಿನವಳಾದ ನಾನಾದರೂ ಇಲ್ಲಿನ ಬೆಡಗಿಯರಂತೆ ಪತಿಯನ್ನು ಹತ್ತಿರ ಮಾಡಿಕೊಳ್ಳಲು ಉಪಯ ಹೇಗೆ ಹೂಡುವುದು? ಆಫೀಸಿನ ಹರಿಣಿ “ ರಾತ್ರಿಯೆಲ್ಲಾ ನಿದ್ದೇನೆ ಇಲ್ವೆ ಅಂಬಿಕಾ” ಎಂದು ಕಣ್ಣು ಮಿಟುಕಿಸಿ ನನಗೆ ಹೇಳುವಾಗ ಮದುವೆಯಾಗಿ ಆರು ವರ್ಷಕ್ಕೂ ಇಷ್ಟು ಅನ್ಯೋನ್ಯದಿಂದ ಇರುವ ಇವರನ್ನು ಕಂಡು ಮನಸ್ಸು ಕುರುಬಿತು.
ಅಂದು ಕೃಷ್ಣಾಷ್ಟಮಿ ದಿನ ಹರಿಣಿ ಅವರ ಮನೆಗೆ ಒತ್ತಾಯಿಸಿ ಕರೆದುಕೊಂಡು ಹೋದಳು, ರಾತ್ರಿ ಎಂಟಾದದ್ದು ನನಗೆ ಹೊಳೆಯಲೇ ಇಲ್ಲ. ಅವರ ಮನೆ ಸುತ್ತ ತೋಟ, ಬಾಳೆಮರ , ಅವರ ನಾಯಿ ಮಿಂಕು ಎಲ್ಲಾ ನೋಡುತ್ತಾ, ಬೆಂಗಳೂರಿನಲ್ಲಿ ಇಷ್ಟೊಂದು ದೊಡ್ಡ ಮನೆ, ಕೈತೋಟ ಎಲ್ಲಾ ಸಂಭಾಳಿಸುವುದು ಎಷ್ಟು ಕಷ್ಟ ಎಂದು ಯೋಚಿಸುತ್ತಿರುವಾಗಲೇ ಅವರ ಮನೆ ಗೇಟ್ ತೆರೆದ ಶಬ್ಧವಾಯಿತು. ಅರೆ! ಇವರೇನು ಇಲ್ಲಿ ಎಂದು ಉದ್ಗರಿಸಲು, ಹತ್ತಿರ ಬರುತ್ತಲೇ ಫಟೀರ್ ಎಂದು ನನ್ನ ಎಡಗೆನ್ನೆಯ ಮೇಲೆ ಒಂದು ಬಾರಿಸಿದರು. ಹರಿಣಿ “ಸ್ಟಾಪ್ ಇಟ್ ” ಎಂದು ಚೀತ್ಕರಿಸುತ್ತಿರುವುದನ್ನು ಲಕ್ಷಿಸದೆ “ಸುಮ್ನೆ ಆಫಿಸಿಂದ ಮನೆಗ್ ಬರಕ್ಕೇನೆ ರೋಗ.. ಹಡಬಿ ಸುತ್ತುತಾಳೆ  !”  ಎಂದು ನನ್ನನ್ನು ದರದರನೆ ಎಳೆದುಕೊಂಡು ಹೋದರು.
ಅವಮಾನ ಮತ್ತು ಜೋರಾಗಿ ಬಿದ್ದ ಏಟಿಗೆ ಪೈಪೋಟಿ ಎಂಬಂತೆ ಜ್ವರ ನನ್ನ ತಲೆಯಿಂದ ಅಂಗುಷ್ಠದವರೆಗೆ ಆವರಿಸಿತ್ತು. ಕೆನ್ನೆ ಮೇಲೆ ನೀಲಿಗಟ್ಟಿದ ಎರಡು ಬೆರಳುಗಳ ಚಿಹ್ನೆ ಅಪ್ಯಾಯಮಾನವಾಗಿತ್ತು. ಹರಿಣಿ ಮತ್ತೆಂದು ನನ್ನನ್ನು ಮನೆಗೆ ಕರಿಯುವುದಿಲ್ಲ ಎಂದೆನಿಸಿತು. ಆಫೀಸಿಗೆ ಹೋಗಲು ಸಾಧ್ಯವೇ ಇಲ್ಲ ಇನ್ನು ಮುಂದೆ ಎಂದುಕೊಂಡೆ. ಅಡುಗೆ ಮನೆಗೆ ಧಾವಿಸಿ ಕಾಫಿಯದರು ಕುಡಿಯೋಣ ಎಂದು ಹೋದರೆ, “ಇದೋ ಬಿಸಿ ಕಾಫಿ, ಬೇಗ ಕುಡಿ, ಆಫೀಸಿಗೆ ತಡವಾಗುತ್ತೆ ” ಎಂದು ನಾಟಕೀಯವಾಗಿ ಕೈಗೆ ಬಿಸಿ ಕಾಫಿಯ ಬಟ್ಟಲಿತ್ತರು. ಅವರ ಕೈಯಿಂದ ಇದೇ ಮೊದಲು ನಾನು ಕಾಫಿ ಕಂಡದ್ದು . ಒಮ್ಮೆ ಕಾಫಿಯನ್ನು ಮತ್ತೊಮ್ಮೆ ಅವರನ್ನು ದಿಟ್ಟಿಸಿದೆ. ನನಗೇನೋ ಸರಿಯಿಲ್ಲ ಎಂದೆನಿಸಿತು. ಕಾಫಿ ಹೀರಿ ಹರಿಣಿಯ ಮನೆಗೆ ಸೀದಾ ನಡೆದೆ.
          ರುದ್ರೋ ಬಹುಶಿರಾ ಬಭ್ರುರ್ವಿಶ್ವಯೋನಿಃ ಶುಚಿಶ್ರವಾಃ
ಸ್ವತಹ ಪವಿತ್ರನಾದ ಆ ಭಗವಂತ, ನಮ್ಮನ್ನು ಪವಿತ್ರನನ್ನಾಗಿಸುವನು. ಹರಿಣಿ ನನ್ನನ್ನು ನೋಡಿ ಒಂದು ಮಾತು ಆಡದೆ ಐಸ್ ಪ್ಯಾಕ್ ತಂದು ಕೊಟ್ಟಳು. ಅವಳ ಹತ್ತಿರ ಮಾತನಾಡಿ ಸ್ವಲ್ಪ ಸಮಾಧಾನವಯಿತಾದರು ಮುಂದೇನು ಎಂದು ತೋಚಲಿಲ್ಲ’. ಹರಿಣಿ ನನ್ನ ಕೈಗೊಂದು ವಿಸಿಟಿಂಗ್ ಕಾರ್ಡ್ ಕೊಟ್ಟು ನನ್ನ ಕೈಯನ್ನೊಮ್ಮೆ ಒತ್ತಿ ಸಾಂತ್ವನದ ನೋಟ ಬೀರಿದಳು.   ನಾನು ಎದ್ದು ನಿಂತೆ. ಹಿಂದೆ ಹರಿಣಿ. ಇಬ್ಬರೂ ಮತ್ತೆ ಮನೆಯತ್ತ ಹೊರಟೆವು.
ನನ್ನ ಸಂಶಯ ಸುಳ್ಳಾಗಲೆಂದು ಆ ಗರುಢವಾಹನನನ್ನು ದೀನಳಾಗಿ ಬೇಡಿದೆ. ನನ್ನ ಕೈ ಬಿಡಬೇಡಿರೆಂದು – ಅನ್ಯಥಾ ಶರಣಂ ನಾಸ್ತಿ ಎಂಬ ಭಾವದಿಂದ ಕೈಜೋಡಿಸಿದೆ. ಬಾಗಿಲು ತಟ್ಟುತ್ತಲೇ ಅವರ ಮುಖದ ಮೇಲೆ ಸುಖದ ಚಿರಾಯು ನಗೆ ನೋಡಿ ನನಗೆ ಮಾತ್ಸರ್ಯವಾಯಿತು. ಮತ್ತೊಂದು ಕ್ಷಣದಲ್ಲೇ ಅದು ಮಾಯವಾಗಿ ನನ್ನ ಕಣ್ಣು ನಾನೇ ನಂಬದಾಯಿತು.  ಮದುವೆಗೆ ಬಳುವಳಿಯಾಗಿ ಬಂದ ಹಲವಾರು ವಸ್ತುಗಳೊಡನೆ ನನ್ನಮ್ಮ ತೊಡಿಸಿದ್ದ, ಮತ್ತೆ ಇವರು ನನ್ನಿಂದ ತೆಗೆದುಕೊಂಡು ಲಾಕರ್ನಲ್ಲಿ ಇಟ್ಟಿರುತ್ತೇನೆಂದಿದ್ದ ಅಡ್ಡಿಗೆ ಸರ ಅಮಾವಾಸ್ಯೆ ಮುಖದ, ಅರೆಬರೆ ಅಂಗ ಪ್ರದರ್ಶಿಸುತ್ತ ನಿಂತಿದ್ದ ಪೂರ್ಣಿಮಾಳ ಗಳಸಿರಿಯಾಗಿದ್ದು ನೋಡಿ ಅಲ್ಲೇ ಮೂರ್ಚೆಹೋದೆ.
 ಮೈಸೂರಿನ ಬಾಲ್ಯದ ಮನೆಗೆ ವಾಪಸ್ಸು ಹಿಂದಿರುಗಿ ನನ್ನ ಕೋಣೆಯೇ ನನ್ನ ಬೋಧಿ ವೃಕ್ಷದಂತೆ ನನ್ನನ್ನು ಶಕ್ತಳಾಗಿಸಿದ್ದನ್ನು ನೆನೆದು ಆ ಪರಮಾತ್ಮನಿಗೆ ಕೈಜೋಡಿಸಿದೆ. ಅಪ್ಪ ಅಮ್ಮ ನನ್ನನ್ನು ಅರಿತು, ಸಮಾಜವನ್ನು  ಮೂವರೂ ಸೇರಿ ಎದುರಿಸುವ ಧೈರ್ಯ ತುಂಬಿದರು. ಕೊನೆವರೆಗೂ ಕಾಲ್ಗಸವಾಗಿ ಶೋಷಣೆಗೆ ಒಳಗಾಗುವುದು ಬೇಡವೆಂದು ನನ್ನನ್ನು ಸಂತೈಸಿದರು. ಏಕಾಂಗಿತನ ಅಷ್ಟು ಭಯಾನಕವಾಗಿ ಕಾಣದೆ ಅಪ್ಪ ಅಮ್ಮನ ಜೊತೆ ಅವರ ಕೊನೆಗಾಲಕ್ಕೆ ಸಹಾಯವಾಗಿ ಇರಲು ಪ್ರೇರೇಪಿಸಿತು. ನನ್ನ ನಿರ್ಧಾರ ಸರಿ ಎಂದೆನಿಸಿತು.
ಹರಿಣಿ ಕೊಟ್ಟ ವಿಸಿಟಿಂಗ್ ಕಾರ್ಡ್ ಮೇಲೆ ಕಣ್ಣಾಡಿಸುತ್ತಿದ್ದಾಗಲೇ ಹೊರಗೆ “ಮಿಸೆಜ್ ಮೂಕಂಬಿಕಾ.” ಎಂದು ಬೆಂಗಳೂರಿನ ಪ್ರಖ್ಯಾತ ಡೈವರ್ಸ್ ಲಾಯರ್ ಮಿಸೆಜ್ ವೀಣಾ ಪುರಂದರಿ ಕರೆದದ್ದು ಕೇಳಿಸಿತು.



Sunday, September 18, 2011

ನಿನ್ನ ಪ್ರೇಮದ ಪರಿಯ

ಒಂದೊಂದೇ ಅಕ್ಷರ ಕೂಡಿಸಿ ಕೂಡಿಸಿ ಬರೆಯೋಕೆ ಕಷ್ಟವಾಗ್ತಿರೋದು ನಿಜ. ಕಳೆದೆರಡು ವರ್ಷಗಳಿಂದ ಕಣ್ಣು ದೃಷ್ಟಿಯೇ ಮಂದವಾಗಿದೆ. ಕಪ್ಪು ಕಪ್ಪಾಗಿ ಏನೇನೋ ಕಾಣಿಸುವುದು ಬಿಳಿ ಹಾಳೆ ನೋಡುವಾಗಲೆಲ್ಲ..  ಆದರೂ ಘಳಿಗೆಗೊಮ್ಮೆ ಎಂಬಂತೆ ಎದ್ದು ಕೂತು ಬರಹ ಮುಗಿಸುತ್ತೇನೆ ಎಂದು ನಂಬಿಕೆ. ನೀನೋ ನನಗೇನೋ ಹುಚ್ಚು ಅಂತ ತಿಳಿದುಕೊಂಡಿದ್ದೀಯ ಹೌದೋ? ಹೌದೆ ನಾನು ಹುಚ್ಚಾನೆ ಅನ್ನು. ಒಂಥರಾ ಹುಚ್ಚೆ ಇದು. ಇಂದಿನದಲ್ಲ ಈ ಪರಿ, ಅಂದು ನೀ ಫೇಲಾದಾಗ ಕ್ಲಾಸಿನ ಮುಂದೆ ಕೂತು ಸೊರ ಸೊರ ಎಂದು ಅಳುತ್ತಿದ್ದೆಯಲ್ಲ. ಅಂದೇ ಪ್ರಾರಂಭವಾಯಿತು. ನಿನಗೇನೋ ದುಃಖ ಆದರೆ ನನಗೆ ನಿಜವಾಗು ಖುಷಿಯೆನಿಸಿತ್ತು. ಇಲ್ಲವಾದರೆ ನೀನೆಲ್ಲಿ ನನ್ನ ಎದೆಗೊರಗಿ ಅಳುತ್ತಿದ್ದೆ? ನಿನ್ನ ಗಲ್ಲಗಳೆಲ್ಲ ಒದ್ದೆ ಮುದ್ದೆಯಾಗಿ ಮೆತ್ತಗೆ ನನ್ನ ಬಟ್ಟೆಗಳನೆಲ್ಲ ನೆನೆಸುತ್ತಿರುವಾಗ ನನಗೋ ಎಂತಹುದೋ ದಿವ್ಯ ಅನುಭವ. ನೀ ಅಸಹ್ಯವಾಗಿ ಸೊರ ಸೊರ ಎನ್ನುತ್ತ ಒಮ್ಮೆ ಕಣ್ಣನ್ನೂ ಮತ್ತೊಮ್ಮೆ ಮೂಗನ್ನೂ ಒರೆಸಿಕೊಳ್ಳುವಾಗ ನನ್ನ ನೋಡಬೇಕಿತ್ತು ನೀನು..
ನಿನಗಿಂತ ಒಂದೆರಡು ವಿಷಯಗಳಲ್ಲಿ ನಾನೂ ಫೇಲಾಗಿದ್ದೆ ಅಂತ ಯಾರು ನಂಬಲಾರರು. ಹೀಗೇಕೆ ಅಂತ ಒಮ್ಮೆಯೂ ಅನಿಸಲಿಲ್ಲ. ಅಂದು ನಿನ್ನ ಸೋಕಿ ಆದ ರಮ್ಯ ಅನುಭವ ಇಂದೂ ನೆನೆದರೆ ಈ ಬೊಚ್ಚು ಬಾಯಲ್ಲೂ ನಗೆಯಾಡುತ್ತದೆ.
ಅಂದು ನಿನ್ನ ದುಃಖದಲ್ಲಿ ಪಾಲಾಗದೆ ಅದನ್ನ ಅಸ್ವಾದಿಸಿದ್ದಕ್ಕೆ ಕ್ಷಮಿಸುವೆಯಲ್ಲ? ಕ್ಷಮಿಸಲೇ ಬೇಕು. ನೀ ಕೊಟ್ಟ ದುಖವೇನು ಕಮ್ಮಿಯೇ? ನನ್ನನ್ನುರಿಸಲೆಂದೇ ನನ್ನೆದುರಿಗೆ ನನ್ನ ಮಿತ್ರ ಶಾಂತಾರಾಮನ ಹತ್ತಿರ ಮಾತ್ರ ಮಾತನಾಡುತ್ತಿದ್ದೆ? ಕಳ್ಳಿ.
ಮೊನ್ನೆ ಪಾರ್ಕಿನಲ್ಲೂ ಇದೆ ವಿಷಯ ಹೇಳುತ್ತಿದ್ದ. ಪಾಪಿ. ಅವನಿಗದೇ ಸಾಕು ಜೀವನಕ್ಕೆ. ನೀನೇ ಅವನ ಹತ್ತಿರ ನಕ್ಕು ಮಾತಾಡಿಸಿದ ಮೊದಲ ಹಾಗು ಕೊನೆಯ ಹುಡುಗಿ ಅಲ್ಲ ಮುದುಕಿಯಿರಬೇಕು. ನೀನೇನೂ ಅಂತ ಅಪರೂಪ ಸುಂದರಿಯಲ್ಲ.
ಹುಣಸೆ  ಕೊರಡಿಗೆ ಬಿಳಿ ಬಣ್ಣ ಬಳಿದು ಲಂಗ ದಾವಣಿ ಸುತ್ತಿದ ಹಾಗೇ ಇದ್ದೆ, ಮದುವೆಯಾಗಿ ಎರಡೇ ವರ್ಷಗಳಲ್ಲಿ ಬೂದುಗುಮ್ಬಳಕಾಯಿಯ ಹಾಗೇ ಬಿರಿದೆಯಲ್ಲವೇ? ಹಾಗೆ ನೋಡಬೇಕೆಂದರೆ ನನ್ನಂಥ ಸ್ಪುರದ್ರೂಪಿ ಗಂಡು ನಿನಗೆ
ಸಿಗುತ್ತಿದನೇ? ನೋಡಲು ತರಗೆಲೆಯಂತೆ ಇದ್ದರೂ ,  ಆ ಎರಡು ಕಂಗಳಲಿ ಹೊರದುತ್ತಿದ್ದ ಕನಸಿನ ಬಾಣ ಬಿರುಸುಗಳು ನನ್ನನ್ನು ಕುರುಡು ಮಾಡಿತು. ಕುರುಡಾಗೇ ಇರುವೆ. ಹೆಣ್ಣಿನ ಕಣ್ಣಲ್ಲಿನ ಆಸೆ ಅಳೆಯುವಂಥ ಸಾಧನೆ ಯಾರೂ ಇನ್ನೂ ಮಾಡಿರಲಿಕ್ಕಿಲ್ಲ! ಆ ದೇವಾದಿದೇವರೂ ಸೋತು ಹೋದರಂತೆ ಪ್ರಯತ್ನಿಸಿ. ಅದರಿಂದಲೇ ತಾನೇ ಸೃಷ್ಟಿ, ಜಗತ್ತು ನಡೆಯುತ್ತಿರುವುದು. ಆ ಕಂಗಳ ಮಾಯೆ ಪ್ರೀತಿಯಾಗಿ, ಮಾತೆಯಾಗಿ, ಮಮತೆಯಾಗಿ ಎಲ್ಲರನ್ನು ಆಕ್ರಮಿಸಿದೆ? ನಾ ಹೇಗೆ
ಎಲ್ಲವುದನ್ನು ಮರೆತು ನಿನ್ನ ಸಾನಿಧ್ಯದಲ್ಲಿ ಮೂಕನಾಗಿ, ಮಗುವಾಗಿ, ಮಾಯವಾಗುತ್ತಿದ್ದೆ! ... ದಿನಗಟ್ಟಲೆ ಹಸಿವು ನಿದ್ರೆಯಿಲ್ಲದೆ ತಪಸ್ಸಿನ ತರಹ ನಿನ್ನ ದಾರಿ ಕಾಯುತ್ತಿರಲಿಲ್ಲವೇ? ಪ್ರೇಕ್ಷಕರಿಗೆ ಇದು ಅತಿಶಯವಾದರೆ ಆಗಲಿ, ಆದರೆ ನಿಜವಾಗಿ ಪ್ರೀತಿಸಿದವರಿಗೆ ಇದರ ಅನುಭವವಿರುತ್ತೆ. ಹೀಗೇ ಪ್ರೇಯಸಿಯ ಕಂಗಳಲ್ಲಿ ಲೋಕ ಮರೆತವರೆಷ್ಟು ಜನ!!! ಅದೇ ಕಣ್ಣುಗಳು ಊದಿ ಕೆಂಪಗೆ ಮಾಡಿಕೊಂಡು ಮದುವೆಯ ಫೋಟೋಗಳಲ್ಲಿ ಹೇಗೆ ಚಿಂಪಾಂಜಿಯ ಹಾಗೆ ಕಾಣುತ್ತಿದ್ದೆ? ಬಾಸಿಂಗ ಸೊಟ್ಟಗೆ ತಿರುಗಿ, ಬಳಿದ ಕಣ್ಕಪ್ಪು ಮೂಗಿಗೆಲ್ಲಾ ಸೋರಿ, ಕುಂಕುಮ ಅರಿಶಿನ ಮೆತ್ತಿದ್ದ ಮೂತಿ ನೆನೆದರೆ .. ಅತ್ತೂ ಅತ್ತೂ ಸುಮ್ಮನಾದೆ ಆಮೇಲೆ. ನನ್ನನ್ನು ಪಂಚೆ ಶಲ್ಯದಲ್ಲಿ ನೋಡಿ ಭಯವಾಯಿತೋ ಇಲ್ಲಾ ಮದುವೆಗೆ ಬಂದ ಶಾಂತಾರಾಮನ ಮೇಲೆ ಮನಸ್ಸು ಬಂತೋ?!! ಶಾಂತರಾಮನ ಜೊತೆ ಮದುವೆ ಆಗಿದ್ದರೆ ಚಂದ ಅನಿಸಿತ್ತೆ?? ಅದಕ್ಕೆ ಏನೋ ಅವನಿನ್ನೂ ಮಾಡುವೆ ಆಗದೆ ಇರುವುದು. ಅಂತು ನನ್ನ ವರಿಸಿ ಬಂದೆಯಲ್ಲ ಶಾರದೆ!!! ಅಷ್ಟು ಸಾಧಾರಣ ಹುಡುಗಿ, ನೋಡಲೂ ಸುಮಾರು ನನ್ನನ್ನು ಹೀಗೆ ಕಪಿಮುಷ್ಠಿಯಲ್ಲಿ ಹಿಡಿದುಕೊಂಡಿರಲು ಹೇಗೆ ಸಾಧ್ಯ. ನನ್ನ ಅರ್ಧದಷ್ಟು ಇಲ್ಲ, ಆದರು ಅದೆಂಥ ಶಕ್ತಿ? ನೀ ಬೇಡ ಎಂದ ಒಂದೇ ಒಂದು ಕೆಲಸ ನಾ ಮಾಡಿದೇನೆ? ನನ್ನ ಪ್ರೆಮವೃಕ್ಷ ನಿನ್ನಲ್ಲಿ ಬೆಳೆಯುತ್ತಿದ್ದಾಗ ಹೇಗೆ ನಳನಳಿಸಿದೇ? ಅದಕ್ಕೆ ನಾನೇ ಕಾರಣ ಅಲ್ಲವೇ? ನೀ ಬೆವೆತು ತೊಪ್ಪೆಯಾಗಿ ಒಂದೊಂದು ಮೆಟ್ಟಿಲೇರುವಾಗ ನಿನ್ನ ಹೊತ್ತುಕೊಳ್ಳಬೇಕು ಎನಿಸ್ಸಿತ್ತು ನಿಜ ಆದರೆ ಮೊದಲಿನಂತೆ ಸಣ್ಣಗೆ ಇದ್ದರೆ ಎತ್ತಿಕೊಳುತ್ತಿದ್ದೆನೇನೋ.. ಆ ಸಮಯದಲ್ಲಿ ಕರೆಂಟ್ ಹೋದರೂ  ನನ್ನ ಮೇಲೆ ರೇಗುವಾಗ , ಮಧ್ಯ ರಾತ್ರಿ ಮೂರು ನಾಲ್ಕು ಗಂಟೆಗೂ ನನ್ನ ಕೈಲಿ ಹುಣಿಸೆ ಹಣ್ಣು ಕುಟ್ಟಿಸಿಕೊಂಡು ತಿನ್ನುವಾಗ, ಗ್ಯಾಸ್ ಆಗಿ ಹೊಟ್ಟೆ ಚುಳಕ್ಕೆಂದರೂ ನೋವು ಎಂದು ಇಡಿ ರಾತ್ರಿ ಹೆದರಿ ಬಸವಳಿದಾಗ ನಿನ್ನ ಮೇಲೆ ಮೋಹ ಮತ್ತೆ ಹೆಚ್ಚಾಗುತ್ತಿತ್ತು.  ನನ್ನ ಕೈಗೊಂದು ದೀಪಾವಳಿ ಬೋನಸ್ನಂತೆ ಕೊಟ್ಟೆಯಲ್ಲ ಪುಟ್ಟ ಮಿಂಚುಮರಿ. ಅಬ್ಬ !!! ಅದಂತೂ ಈಗಲು ನನ್ನ ರೋಮ ರೋಮಗಳನ್ನು ನಿಮಿರಿಸುತ್ತದೆ. ಅದೇ ಬಿಳಿ ಬೊಂಬೆ. ಕಣ್ಣು ಮೂಗು ಎಲ್ಲ ನಿಂದೆ. ನನ್ನ ಮೇಲೆ ಹಗೆ ಇತ್ತೋ ಏನೋ. ನನ್ನ ರೂಪ ಒಂಚೂರು ಬರಲಿಲ್ಲ ಅದಕ್ಕೆ. ನೀನೆ ನಿಮ್ಮಮ್ಮನ ಜೊತೆ ಸೇರಿ ಮಾಡಿರಬೇಕು ಈ ಪಿತೂರಿ. ಅವಳಿನ್ನು ದೊಡ್ಡ ಚೋರಿ. ಹುಟ್ಟುತ್ತಲೇ ನನ್ನ ಕಿರು ಬೆರಳನ್ನ ಹಿಡಿದು ಬಾಯಿಗೆ ಹಾಕಿಕೊಂಡು ನನ್ನನ್ನು ಅರ್ಧ ಗಾಳಿ ಹೋದ ಬಲೂನಿನ ಹಾಗೇ ಮೆತ್ತಗೆ ಮಾಡಿ ಬಿಟ್ಟಳು. ನೀನು ನೀನೆ ಹೇಳಿಕೊಟ್ಟಿರಬೇಕು ಇದೆಲ್ಲ. ಅದಕ್ಕೆ ಹಾಲೂಡಿಸುವಾಗ ನಿನ್ನ ಮುಖದಲ್ಲಾದ ಹೊನಲು ನೋಡಿ ನನಗು ತಾಯಾಗಬೇಕೆನಿಸಿತ್ತು. ನಿನ್ನನ್ನು ನೋಡಿ ನನಗೆಕಿಲ್ಲ ಇಂಥ ಭಾಗ್ಯ ಅನಿಸಿತ್ತು.
ಈಗಲೂ ಮಕ್ಕಳು ನಿನ್ನ ಹತ್ತಿರ ಬರುವಾಗ ನೀ ತೋರಿಸುವ ಮಮತೆ ನನನ್ನು ಮತ್ತೆ ನಿನ್ನತ್ತ ಸೆಳೆಯುತ್ತದೆ. ಇಷ್ಟು ವರ್ಷಗಳಲ್ಲಿ ಏನೂ ಬದಲಾಗಿಲ್ಲ ಎಂದೆನಿಸುತ್ತದೆ. ಅಂದು ಕಂಡ ಹುಣಿಸೆ ಕೊರಡು ಬೇರು ಬಿಟ್ಟು , ಸಿಹಿಯಾದ ಹಣ್ಣು ಕೊಡುವ ಹೆಮ್ಮರವಾಗಿದೆ. ನನ್ನ ತಲೆ ನೆರೆತು, ಬೊಕ್ಕಾಗಿ, ಹಲ್ಲಿನ ಸೆಟ್ಟು ಆಗಾಗ ಅಡುಗೆ ಮನೆಯ ಕಟ್ಟೆಯ ಮೇಲೆ ಹೊಳೆಯುತ್ತಿದ್ದರೂ ನಿನ್ನ ಒಲುಮೆಯ ಚಿಲುಮೆ ಅಷ್ಟೆ ಸಮೃಧ್ಧವಾಗಿದೆ. ಪ್ರೀತಿ ತೋರಿಸಲು ಸಮಯ - ಸ್ಥಳ ನೋಡಬಾರದು, ಇಂದೇ ನಿನ್ನ ಶಾರದೆಗೆ " ಐ ಲವ್ ಯೂ" ಹೇಳು ಅಂತ ಶಾಂತಾರಾಮ ಮೊನ್ನೆ ಪಾರ್ಕಿನಲ್ಲಿ ಹೇಳಿ ಹೋದ. ಅವನು ಹೇಳಬೇಕೆಂದಿದ್ದನೋ ಏನೋ .. ನಿನ್ನೊಳಿದೆ ನನ್ನ ಮನಸು ಶಾರದೆ.. ನಗೆ ನನ್ನ ಬೊಚ್ಚು ಬಾಯಿ ಸುಂದರಿ......

Saturday, August 20, 2011

ನಾನಂದ್ರೆ ಏನು...

ಎಂಥಾ ರೂಪ ನಂದು ಅಂತೀರಿ! . ಇಂಥದ್ದೊಂದು ನಿಲುಗನ್ನಡಿ ಮನೇಲಿದ್ದಿದ್ದರೆ ಎಷ್ಟು ಅನುಕೂಲ. ಪ್ರತೀದಿನ ತಲೆಯಿಂದ ಅಂಗುಷ್ಠದವರೆಗೂ ನೋಡಿಕೊಳ್ಳಬಹುದು. ಆ ಟೀವಿಯಲ್ಲಿ ಬರೋ ಹೀರೋಗಳನ್ನೆಲ್ಲ ನೀವಾಳಿಸಿ ಎಸಿಯಬೇಕು. ನಾನಂದ್ರೆ ಏನು. ಎಂಥ ಮೈಕಟ್ಟು, ಏನು ಬಣ್ಣ.... ಈ ಪ್ಲೈವುಡ್ ಅಂಗಡೀಲಿಟ್ಟಿರೋ ದೊಡ್ಡ ಕನ್ನಡಿಯೇ ಸರಿ... ಮನೇಲಿರೋ
ಕೈಗನ್ನಡಿಯಲ್ಲಿ ಏನು ನೋಡೋದು ಮಣ್ಣು. ಕೈಯಗಲ ಕನ್ನಡಿ ಅದರಲ್ಲಿ ಅರ್ಧ ಕೂತಿರೋ ಎಣ್ಣೆ-ಕೊಳೆ. ಸರಿಯಾಗಿ ಮೀಸೇನೂ ಕಾಣಿಸಲ್ಲ. ಎಂಥ ಮೀಸೆ ನನ್ನದು ಗೊತ್ತೇ. ಆ  ಚಿನ್ನದಂಗಡಿ ಮಾರವಾಡಿಯ ಹುಡುಗಿ ಪದೇ ಪದೇ ಆಚೆ ಬಂದು ನೋಡಿ ಕಣ್ಣಿಂದಲೇ ಕರೆಯುವಳು.. ನಾನಂದ್ರೆ ಏನು.....


ಹಾಗಂತಾ ಕನ್ನಡಿ ನೋಡೋಕೆಂದೇ ಈ ದಾರಿ ಬರೋನಲ್ಲ ನಾನು. ಅಮ್ಮ ಕೆಲಸಕ್ಕೆ ಹೋದ ಮೇಲೆ ಏನು ಮಾಡೋದ ಅಂತಾನೆ ತಿಳಿಯೋಲ್ಲ. ಮಧ್ಯಾಹ್ನ ಊಟದ ಹೊತ್ತಿನವರೆಗೆ ಹೇಗಾದರೂ ಸಮಯ ಕಳೀಬೇಕಲ್ಲ. ಊಟದ ಹೊತ್ತಿನವರೆಗೂ ಇಲ್ಲೇ ಪಂಚರ್ ಸಾಬಿಯ ಅಂಗಡಿಯಲ್ಲಿ ಹರಟೆ ಹೊಡೆಯುತ್ತಾ ಕೂರೋದು. ಆಗಾಗ್ಗೆ ಬರುವ ಟೀಗಾದ್ರು ಮೋಸವಿಲ್ಲ ಬಿಡಿ.
ಆದ್ರೆ ಪಂಚರ್ ಸಾಬಿಯ ಅಂಗಡಿಗೆ ನೇರವಾಗೇನೋ ಹೋಗಬಹುದು. ಆದ್ರೆ ಅಲ್ಲಿ ಮಧ್ಯೆ ಮಂಗಳೂರು ಪ್ರಾವಿಜನ್ ಸ್ಟೋರ್ ಇದೆಯಲ್ಲ ಅವನ ಹತ್ತಿರ ಮೂರು ಸಾವಿರ ಕೈಸಾಲ ಮಾಡಿ ಆಗಲೇ ಎರಡು ತಿಂಗಳಾಯಿತೇನೋ. ಅವನೂ ಹೋಗಿ ಬರೋವಾಗಲೆಲ್ಲ ದುಡ್ಡು ಕೇಳುತ್ತಾನೆ. ಭಡವ!!! ಮೊನ್ನೆ ತಾನೇ ಅಮ್ಮ ಅವನಂಗಡಿಗೆ ಹೋದಾಗ ಅವಳ ಹತ್ತಿರ ಕೇಳಿದನಂತೆ.
ನಾನೇನು ಊರು ಬಿಟ್ಟು ಹೋಗುತ್ತಿದೀನೇನು. ನಾಳೆಯೋ ನಾಡಿದ್ದೋ ಕೊಟ್ಟರಾಯಿತು ಅಂದರೆ ಅಮ್ಮ ಪ್ರತೀಸಲದಂತೆ ಅಳಲಾರಂಭಿಸಿದಳು. "ನನ್ನ ಟೀಬಿ ಖಾಯಿಲೆ, ಬೆನ್ನು ಮುರಿಯೋ ಹಾಗೆ ಬೇರೆಯವರ ಮನೆಗೆಲಸ, ಮನೆ ಮೇಲಿನ ಸಾಲ, ಸತ್ತ ಅಪ್ಪ.." ಥೂ!!! ನೆಮ್ಮದಿಯಾಗಿ ಇರಕ್ಕು ಬಿಡಲ್ಲ ಈ ಹೆಂಗಸು... ನಾನೇನು ಕಡಿಮೆಯೇ... ಒಮ್ಮೆ ಸರಿಯಾದ
ಕೆಲಸ ಸಿಕ್ಕರೆ ಇವರನ್ನೆಲ್ಲ ಕೊಂಡುಕೊಂಡೆ ಬಿಟ್ಟೇನು...ಹ್ಹ !! ಅದೇನು ದೊಡ್ಡ ವಿಷಯಾನೆ?... ಅದೇ ರಾತ್ರಿ ಅಮ್ಮ ನಿದ್ದೆಯಲ್ಲಿದ್ದಾಗ, ಅವಳ ಸಣ್ಣದೆರಡು ಬುಗುಡಿ ವಾಲೆ ಮಾರಿದ್ದೆ. ಸಾಲ ತೀರಿಸೋ ಉದ್ದೇಶವೇನೋ ಇತ್ತು. ಆದರೆ ಕಿಟ್ಟಿ, ನನ್ನ ಜಿಗರಿ ದೋಸ್ತು, ಅವ ಕೇಳಿದರೆ ಇಲ್ಲ ಅನ್ನೋಕಾಗುತ್ಯೆ? ಅಲ್ಲೇ ಹತ್ತಿರದ ವೈನ್ ಶಾಪಿನಲ್ಲಿ ಇಂಡಿಯಾ ಗೆದ್ದ ಖುಷಿಗೆ ಪಾರ್ಟಿ
ಮಾಡಿದ್ವಿ.


 ಕೊಟ್ಟರಾಯಿತು ಮಂಗಳೂರಿನವನಿಗೆ. ಏನವಸರ ಈಗ??? 
 ಈ ಪಂಚರ್ ಸಾಬೀನೂ ಬಹಳ ಖಿಲಾಡಿ. ಒಂದು ಬಿಡಿಗಾಸು ತೆಗೆಯೋಲ್ಲ. ಎಷ್ಟು ಸಾರಿ ಕೇಳಿದ್ದೀನಿ. ಬಾಯಿಬಿಟ್ಟು ಕೇಳೋ ಜಾಯಮಾನ ನಂದೇ? ನಾನಂದ್ರೆ ಏನು? ಆ ಟಿಂಬರ್ ಮರ್ಚೆಂಟ್ ಗೋಪಾಲಯ್ಯನ ಕೆಲ್ಸಾನ ಥೂ ಅಂತ ಉಗಿದು ಬಂದೋನು.ಹೊಟ್ಟು ತೂಕ ಮಾಡಿ ಚೀಲಕ್ಕೆ ತುಂಬಿಸೋ ಕೆಲಸ ಅಂತೆ. ಥೂ..ಮೈ ಕೈಯೆಲ್ಲ ಕೊಳೆಯಾಗೋ ಕೆಲಸ ಅದು.

ಕೈ ಬೇರೆ ಒರಟಾಗಿ ಹೋಗಿತ್ತು. ಹೇಳಿದರೆ ಧಿಮಾಕಿನ ಮಾತಾಡುತ್ತಾನೆ. ಹೌದೋ ಗೋಪಾಲ, ನಾನು ಮೈಸೂರಿನ ಮಹಾರಾಜನ ಮಗನೇ. ಒಂದು ತಿಂಗಳಿನ ಸಂಬಳ ಕೂಡ ಕೊಡದೆ ಕಳಿಸಿದೇ..
 " ಓಹೋ ಧರ್ಮಣ್ಣದು ಸಾಹುಕಾರ್ರು!!ಆವೋ ಆವೋ. ಇವತ್ತೇನು ಪ್ಲೈವುಡ್ ದು ಅಂಗಡೀಕೆ ಮುಂದೆ ಟೈಮ್ ಆಯ್ತೂ?" ಇವನ**ನ.. ಎಷ್ಟು ಧಿಮಾಕು. ದಿನಕ್ಕೆ ನೂರು ರೂಪಾಯಿ ದುಡಿಯೋಲ್ಲ. ಹೀಗೆ ಮಾತಾಡ್ತಾನೆ. ಕಾರ್ಯವಾಸಿ ಕತ್ತೇ ಕಾಲಂತೆ. "ಇಲ್ಲ ಸಾಬೀ!! ಆ ಮಂಗಳೂರು ಸ್ಟೋರ್ ಕಾಕನ ಮುಖಕ್ಕೆ ಅವನ ದುಡ್ಡು ಎಸೆದು ಬಂದೆ. ಅದಕ್ಕೇ ತಡವಾಯ್ತು...
ಟೀ ಹೇಳ್ಸೋ ಸಾಬೀ"... ಏನೋ ಗೊಣಗುತ್ತ ಸಾಬೀ ಪಂಚರ್ ಕೆಲಸದ ಚೂಟ್ಟೆಗೆ ಟೀ ತರಲು ಹೇಳಿದ. "ಕೊಟ್ ಬಿಟ್ರಿ ಕಾಕಾದು ದುಡ್ಡು? ನಿಮ್ದುಕೆ ಅಮ್ಮ ಅವ್ರು ನೆನ್ನೆ ಬಂದಿದ್ರು.. ತುಂಬಾ ನೊಂದ್ಕೊಂಡ್ ಬಿಟ್ಟಿದೆ ಧರ್ಮಣ್ಣ.. ಕಾಕಾ ಏನೇನೋ ಹೇಳ್ದ ಅಂತೆ.. ನಿಮ್ದುಕೆ ಯಾವ್ದಾದ್ರು ನವ್ಕ್ರಿ ಮಾಡಬಾರ್ದು? ಟೀಬಿ ಅಂತೆ ಅವ್ರಿಗೆ.. ಒಳ್ಳೆ ಕಡ್ಡಿ ಮಾಫಿಕ್ ಕಾಣ್ತಾರೆ.. ಒಳ್ಳೆ ಡಾಕ್ಟ್ರು ಹತ್ರ ದಿಖಾನೇಕಾ ನಯೀ?" ಇವನೊಬ್ಬ ತರಲೇ ಸಾಬೀ. ಊರೊರೆಲ್ಲರ ವಿಚಾರ ಬೇಕು ಇವ್ನಿಗೆ. ನಮ್ಮಮ್ಮನಿಗೂ ಬೇರೆ ಕೆಲಸ ಇಲ್ಲ.. ಎಲ್ಲ ಬಿಟ್ಟು ಇವನ ಹತ್ತಿರ ಮನೆ ವಿಷ್ಯಾನೆಲ್ಲಾ ಹೇಳೋದೇ? ಸಾಬೀ ಮತ್ತೆ " ಅದೆಲ್ಲೋ ಶೋರೂಂ ಕೆಲ್ಸಾ ಇದೆ ಅಂತ ಹೇಳ್ತಿತ್ತು ನಿಮ್ದುಕೆ ಅಮ್ಮ, ಚಾರ್ ಹಜಾರ ದೇತಿ ಕತ್ತೇ. ಹೋಗ್ಬಾರ್ದು ತುಮ್ಹೆ? " ... ನಾಲ್ಕ್ ಸಾವಿರ ಸಂಬಳಕ್ಕೆ ಬೆಳಿಗ್ಗೆ ಆರು ಘಂಟೆಗೆಲ್ಲಾ ಶೋರೂಂ ಬಾಗಿಲು ತೆಗಿಬೇಕಂತೆ. ಅವ್ನೇನು ತಲೆತಿರುಕ ಮಾರ್ವಾಡಿ ಏನು. ಆರು ಘಂಟೆಗೆ ಯಾವ್ ಗಿರಾಕಿ ಬರ್ತಾನೆ. ಅದು ಅಲ್ದೆ ನಾನ್ ಏಳೋದೇ ತಡ.ಬೇಡ ಅಂದುಬಿಟ್ಟೆ. ಚೆನ್ನಾದ ಕನಸು ಬೀಳೋ ಸಮಯ. ಅಲೆ ಅಲೆ ತರಂಗ - ನನ್ನಂಥ ಸದೃಶ ಸುಂದರ ಯುವಕ, ರತಿಯೇ ನಾಚುವಂಥ ಸುಂದರಿ ಸ್ನಿಗ್ಧೆ, ಅವಳ ಕಣ್ಣು ಮೂಗು ಕಿವಿಗಳು ಎಲ್ಲಾ ತಿದ್ದಿ ತೀಡಿದಂತೆ, ನನ್ನ ಮೋಹಕ್ಕೆ ಪರವಶಳಾಗಿ ಮನೆ ಊರು ಬಿಟ್ಟು ನನ್ನ ಹಿಂದೆ ಓಡಿ ಬರುವ ಚೆಲುವೆ. ನಾನೇನು ಸಾಮನ್ಯನೆ? ನಾನಂದ್ರೆ ಏನು? ಆ ಚಿನ್ನದಂಗಡಿ ಮಾರ್ವಾಡಿ ಹುಡುಗಿ ದುಂಬಾಲು ಬಿದ್ದೇ ಬಿಡೋದೇ? ಅವಳ ಸ್ಕೂಟಿ ತೆಗೆದುಕೊಂಡು ನಮ್ಮನೆ ಹತ್ತಿರ ಸುಳಿದಾಡೋದು ನನ್ಗೊತ್ತಿಲ್ವೆ?.."ಏನು ಧರ್ಮಣ್ಣ, ಬೆಳ್ಗೆ ಬೆಳ್ಗೆನೇ ಕನ್ಸು ಕಾಣತಾ ಇದೀರಿ? .. ಆ ಮಾರ್ವಾಡಿದು ಹುಡ್ಗ ಬಂದಿದ್ದ.. ನಿಮ್ದುಕೆ ಏನೋ ಆ ಹುಡ್ಗಿನ ಕೈಸೆ ಕೈಸೇಕಿ ದೆಖ್ತಿ ಕತೇ.. ಅವ್ಳು ನಿಮ್ಮನೆ ಹತ್ರ ಟ್ಯುಶನ್ಗೆ ಬಂದ್ರೆ ಹಾಡು ಗೀಡು ಹೇಳ್ಕೊಂಡು ಸತಾತಿ ಕತೇ..
ಬೇಡ ಧರ್ಮಣ್ಣ, ನಿಮ್ದುಕೆ ಮನೆ ಹತ್ರ ಟ್ಯೂಶನ್ ಗೆ ಓದೋಕೆ ಹೋಗುತ್ತೆ ವೋ ಚ್ಹೋಕ್ರಿ. ಸುಮ್ನೆ ಬಿಡ್ಬಾರ್ದು? .." ಇವನೆಂಥ ಸಾಬೀ ಇವನು. ನಾನ್ಯಾರು? ಅವಳ ಹಿಂದೆ ನಾನ್ಯಾಕೆ ಸುತ್ತಬೇಕು..ಬಿಳಿ ಜಿರಳೆ ಹಾಗೆ, ಒಣಗಿ ರಟ್ಟಾಗಿರೋ ಅವಳನ್ಯಾರು ನೋಡ್ತಾರೆ. ಹ್ಹ.. ಟೀ ಹೀರಿ ಮುಗಿಸೋ ಹೊತ್ತಿಗೆ ಇಷ್ಟೆಲ್ಲಾ ಕೇಳಬೇಕಾಯಿತು ಸಾಬಿಯಿಂದ. ದಿನಕ್ಕೆ ನಲವತ್ತೋ
ಐವತ್ತೋ ದುಡಿಯೋ ಇವನಿಗೆ ಎಷ್ಟು ಧಿಮಾಕು? ಮದ್ವೆ ಆಗಿದೆ ಅಂತ ಜಂಬ ಬೇರೆ. 'ನಮ್ ಬೇಗಂ ಚೆನ್ನಾಗ್ ನೋಡ್ಕೋಬೇಕು ಧರ್ಮಣ್ಣ ತುಂಬಾ ಕಷ್ಟ ಪಟ್ಟಿದೆ ಅದು' ಅಂತ ನಂಗ್ ಹೇಳ್ತಾನೆ. ಇವ್ನೋಬ್ನೆ ದುಡಿಯೋದು. ಏನ್ ಸೀಮೆಗಿಲ್ಲದ್ ಹೆಂಡ್ತಿ ಇವನಿಗಿರೋದು. ಶ್ಹಪ್ಪ! ಇವನ ಕೈಯಿಂದ ಒಂದು ಪುಡಿಗಾಸು ಸಿಗೋ ಹಾಗೆ ಕಾಣಲ್ಲ. ಮನೆಗೇ ಹೋಗಿ ಏನಾದರೊಂದು ಉಪಾಯ ಮಾಡಿದರಾಯ್ತು.

ಅಡುಗೆ ಬಿಸಿ ಮಾಡಿ ಸ್ವಲ್ಪ ಉಂಡು ಹೀಗೇ ಪವಡಿಸೋದ್ರಲ್ಲಿರೋ ಸುಖ ಇನ್ಯಾವುದ್ರಲ್ಲೂ ಇಲ್ಲ. ಆದ್ರೆ ಪಕ್ಕದ ಮನೆ ಜಾಕಿ ಒಂದು ಇರದೇ ಹೋಗಿದ್ರೆ. ಒಂದೇ ಸಮನೆ ಬೌ ಬೌ ಅಂತ ಹೊಡ್ಕೊಳ್ತಾ ಇರುತ್ತೆ, ದಿನದಲ್ಲಿ ಈ ಕಾಟ ಆದ್ರೆ ರಾತ್ರಿ ಅಮ್ಮನ ಕೆಮ್ಮಿನ ಖಾಯಿಲೆ. ಒಳ್ಳೆ ಮಿಶಿನ್ ಗನ್ ಥರ ಒಂದೇ ಸಮನೆ ಕೆಮ್ತಾ ಇರೋದು. ಸುಖವಾಗಿ ನಿದ್ರೆ ಮಾಡೋಕು
ಆಗೋಲ್ಲ.. ಅದಕ್ಕೆ ಶೋರೂಂ ಕೆಲಸ ಬೇಡ ಅಂತ ಇರೋದು. ಮನುಷ್ಯನಿಗೆ ಅದರಲ್ಲೂ ನನ್ನಂಥ ಸ್ಪುರದ್ರೂಪಿಗೆ ನಿದ್ದೆ ಸರಿಯಾಗಿಲ್ಲವೆಂದರೆ ಕಣ್ಣೆಲ್ಲ ಊದಿ ಸುತ್ತಲೂ ಕಪ್ಪಾಗಿ ವಕ್ರವಾಗಿರುತ್ತೆ. ನಿಜ. ಯಾರಾದ್ರು ಅಂಗಡಿ ಹಾಕಿಕೊಟ್ಟಿದರೆ ಸ್ವಲ್ಪ ಹೊತ್ತು ಕೂತಿದ್ದು ಊಟಕ್ಕೂ, ನಿದ್ರೆಗೂ ತೊಂದರೆಯಾಗದಂತೆ ಮನೆಗೇ ಹತ್ತಿರವೇ ಇದ್ದುಕೊಂಡು ದುಡಿಯಬಹುದಿತ್ತು.
ಒಳ್ಳೆ ವರದಕ್ಷಿಣೆ ಕೊಡೊ ಮಾವ ಸಿಕ್ಕರೆ ಅದೂ ಆಗುತ್ತೆ. ಹಾಗೇ ನಿದ್ದೆ ಬಂದದ್ದೇ ಗೊತ್ತಾಗಲಿಲ್ಲ. ಅಮ್ಮ ಒಲೆಯ ಮೇಲೆ ಉಫ್ಫ್ ಉಫ್ಫ್ ಎನ್ನುತ್ತ ಕೆಮ್ಮುತ್ತ ಟೀ ಮಾಡುತ್ತಿದ್ದಳು. ಥೂ ಹಾಳು ಕೆಮ್ಮು. ದಿನಾ ಒಂದೊಂದು ಮಾತ್ರೆ ತೆಗೆದುಕೊಳ್ಳಬೇಕು ಅಂದರಂತೆ ಡಾಕ್ಟ್ರು. ಅವರಿಗೂ ಬೇಕಲ್ಲ ದುಡ್ಡು.."ಬುಗುಡಿ ವಾಲೆ ತೊಗೊಂಡೆ ಸಾಲ ತೀರಿಸ್ತಿನಿ ಅಂತ.. (ಕೆಮ್ಮಿ) ಮಂಗಳೂರು ಅಂಗಡಿ ಕಾಕ ಅವಮಾನ ಆಗೋ ಹಾಗೆ ಮಾತಾಡಿದ.. ನಿಮ್ಮಪ್ಪ ಇದ್ದಾಗ (ಕೆಮ್ಮಿ) ಒಂದು ದಿನವು ಒಬ್ಬನಿಂದ್ಲೂ ಹೀಗೆಲ್ಲ ಆಡಿಸ್ಕೊಂದಿಲ್ಲ....ನಾ.." ಏನು ಹೇಳ್ತಾಳೋ ಯಾರಿಗ್ ಬೇಕು. ದಿನಾ ಒಂದೇ ಗೋಳು. ಹೊರಗೆ ಬಂದ್ರೆನೇ ಚೆನ್ನ. ಇಲ್ಯಾರು ಮಾತಾಡೋರಿಲ್ಲ ..


ರಾತ್ರಿ ಊಟದ ಸಮಯ. ಅಮ್ಮ ಮಲಗಿರೋ ಹಾಗಿದೆ. ತಟ್ಟೆ... ಢಣ್ ಎಂದು ಸದ್ದಗುತ್ತಲೇ ಮತ್ತೆ ಶುರುವಾಯಿತು, ಅಮ್ಮನ ಕೆಮ್ಮಿನ ಗನ್ನು. ಥೋ ಯಾಕೆ ಬೇಕಿತ್ತು ನಂಗೆ. ಊಟ ಮಾಡೋಕೂ ನೆಮ್ಮದಿಯಿಲ್ಲ. ಕೆಮ್ಮಿ ಕೆಮ್ಮಿ ಸಾಯ್ತಾಳೆ.. ತಲೆ ನೋವಪ್ಪ ಇದೊಂದು.ಯಾರಿಗ್ ಬೇಕು ಊಟ.ಎಣ್ಣೆ ಜೊತೆ ತಿಂದ ಕಬಾಬ್ ಸಾಕು ಇವತ್ತಿಗೆ. ಮಲಗೋಣ...(ಕೆಮ್ಮು)
"ಸುಮ್ನೆ ಬಿದ್ಕೊಬಾರ್ದೆ? ಆ ಮಾತ್ರೆನಾದ್ರೂ ನುಂಗು. ಅದೇನ್ ಹೋಗೋ ಕಾಲದ ಕೆಮ್ಮೋ. ಬಾಯಿ ಮುಚ್ಕೊಂಡ್ ಮಲ್ಕೊಳಮ್ಮಾ.." ಯಾಕೋ ಟೈಮ್ ಸರಿಯಿಲ್ಲ. ಆ ಸಾಬೀನೂ ನನ್ನ ಉದಾಸೀನ ಮಾಡ್ತಾನೆ. ನಾನ್ಯಾರು ?? ನಾನಂದ್ರೆ ಏನು. ನಾ ಮನಸು ಮಾ...(ಕೆಮ್ಮು)... ಥೂ ಇದರ ... ಯಾಕೆ ಮುದ್ಕಿ ಸುಮ್ನೆ ಸಾಯೋದಲ್ವೇನೆ? ..ಛೆ!... ಕಣ್ಣಿಗ್ಯಾಕೋ ನಿದ್ದೇನೆ ಹತ್ತುತ ಇಲ್ವಲ್ಲ.. ಮಧ್ಯಾಹ್ನ ಮಲಗಿದ್ದಕ್ಕೋ ?.. ಅಲ್ಲ ಈ ಅಮ್ಮನ ಕೆಮ್ಮು... ಸ್ವಲ್ಪ ಕಣ್ಣು ಹತ್ತಿತು...ಮತ್ತೊಮ್ಮೆ ಕೆಮ್ಮಿದರೆ ನಾ ರಾಕ್ಷಸನಾಗಿಬಿಡುವುದೇ ಸರಿ.. ಇನ್ನು ಒಂದೇ ಒಂದು ಬಾರಿ ಕೆಮ್ಮಲಿ.. ಕೆಮ್ಮಿದಳೆ ?... ಛೆ ಇಲ್ಲ... ಅರೆ! ಕೆಮ್ಮಿಲ್ಲ? ನಿದ್ದೆ ಬಂತೇನೋ? ಸಧ್ಯ... ಆದರೂ ಭಯ.. ಇರು ನೋಡೋಣ.. ಧಬ್ಬ್! ಬಾಗಿಲು ಕಾಲಿಂದ ಒದ್ದೆ. ಏನಾಶ್ಚರ್ಯ! ಕೆಮ್ಮಿಲ್ಲ???
"ಅಮ್ಮಾ.." ಉತ್ತರವಿಲ್ಲ... ಅಲ್ಲೇ ಮಲಗಿದ್ದಲಿಂದಲೇ ಓರೆಗಣ್ಣಿನಲ್ಲಿ ನೋಡಿದೆ. ಸ್ವಲ್ಪವೂ ಮಿಸುಕಾಡುತ್ತಿಲ್ಲ... ಭಯವಾಗತೊಡಗಿತು. ಉಹೂ, ನಿದ್ದೆ ಹೋಗಿರಬಹುದೇ? ಸ್ವಲ್ಪ ಹೊತ್ತು ಹಾಗೇ ನಿಟ್ಟಿಸಿದೆ. ಉಸಿರಾಡುತ್ತಿದಂತೆ ಕಾಣಲಿಲ್ಲ .ಸಮೀಪಿಸಿ ನೋಡಿದೆ. ಉಹೂ.. ಎದೆ ಧಸಕ್ಕೆಂದಿತು.. ಅರಿಯದಂತೆ ಕಣ್ಣಿಂದ ಅಶ್ರುಧಾರೆ ಉಕ್ಕಿತು. ನೋಡಲಾರೆ. ಕೆಮ್ಮು ಹೆಚ್ಚಾಗಿತ್ತೇನೋ? ಎಲ್ಲ ಮಾತ್ರೆಗಳನ್ನು ಒಮ್ಮೆಲೇ ನುಂಗಿಬಿಟ್ಟಳೆ? ನೆನ್ನೆ ತಾನೇ ತಂದ ಹೊಸ ಮಾತ್ರೆ ಡಬ್ಬಿ ಖಾಲಿಯಾಗಿತ್ತು...ಮಗನ ಮೌಡ್ಯತೆ ದುರಹಂಕಾರದಿಂದಾಗುವ ಕಾರ್ಪಣ್ಯಕ್ಕೆ, ಪ್ರೀತಿಯ ಪಾಶಕ್ಕೆ ಸಿಲುಕಿ, ಮಮತೆಯ ಮೂರ್ತಿವೆತ್ತವಳು ನನ್ನಿಂದ ದೂರವಗಿದ್ದಳು....


Sunday, July 24, 2011

IT ಯಲ್ಲೂ ಮಜಾ ಐತಿ

IT  ಇಂಡಸ್ಟ್ರಿ ಅಂದ್ರೇನೆ ಹೀಗೆ ಕಣ್ರೀ 22 ಇಂದ 52 ವಯಸ್ಸಿನ ಎಲ್ಲಾ ಶೇಪ್, ರೇಸ್, ಟೈಪ್, ಕಲರ್ ಜನ ಸಿಗ್ತಾರೆ ನೋಡಿ. ಉದಾಹರಣೆಗೆ, ನಲವತ್ ಆದ್ರೂ ಹೆಣ್ಣು ಸಿಗದೇ ಪರದಾಡ್ತಿರೋ ಬ್ಯಾಚೆಲರ್ಗಳು, ಇಂಜಿನಿಯರ್ ಗಂಡ ಸಿಗ್ಲಿ ಅನ್ನೋ ಒಂದೇ ಉದ್ದೇಶದಿಂದ ಇಂಜಿನಿಯರಿಂಗ್ ಮಾಡಿ ಬಂದಿರೋ ಕನ್ಯಾಮಣಿಗಳು, ಮನೆ ಲೋನ್ ತೀರಿಸಕ್ಕಾಗದೆ ಗಂಡ – ಹೆಂಡತಿ ಶಿಫ್ಟ್ ವೈಸ್ ಕೆಲಸ ಮಾಡಿ ಮಕ್ಳನ್ ಬೇಬಿ ಸಿಟ್ಟರ್ ಪಾಲು ಮಾಡಿರೋ ಪೇರೆಂಟ್ಸ್ ಗಳು, ದಿನಕ್ಕೆ 14 ಅವರ್ ಕೆಲಸ ಮಾಡಿ ಹೊತ್ತಲ್ಲದ್ ಹೊತ್ತಲಿ ಇಮೇಲ್ ಕಳ್ಸೋ ಪುಡಾಂಗುಗಳು, ಅಲ್ಲೋ ಇಲ್ಲೋ ಒಬ್ರೋ ಇಬ್ರೋ ಅನ್ನೋ ಹಾಗೆ ನನ್ ಥರಾ ಡೆಡಿಕೇಟೆಡ್ / ಆನೆಸ್ಟ್ / ಹಾರ್ಡ್ ವರ್ಕಿಂಗ್ / ಇಂಟೆಲಿಜೆಂಟ್ ಜನಾನು ಇರ್ತಾರೆ ಅನ್ನಿ....(ಹಾಗಲ್ಲಾರೀ.. ಬ್ಲಾಗ್ ಬರೀವಾಗ ಸ್ವಲ್ಪ ಅತಿಶಯೋಕ್ತಿ ಇದ್ರೆ ಬ್ಲಾಗಿಗು ಬೆಲೆ ಇರುತ್ತೆ ಅಂತ ನಮ್ ಬ್ಲಾಗ್ ಮೇಸ್ಟ್ರು ಹೇಳ್ತಾ ಇರ್ತಾರೆ)

ಅಂದಹಾಗೆ ನಾನ್ಯಾಕೆ ಕನ್ನಡದಲ್ಲಿ ಬ್ಲಾಗ್ ಮಾಡ್ತಾ ಇದೀನಿ ಅಂತ ನೀವೆಲ್ಲ ಕೆಳ್ಲೇ ಇಲ್ಲಾ... ಇದು ಒಂಥರಾ ಫೀಲಿಂಗ್ಸ್ ಗೆ ಸಂಭಂಧಿಸಿದ ವಿಚಾರ ಕಣ್ರೀ. ನಮ್ ಕಷ್ಟಾನ ನಮ್ ಮದರ್ ಟಂಗಲ್ಲಿ
ಹಂಚ್ಕೊಂಡ್ರೆ ಮನಸ್ಸು ಹಗುರ ಆಗುತ್ತೆ ಅಂತಾರೆ. ಕೊಂಕಣೀಲಿ ಬರಿಯೋ ಸಾಹಸ ಯಾಕೆ ಮಾಡ್ಲಿಲ್ಲಾ ಅಂತ ಕೆಳ್ದೇ ಇರೋದೇ ವಾಸಿ, ಯಾಕೆಂದ್ರೆ, ನನ್ ಭಾಷಾ ಪರಿಜ್ನಾನ ನೋಡಿ ನೊಬೆಲ್-ಗಿಬೆಲ್ ಕೊಟ್ಟಾರು ಆಮೇಲೆ.  ಅದು ಅಲ್ದೆ ನಮ್ ಉಮೇಶ್ ಬಾಳಿಕಾಯಿ ಅವ್ರು ಮೊನ್ನೆ ತಾನೆ ಮತ್ತೆ ಮತ್ತೆ ಕನ್ನಡದಲಿ ಬರಿಯಮ್ಮ ಅಂತ ಹೇಳಿದ್ರು ಬೇರೆ. ನವೆಂಬರ್ ತಿಂಗಳೂ ಹತ್ರ ಬರ್ತಿದೆ, ಕನ್ನಡ ಸಂಘದವರ ಹಾಗೆ ನನಗೂ ನವೆಂಬರ್ ತಿಂಗಳಲ್ಲೇ ಕನ್ನಡ ನೆನಪಾಗುತ್ಯೇ ಅಂತ ಏನೂ ಕೇಳ್ಬೇಡಿ.  ವರ್ಷಪೂರ್ತಿ ನೆನಪಿರುತ್ತೆರೀ!
ಸರಿ ಸರಿ,ಬನ್ರಿ ದುಃಖ ಹಂಚಿಕೊಳ್ಳೋ ಕಾರ್ಯಕ್ರಮಾನ ಕಂಟಿನ್ಯೂ ಮಾಡೋಣ.. ಪ್ರಾಬ್ಲಮ್ ಇಂದಿನದಲ್ಲ ಮಾರಾಯ್ರೆ.. ಸಾವಿರದೊಂಬೈನೂರ್ ಎಷ್ಟರಲ್ಲೋ,ಹುಟ್ಟಿದೆಲ್ಲಾ ಮಕ್ಳು ಡಾಕ್ಟರ್ ಆಗಬೇಕು ಇಲ್ಲ ಇಂಜಿನೀರ್ ಆಗ್ಬೇಕು ಅಂತ ದೊಡ್ಡೋರೆಲ್ಲ ಉಪವಾಸ ಸತ್ಯಾಗ್ರಹ ಮಾಡಿದ್ರಂತೆ. ಎಲ್ಲಾರ್ಗೂ ಸರಕಾರೀ ಕೆಲಸ ಸಿಗೋದ್ ಕಷ್ಟ ನೋಡ್ರಿ ಹಾಗಾಗಿ. ಹಾಗೆ ಪರಂಪರಾಗತವಾಗಿ ನಮ್ಮನೆಲಿರೋ ಎಲ್ಲ ದೊಡ್ಡೋರಿಗೂ ಇದೆ ರೂಢಿಯಾಯ್ತು - ನಾವೆಲ್ಲ PCMB PCMC PCME ಅಂತ pshycho ಗಳಾದ್ವಿ. competitionನಂತೆ ಎಲ್ಲ ಪಾಸ್ ಆಗಿ, ಇಂಜಿನಿಯರ್ ಕಾಲೇಜ್ಗು ಸೇರಿದ್ವಿ. ಅಲ್ಲೂ ತಲೆ ಬುಡ ನೋಡದೆ ಪಾಸ್ ಆಗೋ ತಯಾರಿಯಲ್ಲಿ ಓದಿ ಕಡೆದು ಹಾಕಿದ್ವಲ್ಲ ಅಲ್ಲೇ mistake ಆಗಿದ್ದು. ಫೇಲ್ ಆಗಿದ್ದಾದ್ರೆ ಉಧ್ಧಾರ ಆಗ್ತಿದ್ವೋ ಏನೋ.
 ಹೋಗ್ಲಿ ಬಿಡಿ - ಇಲ್ಲಿ ತನಕ ಬಂದಾಯ್ತು, ನಡೆ ಮುಂದೆ ನಡೆ ಮುಂದೆ ಅಂತ ಬಂಡಿ ನಡೆಸ್ತಾ ಹೋಗ್ಬೇಕು. ಹಾಗ್ ನೋಡಿದ್ರೆ ಅಂಥ ಭಯಂಕರವಾಗೆನೂ ಇಲ್ಲಾ ರೀ ಜೀವನ. ವಾರೆಕ್ಕೆ 45-75 ಅವರ್ ಕೆಲ್ಸ ಮಾಡ್ತೀವಿ, ವೀಕ್ ಡೇ ಅಂಬೋ ವೀಕ್ ಡೇ ಗಳಲ್ಲಿ ಊಟ ತಿಂಡಿ ಸರಿಯಾಗಗದ ಕಾರಣ ವೀಕೆಂಡ್  ಗಳಲ್ಲಿ ಕಂಡೂ ಕಾಣದ ಭಕ್ಷ್ಯ- ಭೋಜನ ತಿಂದು, ಇರೋ ಬರೋ  salaryನೆಲ್ಲ ಸುರಿದು, ಕ್ಯಾಲೊರೀಸ್ ಎಂಬ ಭೂತದ ಭಯದಲ್ಲಿ  excercise ಮಷೀನೇ ಬೆವರೋ ಹಾಗೆ ಓಡ್ತೀವಿ. ತಿಂಗಳಿಗೆ 1000 ರೂಪಾಯಿ ಜಿಮ್ ಗೆ ಹಾಕಿ ಕರಗಿತೋ ಇಲ್ಲವೋ ಬಡಜೀವ ಅಂತ ಪದೇ ಪದೇ weighing  ಮಷೀನ್ ಮೇಲೆ ನಿಂತಾಗ, ಅದು ನಮ್ಮನ್ ನೋಡಿ ಮಾಡೋ ವಕ್ರ ಮೂತಿಗೂ competition ಅನ್ನೋ ಹಾಗೆ ಮೂತಿ ಮಾಡ್ತಿವಿ. ನೆನ್ನೆ ಓಡಿದ್ 30 ನಿಮಿಷಕ್ಕೂ ರಾತ್ರಿ Mc.Donalds ನಲ್ಲಿ ತಿಂದ friesಗು tally ಮಾಡಿ ಖುಷಿ ಪಡ್ತೀವಿ. ವೀಕೆಂಡ್ ಪಾರ್ಟಿ ಅಂತ 30 ml ಟೆಕೀಲ ಗೆ ಇನ್ನೂರ್ ರುಪಾಯಿ ಕೊಟ್ಟು ಕಿವಿಗಡಚಿಕ್ಕೋ ಮ್ಯುಸಿಕ್ ಬಾಕ್ಸ್ ತಾಳಕ್ಕೆ ಕುಣಿದು, ನಾಲ್ಕೇ ನಾಲ್ಕು  ಗೋಬಿ ಮಂಚೂರಿಯನ್ ಒಂದು ಪ್ಲೇಟ್ ಮೇಲೆ, ಬೆಂದು ಬಸವಳಿದು ನಮ್ಮನ್ನು ವ್ಯಂಗ್ಯವಾಗಿ ನೋಡಿ ನಕ್ಕಾಗ, ಬಿಲ್ ನಿಂದಾದ shock ಗೋ ಎಂಬಂತೆ ಒಂದೇ ಒಂದು ಪೀಸ್ ಉಳಿಸಿ ಆಚೆ ಬರ್ತೀವಿ.
BMTC ಗೆ almost ಟಾಟಾ ಹೇಳಿರೋ ಹಾಗಿದೆ ನಮ್ಮಲ್ಲಿ ಕೆಲೋವ್ರು(especially ನಾನೆ). ಅದೆನೋ ಆಟೋ ವ್ಯಾಮೋಹ ನಮ್ಮಂಥೋರಿಗೆ. ಬಸ್ ಸ್ಟಾಪ್ ಎಲ್ಲಿದೆ ಅನ್ನೋ ಗೋಜಿಗೆ ಹೆದರಿ ಆಟೋ ಹೆಸರಲ್ಲಿ ಸುಲಿಗೆ ಮಾಡಿಸ್ಕೊಂಡು, ಬದಲಾಗಿ ಅವರ ಜನ್ಮಾನೆಲ್ಲಾ ಜಾಲಾಡಿ, ಇದ್ದ ಬದ್ದ ಆಟೋ ಡ್ರೈವರ್ ಗಳನೆಲ್ಲಾ ತೆಗಳಿ, ಪದೇ ಪದೇ ಆಟೋ ಮೊರೇನೆ ಹೋಗ್ತೀವಿ.
 ನಿಜ ಹೇಳ್ಬೇಕು ಅಂದ್ರೆ ಇಷ್ಟು ದೊಡ್ಡ ಪ್ರಪಂಚದಲ್ಲಿ ನಮ್ ಕಷ್ಟಾನ ಕೇಳಿ ಅರ್ಥ ಮಾಡ್ಕೊಳೋದು ಒಂದೇ ವಸ್ತು. ಅದೇ ನಾವ್ ಕೆಲಸ ಮಾಡೋ ಸಿಸ್ಟಮ್. ಒಂದ್ 4X4 cubicle ಅಲ್ಲಿ code ಮಾಡಿ, compile ಮಾಡಿ,run ಮಾಡಿ, test ಮಾಡಿ, youtube,facebook  ನೋಡ್ಕೊಂಡು, ಬೇಜಾರಾದಾಗ ಬ್ಲಾಗ್ ಬರೆಯೋಕೆ ಸಹಾಯ ಮಾಡುವ ಸ್ನೇಹಿತ ಕಮ್ ಸ್ನೇಹಿತೆ. Facebook ಅಂದಾಗ ನೆನಪಾಯ್ತು ನೋಡಿ, ಅದು ಒಂಥರಾ stress buster ನಮ್ಮಂಥೋರಿಗೆ. ದಿನದ 9-10 ಅವರ್ ಅಲ್ಲಿ 30 ನಿಮಿಷಕ್ಕೊಮ್ಮೆಯೆಂಬಂತೆ, ಒಂದೆರಡ್ ನಿಮಿಷ ಅವರಿವರ  profile  ನೋಡಿ, ಯಾರ್ ಮದುವೆ ಆಯಿತೋ, ಯಾರ್ ಪಾಪುಗೆ ಹಲ್ಲು ಬಂತೋ, relationship status ಚೇಂಜ್ ಆಯಿತೋ, ಏನು ಇಲ್ಲಾಂದ್ರೆ farmville ಯಿಂದಾ ಬಂದ ಕೋಳಿ, ಕುರಿ, ಎಮ್ಮೆಗಳನ್ನ accept  ಮಾಡೋದ್ರಲ್ಲೂ ಒಂಥರಾ  stress relieve ಆಗುತ್ತೆ. ಅದೆಲ್ಲಾ ಮಾಡಿ ಮತ್ತೆ ಕೆಲ್ಸ ನೆನಪಾಗಿ, guilty ಫೀಲ್ ಮಾಡ್ಕೊಳೋದು ಇದೆ. ಇಷ್ಟೆಲ್ಲಾ emotions ಒಂದು ಸಿಸ್ಟಮ್ ಮುಂದೆ ತೋರಿಸ್ತೀವಿ, relate ಮಾಡ್ತೀವಿ, colleagues ಜೊತೆ communicator /IM ಮ್ಯಾನೇಜರ್ ಗಳನ್ನ ಹೊಗಳಿ ತೆಗಳಿ ಸಮಾಧಾನದ ನಿಟ್ಟುಸಿರು ಬಿಡ್ತೀವಿ.

ಇದೆಲ್ಲ realise ಆಗಿ, ನಮ್ ಲೋನ್ ಎಲ್ಲ ತೀರಿ, ನಮ್ ಮಕ್ಳು settle ಆಗಿ ಅವ್ರ ಮಕ್ಳಿಗೆ ಗ್ರೀನ್ ಕಾರ್ಡ್ ಸಿಗೋ ವರೆಗೆ ನಮ್ ಆಯುಷ್ಯದ buffer almost ಫುಲ್ ಆಗಿರುತ್ತೆ ಬಿಡಿ. ಹಾಗೆ ವೈರಾಗ್ಯ ಬಂದು ಒಂದೆರಡ್ ಲೈನ್ ಬರೆದೆ, ತಲೆಗೆ ಮನಸಿಗೆ ಹಚ್ಚಿಕೊಳ್ದೆ window ಕ್ಲೋಸ್ ಮಾಡ್ರಿ. ಅಲ್ಲಿ background ಅಲ್ಲಿರೋ ನಾಲಕ್ಕಾರ್ ಕರೀ DOS ಸ್ಕ್ರೀನ್ ಏನೋ ಹೇಳ್ತಿದೆ ಕೇಳಿ!!!

Tuesday, July 12, 2011

ತಾರ್ಪಾಲಿನರಮನೆ

"ಸಂಜೆ ಹಿಡಿದ ಜಡಿಮಳೆ ನಿಲ್ಲೊದುಂಟೆ .." ಎಂಬ ಅವ್ವನ ಮಾತು ನೆನಪಾಗಿ ಒಂದೇ ಸಮನೆ ರಾಚುತಿದ್ದ ಮಳೆ ನೋಡಲು ತೂಬಿನಲ್ಲಿ ಮಾಡಿಟ್ಟ ಗುಂಡಗಿನ ತೂತಿನಿಂದ ಇಣುಕಿ ನೋಡಿದೆ. ಈಗಷ್ಟೇ ಕತ್ತಲಾಗಿ, ಜೀರುಂಡೆ ಚಿರಿಗ್ ಚಿರಿಗ್ ಚಿರಿಗ್ ಎಂದು ಶಬ್ದ ಮಾಡುತ್ತಲಿತ್ತು. ಕೈಗೂಸು ಜ್ವರದಿಂದ ನರಳುತ್ತಿರುವುದು ನೋಡಿ ಹೊಟ್ಟೆ ಚುರ್ ಎಂದಿತು. ಇನ್ನು ನಾಲ್ಕು ತಿಂಗಳಾಗಿಲ್ಲ ಮಗುವಿಗೆ, ಪ್ರತಿ ದಿನ ಎನಾದರೊಂದು ಖಾಯಿಲೆ ಕಸಾಲೆ ಇದಕ್ಕೆ. ಇದರ ಅದ್ರಷ್ಟವೇ ಹೀಗೆ.ಪೋಲಿಯೋ ಹಾಕಿಸಲು ಹೊದಾಗ ನರ್ಸಮ್ಮ ಕೊಟ್ಟ ಗುಲಾಬಿ ಔಷಧಿ ಹಾಕಿದರೆ ಸ್ವಲ್ಪ ಬಾಯಿ ಮುಚ್ಚುತ್ತದೆ. ಇಲ್ಲವಾದರೆ ಇದರ ಗೋಳು ಹೇಳತೀರದು. ನಾನಾದರೂ ಏನು ಮಾಡುವುದು? ಕಿತ್ತು ತಿನ್ನುವ ಬಡತನ. ಮನೆಕಡೆಯೂ ಅಷ್ಟಕ್ಕಷ್ಟೆ. ಗಂಡನ ಸಂಪಾದನೆ ತಿನ್ನಲಿಕ್ಕೆ ಉಡಲಿಕ್ಕೆ ಸಾಲದು. ಒಂದಕ್ಷರ ಬರದ ನಾನು. ಕೂಲಿ ಮಾಡಲು ಕೈಗೂಸು. ನಿಟ್ಟುಸಿರಿಡುತ್ತ ತೂತಿನಿಂದಾಚೆ ನೋಡಿದೆ.
"ಅಬ್ಬಾ!!! ಮಳೆಯಾದರೂ ನಿಂತಿತಲ್ಲ.." ಎಂದುಕೊಳ್ಳುತ್ತಾ ಮಲಗಿದ್ದ ಮಗುವಿನ ಮೈ ಮತ್ತೆ ಮುಟ್ಟಿ ನೋಡಿದೆ. ಜ್ವರ ಕಮ್ಮಿಯಾಗಿತ್ತು.
     ನನ್ನ ಗಂಡ ರಸ್ತೆ ರಿಪೇರಿ, ಬ್ರಿಡ್ಜ್, ಡ್ಯಾಮ್ ಕಾಮಗಾರಿ ಕೆಲಸವಿದ್ದಾಗ ಕಂತ್ರಾಕ್ತಿನ ಮೇರೆಗೆ ಮೂರು, ಆರು ತಿಂಗಳು ಹೀಗೆ ಕೂಲಿಗೆ ಬೇರೆ ಬೇರೆ ಊರಿಗೆ ಹೋಗಿ ಕೆಲಸ ಮಾಡುವವ. ನನಗು ತಂದೆ ತಾಯಿಯಿಲ್ಲ, ಅಣ್ಣನೊಬ್ಬನೇ! ಗಂಡ  ಹೊದೆಡೆಗೆ ನಾನು ಹೋಗಲೇಬೇಕು. ಹಾಗಾಗಿ ಮನೆ ಮಠ ಏನಿಲ್ಲ. ರಕ್ಷಣೆಗೆಂದು ಒಂದು ಸೂರಿನ ಏರ್ಪಾಡು ಹೇಗೋ ಆಗುತ್ತದೆ. ಕೆಲವೊಮ್ಮೆ ಸರಕು ಸಲಕರಣೆಗೆಂದು ಮಾಡಿದ ಕಟ್ಟದವಾದರೆ, ಕೆಲವೊಮ್ಮೆ ತಗಡಿನ ಗುಡಿಸಲು, ಇಲ್ಲವೇ ಸ್ವಲ್ಪ ಉದಾರಿ ಸಾಹುಕಾರನಾಗಿದ್ದರೆ ನಾಲ್ಕೈದು ನಮ್ಮಂಥ ಸಂಸಾರಗಳು ಕೂಡಿರಲು ಒಂದು ಚಿಕ್ಕ ಮನೆ.
   ನಮ್ಮ ಸದ್ಯದ ಅರಮನೆ ನೀವು ನೋಡಬೇಕು. ಇದು ಊರಿನಿಂದಾಚೆ ಯಾವುದೋ ಹೆದ್ದಾರಿಯಂತೆ. ಇಲ್ಲಿ ಹತ್ತಿರದಲ್ಲೆನೂ ಇಲ್ಲವೆ ಇಲ್ಲ. ಹಗಲು ರಾತ್ರಿಯನ್ನದೆ ಟ್ರಕ್ಕು ಲಾರಿಗಳು ಓಡುತ್ತಲೇ ಇರುತ್ತವೆ. ನಾವಿರುವುದು ದೊಡ್ಡ ದೊಡ್ಡ ಸಿಮೆಂಟಿನ ತೂಬುಗಳಲ್ಲಿ. ಇವನ್ನು ಚರಂಡಿ ನೀರು, ಕಸವನೆಲ್ಲ ನದಿ ಹೊಳೆಗಳಿಗೆ ಸೇರಿಸಲು ಉಪಯೋಗಿಸುತ್ತಾರಂತೆ. ಹಾಗಂತ ಅವರು ಹೇಳಿದ್ದರು. ಈಗ ಅವರು ಮಾಡುತ್ತಿರುವುದು ಅದೇ ಕೆಲಸ. ನಮ್ಮಂತೆ ಇನ್ನು ಕೆಲ ಕೂಲಿಯಾಳುಗಳು ಸುತ್ತ ಮುತ್ತಲಿದ್ದಾರೆ. ಆದರೆ ನನಗೆ ಸಣ್ಣ ಮಗುವಿರುವುದರಿಂದ , ಬೀದಿ ದೀಪದ ಕೆಳಗೇ ಇರುವ ಈ ತೂಬಿನಲ್ಲಿರಲು ಎಲ್ಲರು ಒಪ್ಪಿದರು. ಅಡಿಗೆ ಹೊರಗೆ ಮಾಡಿಕೊಂಡು ಮಲಗಲು, ಮಳೆಯಿಂದ ರಕ್ಷಣೆ ಪಡೆಯಲು, ತೂಬಿನೊಳಕ್ಕೆ ಸೇರಿಬಿಡುತ್ತೇವೆ.ಹೀಗೆ ಇನ್ನೆರಡು ಮೂರು ತಿಂಗಳೆನೋ. ಮತ್ತೆ ಇನ್ನೆಲ್ಲಿಗೋ ಪ್ರಯಾಣ.
       ಇನ್ನು ಅವರು ಕೂಲಿಯಿಂದ ಬಂದಿಲ್ಲ. ಕೆಲವೊಮ್ಮೆ ಎರಡು ಪಟ್ಟು ಸಂಬಳಕ್ಕಾಗಿ ನಾಲ್ಕೈದು ತಾಸು ಹೆಚ್ಚಿಗೆ ಮಾಡಿಕೊಂಡೆನೋ ಬರುತ್ತಾರೆ. ಬಂದು ಪ್ರಜ್ನೆಯಿಲ್ಲದೆ ಮಲಗಿ ಬಿಡುತ್ತಾರೆ. ಆಗ ನಾನೂ ಬೇಡ ನನ್ನ ಮಗುವು ಬೇಡ. ನಾನೂ ಅವರನ್ನು ಕೇಳುವ ಗೋಜಿಗೆ ಹೊಗುವುದಿಲ್ಲ. ಬೆಳಿಗ್ಗೆ ಮತ್ತೆ ಓಟ. ಇಂದೂ ಸಹ ಹೊತ್ತಾಗಿ ಬರುವರೆನೋ! ಹೀಗೇ ಯೋಚಿಸುತ್ತಿರುವಾಗ ಒಂದು ಟೆಂಪೋನಂಥ ವಾಹನ ಬಂದು ಬೀದಿ ದೀಪದಡಿ ನಿಂತಿತು. ಹೊತ್ತಲ್ಲದ ಈ ಹೊತ್ತಿನಲ್ಲಿ ಗಾಡಿಯಾವುದಾದರು ಬಂದು ನಿಂತರೆ ನನ್ನ ಎದೆಯೆ ಒಡೆದು  ಹೋದಂತಾಗುತ್ತದೆ. ಸುಮ್ಮ ಸುಮ್ಮನೇ ಹೆದರುವ ಹೆಂಗಸಲ್ಲ ನಾನು. ಹಳ್ಳಿಯಲ್ಲಿದಾಗ ದನ ಕರುಗಳು ಮನೆಗೆ ಬಾರದ ದಿನಗಳಲ್ಲಿ, ಅಂತಹ ದಟ್ಟ ಕಾಡುಗಳಲ್ಲಿ ಸಂಜೆಗತ್ತಲಾದರೂ ಒಬ್ಬಳೇ ಓಡಾಡುತ್ತಿದವಳು. ಹುಲಿ ಚಿರತೆಗಳ ಭಯವಿಲ್ಲದೆ. ಆದರೆ ಕೆಲ ತಿಂಗಳುಗಳ ಹಿಂದೆ ನಡೆದ ಘಟನೆಯಿಂದ ಇತ್ತೀಚಿಗೆ ಯಾವ ಗಾಡಿ ಬಂದು ನಿಂತರೂ ಜೀವ ಬಾಯಿಗೆ ಬಂದಂತಾಗುತ್ತದೆ.
      ಅಂದೂ ಇವರು ಕೂಲಿಯಿಂದ ಬರುವುದು ಹೊತ್ತಾಗಿತ್ತು. ನಾನಿನ್ನೂ ಬಸುರಿ. ಏಳು ತಿಂಗಳು ತುಂಬಿದ್ದರು ಅಣ್ಣನ ಕರೆ ಬಂದಿರಲಿಲ್ಲ. ಬರುವುದು ಖಾತ್ರಿಯಿರಲಿಲ್ಲ. ಇರುವುದೊಬ್ಬ ಅಣ್ಣ. ಅವನೇ ಕರೆಯದಿದ್ದರೆ ನಾನೆಲ್ಲಿಗೆ ಹೋಗುವುದು. ಕತ್ತಲಾಗಿ ಹೋಗಿತ್ತು, ಬೀದಿ ದೀಪ ತನ್ನಷ್ಟಕ್ಕೆ ತಾನೇ ಉರಿದುಕೊಳ್ಳುತ್ತಲಿತ್ತು. ನಮ್ಮನ್ನು ಬಿಟ್ಟರೆ ಅದರ ಸದುಪಯೋಗ ಯಾರಿಗೂ ಇಲ್ಲವೆಂದುಕೊಳ್ಳುತ್ತಲಿದ್ದಗಲೇ, ಬಿಳಿ ಬಣ್ಣದ ಗಾಡಿಯೊಂದು ಬಂದು ನಿಂತಿತು. ನಾನೂ ತೂಬಿನೊಳಗಿದ್ದದ್ದರಿಂದ ಅವರು ನಿಂತರೂ ನನಗೇನೂ ವ್ಯತ್ಯಾಸವಾಗುತ್ತಿರಲಿಲ್ಲ. ಗಾಡಿಯಿಂದ ಇಳಿದ ಕೆಲ ಪಡ್ಡೆ ಹುಡುಗರು, ತೂಬಿನೊಳಗೆ ಯಾರೂ ವಾಸ ಮಾಡಲು ಸಾಧ್ಯವಿಲ್ಲವೆಂದುಕೊಂಡಂತೆ ನನ್ನ ಅಸ್ತಿತ್ವದ ಪರಿವೆ ಇಲ್ಲದಂತೆ ಮಾತನಾಡಲು ಶುರು ಮಾಡಿದರು. ಕೇಕೆ ಹಾಕುತ್ತಾ, ಹೀಯಾಳಿಸುತ್ತಾ, ಶುರುವಾದ ಮಾತು ಬೈಗಳು ತುಂಬಿ, ತೀರಾ ಅವಾಚ್ಯವೆನಿಸತೊಡಗಿತು. ಅವರೆಲ್ಲ ಕುಡಿದಿದ್ದರೋ, ಅಥವಾ ಅಲ್ಲೇ ನಿಂತು ಕುಡಿಯುತಿದ್ದರೋ, ತಿಳಿಯಲಿಲ್ಲ. ತೂಬಿನ ಕಿಂಡಿಯಿಂದ ನೋಡಲೂ ಭಯವಾಗುತ್ತಿತ್ತು. ಬಸುರಿ ಬೇರೆ.  ಮಾತಿಗೆ ಮಾತು ಬೆಳೆದು ಒಬ್ಬರನ್ನೊಬ್ಬರು ನೂಕಾಡತೊಡಗಿದಂತಾಯಿತು. ಒಬ್ಬ ತಳ್ಳಿದ ರಭಸಕ್ಕೆ ಇನ್ನೊಬ್ಬ ತೂಬಿನ ಮೇಲೇ ಬಂದು ಬೀಳಬೇಕೆ? ನನಗೆ ಕೈ ಕಾಲೇ ಬಾರದಂತಾದವು. ಸುತ್ತ ಮುತ್ತಲಿನ ತೂಬುಗಳಿಗೂ, ನಮ್ಮ ತೂಬಿಗೂ ಸ್ವಲ್ಪ ದೂರವಿದ್ದುದರಿಂದ ಯಾರಿಗೂ ಈ ಗಲಾಟೆ ಕೇಳಿಸದಿರದು. ಮೇಲೆ ಬಿದ್ದವನಿಗೆ ಒಳಗೆ ನಾನಿರುವುದು ತಿಳಿಯಲಿಲ್ಲವೇನೋ, ಸುಮ್ಮನೆ ಎದ್ದು ಹೋಗಿ, ತನ್ನನ್ನು ತಳ್ಳಿದವನನ್ನು ಹಿಡಿದನೆಂದು ಕಾಣುತ್ತದೆ, ಮತ್ತೆ ಹೊಡೆದಾಡುವ ಶಬ್ದ ಕೇಳಿತು. ಮತ್ತೊಮ್ಮೆ ಯಾರೋ ಮೇಲೆ ಬಿದ್ದು ತೂಬು ಸ್ವಲ್ಪ ಅಲುಗಾಡಿತು. ಬೆವೆತು ನೀರಾಗಿದ್ದ ನನಗೆ ಬಾಯೆಲ್ಲ ಒಣಗಿತು. ಬಿದ್ದವನ ಮೇಲೆ ಒಂದರಮೇಲೊಂದರಂತೆ ನಾಲು ಶೀಷೆಗಳನ್ನು ಬೇರೆ ಒಡೆದರು. ನನ್ನನ್ನು ನೋಡಿದ್ದರೆ ಅವರಿಬ್ಬರ ಜಗಳ ಮರೆತು ನನ್ನನ್ನೇನು ಮಾಡುತ್ತಿದರೋ ದೇವರಿಗೇ ಗೊತ್ತು. ಹುಲಿ ಚಿರತೆಗಳಿಗಿಂತ ಹುಲು ಮಾನವರು ಕ್ರೂರಿಗಳು.. ಅಂತ ಎಲ್ಲೋ ಕೇಳಿದ ನೆನಪು. ಸ್ವಲ್ಪ ಹೊತ್ತಿನ ಮೇಲೆ ಮತ್ತೊಂದು ಧ್ವನಿ ಕೇಳಿಸಿತು. ಇಷ್ಟು ಹೊತ್ತು ಆ ವ್ಯಕ್ತಿ ಏನು ಮಾಡುತ್ತಿದ್ದನೋ ಒಮ್ಮೆಲೇ ಎಲ್ಲ ಶಾಂತವಾಗಿ, ಗಾಡಿ ಹೊರಟ ಶಬ್ದ ಕೇಳಿತು. ನಾನೂ ತೂಬಿನ ಕಿಂಡಿಯಿಂದ ನೋಡಿದೆ. ಅವರೆಲ್ಲ ಹೋಗಿದ್ದರು. ಬದುಕಿದೆ ಜೀವ ಎಂದುಕೊಂಡು ಸುಯ್ದೆ.

  ಇಂದು ಮತ್ತೆ ಬಂದು ನಿಂತ ಬಿಳಿ ಟೆಂಪೋ ನೋಡಿ ಎರಡು ಪಟ್ಟು ಘಾಬರಿಯಾಯಿತು. ಮತ್ತೆಲ್ಲಿ ಅಂದಿನಂತೆ ಪಡ್ಡೆ ಹುಡುಗರು ಬಂದರೋ ಎಂದು. ಟೆಂಪೋವಿನಿಂದ ಇಳಿದವರು ದೊಡ್ಡ ಜಮಖಾನೆಯಂಥದ್ದೇನೋ ಹೊತ್ತುಕೊಂಡು ಬಂದರು. ಮತ್ತೊಂದು ಲಾಂಟರ್ನು, ಸ್ಟವ್ವು ಏನೇನನ್ನೋ ತಂದರು. ನೋಡ ನೋಡುತ್ತಿದ್ದಂತೆಯೆ ಒಲೆಯಂತೆ ಮಾಡಿ, ಏನನ್ನೋ ತಯಾರಿಸತೊಡಗಿದರು. ಜಮಖಾನೆಯ ಮೇಲೆ ಕುಳಿತವರು ನಗುತ್ತ, ಮಾತನಾಡುತ್ತ, ತೂಬಿನ ಕಡೆ ನೋಡಿದ ಹಾಗಾಯಿತು. ನಾನು ಪಕ್ಕನೇ ಚಿಮಣಿ ದೀಪ ಆರಿಸಿದೆ.
 ಮತ್ತಾರೂ ಈ ಕಡೆ ನೋಡಲಿಲ್ಲ. ನಾನು ಎವೆಯಿಕ್ಕದೆ ಅವರನ್ನೇ ನೋಡುತ್ತಿದ್ದೆ. ಸ್ವಲ್ಪ ಹೊತ್ತಲ್ಲೇ, ಎಲ್ಲರು ಒಂದೇ ಪಾತ್ರೆಯಿಂದ ಗಬಗಬನೆ ತಿನ್ನತೊಡಗಿದರು. ನನಗೆ ಈ ಪೇಟೆ ಜನಗಳ ಶೋಕಿ ನೋಡಿ ನಗು ಬಂತು. ಎಲ್ಲರು ಮನೆ ಮಠ ಇದ್ದುಕೊಂಡೇ ಇಲ್ಲಿ ರಸ್ತೆಯ ಮೇಲೆ ಅಡುಗೆ ಮಾಡಿಕೊಂಡು ತಿನ್ನುವ ಶೋಕಿ. ನಮಗಾದರೋ ಪ್ರತಿ ದಿನ ಬೀದಿಯಲ್ಲೇ ಅಡುಗೆ. ಅಥವಾ ಎಲ್ಲೋ ದೂರದಿಂದ ಬಂದವರೋ ಏನೋ. ಈ ಹೆದ್ದಾರಿಯ ಮೇಲೆ ಯಾವ ಹೋಟೆಲ್ಲೂ ಇಲ್ಲದ ಕಾರಣ ಇಲ್ಲಿ ಸ್ವಯಂಪಾಕ ಮಾಡಿಕೊಳ್ಳುತ್ತಿದ್ದರೆನೋ.  ಅಂತೂ ತಿಂದವರೆಲ್ಲ ಗಾಡಿ ಸೇರಿಕೊಂಡರು. ಒಬ್ಬ ಮಾತ್ರ ತಂದ ಪಾತ್ರೆ  ಪಗಡಗಳನೆಲ್ಲ  ಜೋಡಿಸುತ್ತಿದ್ದ. ಆ ದೊಡ್ಡ ಜಮಖಾನದಂಥಹ ವಸ್ತುವನ್ನು ಸುತ್ತಿ ಒಂದುಕಡೆಯಿಟ್ಟ. ಮತ್ತೆಲ್ಲವನ್ನೂ ಸಿಡಿಸಿಡಿಯೆನ್ನುತ್ತಾ ಒಂದೊಂದಾಗಿ ಹೊತ್ತುಕೊಂಡು ಹೋಗಲಾರಂಭಿಸಿದ. ನಾನು ನೋಡುತ್ತಿರುವಾಗಲೇ ಗಾಡಿ ಚಾಲುವಾಯಿತು.  ಒಳಗಿದ್ದವರೆಲ್ಲ ಈತನನ್ನು ಹಾಸ್ಯ ಮಾಡುತ್ತಿದ್ದರು. ಇವನೂ ಓಡಿಹೋಗಿ ಗಾಡಿ ಹತ್ತಿದ. ನನಗೂ ಅವನ ಪೇಚಾಟ ನೋಡಿ ನಗು ಬಂತು. ಗಾಡಿ ಹೊರಟು ಹೋಯಿತು. ಹ್ಹ  ಹ್ಹ ಹ್ಹ ವಿಚಿತ್ರ ಜನ. ಇವರು ಬಂದರೆ ಹೇಳಬೇಕು ಇಂದಿನ ಕಥೆ ಎಂದು ಮತ್ತೆ ಹೊರಗೆ  ಕಣ್ಣಾದೆ. ಅರೆ!!! ಆ ಜಮಖಾನದಂಥ ವಸ್ತು. ಗಡಿಬಿಡಿಯಲ್ಲೋ ಅಥವ ಕೋಪದಿಂದ ಬೇಕಂತಲೇ ಸಿಡಿಮಿಡಿಗೊಳ್ಳುತ್ತಿದ್ದವನು ಬಿಟ್ಟು ಹೋದನೆನೋ. ಬೆಚ್ಚಗೆ ಮಗುವಿಗೆ ಹಾಸಲಾದರೂ ಆಗುವುದೆನೋ..ಛೆ! ಛೆ! ಬೇಡ. ಮತ್ತವರು ವಾಪಸು ಬಂದು ಬಿಟ್ಟರೆ ಅವಮಾನವಾಗುವುದು. ಆದಲ್ಲೆ ಇರಲಿ...
ಮತ್ತೆ ಚಿಮಣಿ ದೀಪ ಹತ್ತಿಸಿ ಇವರು ಬರುವುದನ್ನೆ ಕಾಯುತ್ತಿದ್ದೆ. ಆದು ಏನೊ, ಹೇಗಿದೆಯೋ!.. ಮಳೆಗಾಲಕ್ಕೆ ಬೆಚ್ಚಗೆ ಹಾಸು ಆಗುವುದೋ ಎನೋ. ನಾನೆನೂ ಕದಿಯುತ್ತಿಲ್ಲವಲ್ಲ. ಅವರೇ ಬಿಟ್ಟು ಹೋದರು. ಬಂದು ಕೇಳಿದರೆ, ಕೊಟ್ಟರಾಯಿತು. ಅವರು ಬಂದಾಗ ಬಾರೀ ಹುಮ್ಮಸ್ಸಿನಿಂದ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿದೆ. ಅವರಿಗೇನೋ ಆ ಕಥೆ ಅಷ್ಟು ಸ್ವಾರಸ್ಯಕರವಾಗಿ ಕಾಣಲಿಲ್ಲವೆಂದು ತೋರುತ್ತದೆ. ಹ್ಹ್ !! ಇರಲಿ ನಾಳೆ ಬೆಳಿಗ್ಗೆ ತಮಾಷೆ ತೋರಿಸುತ್ತೇನೆ ಅಂದುಕೊಂಡು ಮಲಗಿದೆ. ತಾರ್ಪಲನ್ನು ಹೇಗೆ ಉಪಯೋಗಿಸುವುದು, ಮಳೆ ನೀರು ಬೀಳದಂತೆ ಹೇಗೆ ಮಾಡುವುದು ಎಂತೆಲ್ಲ ಯೋಚಿಸುತ್ತಲೇ ರಾತ್ರೆ ಕಳೆದೆ.

ಬೆಳಕಾದುದೆ ತಡ.. "ಇಲ್ಲಿದೆ ಬನ್ನಿ ತಮಾಷೆ!!.." ಹರಡಿದರೆ ತಾರ್ಪಾಲು ಸಾಮಾನ್ಯದ್ದಲ್ಲ!! ಅದಕ್ಕೊಂದು ಕಿಟಕಿ, ಬಾಗಿಲು!! ಸರಿಯಾಗಿ ಹರಡಿಟ್ಟರೆ ಅದು ಮನೆಯೇ!! ಇವರು ಮೊದಲ ಸಲ ಅಚ್ಚರಿಗೊಂಡಿದ್ದನ್ನು ನೋಡಿ ನನ್ನ ಸಾಹಸಕ್ಕೆ ನಾನೇ ಮೆಚ್ಚಿಕೊಂಡೆ. ಅವರೆಲ್ಲ ಮತ್ತೆ ಬರುವುದು ಕಾಣೆ. ಬಂದರು ಮೊದಲಿನಂತೆ ಸುತ್ತಿ ಅವರಿಗೆ ಕೊಟ್ಟರಾಯಿತಲ್ಲವೇ?  ಇವರು ನಾಲ್ಕು ದೊಡ್ಡ ಗೂಟಗಳನ್ನು ನೆಟ್ಟು, ನೆಲ ಗಟ್ಟಿ ಮಾಡಿ ತಾರ್ಪಾಲನ್ನು ಮನೆಯಂತೆ ನಿಲ್ಲಿಸಿದರು. ಗಾಳಿಗೆ ಬಾಗದಂತೆ, ಮಧ್ಯೆ ಕೋಲು ನಿಲ್ಲಿಸಿ ಗಟ್ಟಿ ಮಾಡಿದರು. ಆಹಾ! ಎಂಥ ಸೊಗಸಿನ ತಾರ್ಪಾಲಿನರಮನೆ!! ಅಡುಗೆ ಮೊದಲಿನಂತೆ ಹೊರಗೆ ಮಾಡಿಕೊಂಡರು ಈ ಮನೆ ತೂಬಿಗಿಂತ ಎಷ್ಟು ಬೆಚ್ಚಗೆ. ತೂಬಾದರೋ ಎರಡೂ ಕಡೆಯಿಂದ ತೆರೆದಿದ್ದು, ನಾ ಕಟ್ಟಿದ್ದ ಬಟ್ಟೆ ಅಷ್ಟು ಬೆಚ್ಚಗಿಡುತ್ತಿರಲಿಲ್ಲ. ಮಗುವಿಗೆ ಈಗ ಬೆಚ್ಚಗಿನ ಸೂರಿದೆ. ಮಗುವನ್ನೆತ್ತಿಕೊಂಡು ಇಬ್ಬರು ಹೊಸ ಮನೆಗೆ ಪ್ರವೇಶ ಮಾಡಿದೆವು. ಮೂರು ಜನ ಮಲಗಲು ಸಾಕಷ್ಟು ಸ್ಥಳವಿತ್ತು.
 ಎಲ್ಲಿಂದಲೋ ಬಂದ ಆ ಜನಗಳಲ್ಲಿ, ಬೇಕಂತಲೋ ಅಥವಾ ಮರೆತೋ ಬಿಟ್ಟು ಹೋದ ಆ ಮನುಷ್ಯನನ್ನು ಮನದಲ್ಲೇ ಧನ್ಯವಾದಿಸಿದೆ. ಇಷ್ಟೊಂದು ಅವಶ್ಯಕತೆಯಿದ್ದ ನಮಗೆ, ವರವಾಗಿ ಬಂದ ತಾರ್ಪಾಲಿನರಮನೆಯನ್ನು ಸರಿಯಾದ ಸಮಯದಲ್ಲಿ ಕೊಟ್ಟ ದೇವರನ್ನು ವಂದಿಸಿದೆ. ಹೇಗೋ ಬಂದ ನಮ್ಮ ತರ್ಪಾಲಿನರಮನೆ ನಮ್ಮೂವರಿಗೆ ಬೆಚ್ಚಗಿನ ಗೂಡು ಮಾಡಿಕೊಟ್ಟಿತ್ತು.

Friday, March 11, 2011

ಜೀವನ ಸಂಧ್ಯಾ






ಮದುವೆಗೆ ಉಡುಗೊರೆಯಾಗಿ ಬಂದ ಆ ಗೋಡೆ ಗಡಿಯಾರ ನಿಂತು ನಾಲ್ಕೋ ಐದೋ ವರ್ಷವಾಗಿರಬೇಕು. ಅದರ ಬುಡದಲ್ಲೇ ನೇತಾಡುವ ಲೋಲಾಕು ಸಮಯದ ಪರಿವೇ ಇಲ್ಲದಂತೆ ಅತ್ತಿಂದಿತ್ತ ಆಯ ತಪ್ಪಿದಂತೆ ಆಡುತ್ತಿತ್ತು. ಮುಂಜಾನೆಯಿಂದ ಒಂದೇ ಸಮನೆ ಹನಿಯುತ್ತಿದ್ದ ಮಳೆಗೆ, ಕಿಟಕಿಯ ಮೇಲೆ ಮಳೆ ಹನಿ ಒಳಗೆ ಬಾರದಂತೆ ಹಾಕಿಟ್ಟ ತಾರ್ಪಾಲಿನ ಮೇಲೆ ಸಿಡಿಯುತ್ತಿದ್ದ ಹನಿಗಳ ಶಬ್ದ ತುಂಬಾ ಅಸಹ್ಯಕರವಾಗಿತ್ತು. ಮತ್ತಲ್ಲೆಲ್ಲೋ ಕೀರ್ ಕೀರ್ ಎಂದು ಕಿವಿ ಪರದೆಯೇ ಹರಿಯುವಂಥ ಜೀರುಂಡೆಗಳ ಸದ್ದು...
 ಕೊನೆಗಾಲದಲ್ಲಿ ಮುದುಕನಿಗೆಂದು ಬಿಟ್ಟು ಹೋದ, ಬಿರುಕುಬಿಟ್ಟ, ಇನ್ನೆರಡು ಮಳೆಗೆ ಶರಣಾಗೋ ಗುಡಿಸಲಿನಂಥ ಪುಟ್ಟ ಮನೆಯೊಳಗೆ, ಬರೀ ಕಣ್ಣು-ಕಿವಿಗಳಿರುವ ಜೀವಂತ ಶವವಾಗಿ ಕುಳಿತಿದ್ದೆ ಆ ಕುರ್ಚಿಯಲಿ. ಕಣ್ಣುಗಳಿಗೆ ಸುಮಾರಾಗಿ ಮೂರು ವರ್ಷದ ಹಿಂದೆಯೇ ಹೂಬಿದ್ದು ಬರೀ ಆಕ್ರತಿಗಳೇ ಕಾಣಿಸುತಿದ್ದವು. ಕಿವಿಯೋ ಪರಮ ವೈರಿ. ಆ ಮಣ್ಣಿನ ನೆಲದಲ್ಲಿ ಗೂಡುಕಟ್ಟಿದ್ದ ಇರುವೆಗಳ ಸಂಚಾರವೂ ಕೇಳುವಷ್ಟು ಸೂಕ್ಷ್ಮ. ಅದೋ ಇನ್ನೇನು ಆರಿಹೊಗೋ ಸಮಯ ಬಂದು ಚಡಪಡಿಸಿ, ಕೊನೆಯ ಎಣ್ಣೆ ಹನಿ ಚಿಟರ್ರೆಂದು ಆರಿಹೊಗೋ ಹಾಗಿರುವ ದೀಪ. ಸಂಜೆ ಏಳೋ ಎಂಟೋ ಆಗಿರಬೇಕು. ಬೆಳಿಗ್ಗೆ ಬ್ರೆಡ್ಡಿನ ತುಣುಕುಗಳನ್ನು ಕಾಫಿಯಲ್ಲಿ ನೆನೆಸಿ, ಬಾಯಿಗೆ ತುರುಕಿ, ಬೆಡ್ ಪ್ಯಾನ್ ಬದಲಿಸಿ, ವಾಸನೆಗೆ ಅಸಹ್ಯಿಸಿಕೊಂಡು, ಶಪಿಸಿ, ಬೇಗನೇ ಇವನನ್ನ ಕರೆದುಕೋ ದೇವರೇ ಎಂದು ಬೇಡಿ ದೀಪ ಹಚ್ಚಿ ಹೋದ ಕೆಲಸದ ಆಳು - ಅವಳ ಹೆಸರು ಏನೋ ಎಂದೋ ಮರೆತು ಹೋಯ್ತು. . ನೆನಪಿದ್ದರೂ ಏನು ಮಾಡುತ್ತಿದ್ದೆ? ಎಡಗಡೆ ಪಾರ್ಶ್ವ ಹೊಡೆದು, ಕೈ ಕಾಲು ಬಾಯಿ ಆಡಿಸಲು ಆಗದೆ, ಕುರ್ಚಿ ಮಂಚಗಳೇ ಹಾಸ್ಯ ಮಾಡುವಂಥ ಈ ಜೀವ ಯಾಕಿನ್ನೂ ಬದುಕಿದೆ ಎಂದು ದೀನನಾಗಿ - ಆ ಗೂಡಿನಲ್ಲಿ ಇನ್ನೇನು ಆರಿದೆನೋ ಎಂಬಂತಿದ್ದ ದೀಪದ ಬೆಳಕಿನಲ್ಲಿ ಕಾಣುತ್ತಿದ್ದ ದೇವರ ಫೋಟೋ ನೋಡಿ ನಗುತ್ತಿದ್ದೆ.

ಕತ್ತಲ ನಿಶ್ಶಬ್ದಕ್ಕಿಂತ ಕ್ರೂರಿ ಇನ್ಯಾರು ಇರಲಾರರು. ಅಲ್ಲೆಲ್ಲೋ ಕಸದ ಕೊಂಪೆಯಲಿ ಹೆಕ್ಕಿ ತಿನ್ನುವ ಹೆಗ್ಗಣಗಳ ಕಾರುಬಾರು ಜೋರಾಗುತ್ತಲೇ ಅನ್ನಿಸಿತು ಮಳೆ ಪೂರ್ತಿ ನಿಂತಿದೆಯೆಂದು. ಕೊನೆಯಿಲ್ಲದೆ ಟರ್ರ್ ಟರ್ರ್ ಎನ್ನುತ್ತಾ ಕಿವಿಗೆ ಚಿಟ್ಟು ಹಿಡಿಸುವ ಕಪ್ಪೆ. ಶ್ಹ್ಹ್! ಎಂದರೆ ಕೇಳೀತೇ ಅದಕ್ಕೆ? ಈ ವಕ್ರಮೂತಿಯಿಂದ ಇನ್ನೇನು ಹೇಳಲಾದೀತು? ಹಾವೋ ಹದ್ದೋ ಹಿಡಿದುಕೊಂಡು ಹೋಗಬಾರದೇ ಅಂದುಕೊಳ್ಳುತ್ತಿದಂತೆಯೇ ಗಕ್ಕಂದಿತು ಜೀವ. ಆರಲು ತಯಾರಾದ ದೀಪದ ಬೆಳಕಿಗೆ ಉಟ್ಟಿದ್ದ ಪಂಚೆಯ ನೆರಳು  ಎಲ್ಲಿಂದಲೋ ಎದ್ದು ನನ್ನಲ್ಲಿಗೇ ಬರುತ್ತಿರುವ ದೈತ್ಯನಂತೆ ಕಂಡಿತು. ನೀನಾದರು ನನ್ನ ಸಂಧ್ಯೆಗೆ ಇತಿ ಹಾಡು ಎಂದು ಬೇಡಿದೆ. ಅದೇಕೋ ನನ್ನತ್ತ ಬರದೆ ನನ್ನಿಂದ ದೂರವಗುತ್ತಿದಂತೆ ಭಾಸವಾಯಿತು. ಪೂರ್ತಿ ಬತ್ತಿದ ಕಣ್ಣುಗಳಲ್ಲಿ ಹನಿಯು ಒಡೆಯದಂತೆ ಅತ್ತಿತು ಮನ. ತನ್ನ ಕೆಲಸವಾಯಿತೆಂಬಂತೆ ಮಂದವಾದ ಎಣ್ಣೆ-ಬತ್ತಿಯ ಘಮ ಬೀರಿ ಶಾಂತವಾಯಿತು ದೀಪ. ಕತ್ತಲಿಗೆ ಮಾಯವಾದ ದೈತ್ಯನ ಕಡೆಗೆ ನೋಡಿ ನನ್ನ ಸರದಿಗಾಗಿ ಕಾಯುತ್ತಾ ಕುಳಿತೆ...