badge

Tuesday, July 12, 2011

ತಾರ್ಪಾಲಿನರಮನೆ

"ಸಂಜೆ ಹಿಡಿದ ಜಡಿಮಳೆ ನಿಲ್ಲೊದುಂಟೆ .." ಎಂಬ ಅವ್ವನ ಮಾತು ನೆನಪಾಗಿ ಒಂದೇ ಸಮನೆ ರಾಚುತಿದ್ದ ಮಳೆ ನೋಡಲು ತೂಬಿನಲ್ಲಿ ಮಾಡಿಟ್ಟ ಗುಂಡಗಿನ ತೂತಿನಿಂದ ಇಣುಕಿ ನೋಡಿದೆ. ಈಗಷ್ಟೇ ಕತ್ತಲಾಗಿ, ಜೀರುಂಡೆ ಚಿರಿಗ್ ಚಿರಿಗ್ ಚಿರಿಗ್ ಎಂದು ಶಬ್ದ ಮಾಡುತ್ತಲಿತ್ತು. ಕೈಗೂಸು ಜ್ವರದಿಂದ ನರಳುತ್ತಿರುವುದು ನೋಡಿ ಹೊಟ್ಟೆ ಚುರ್ ಎಂದಿತು. ಇನ್ನು ನಾಲ್ಕು ತಿಂಗಳಾಗಿಲ್ಲ ಮಗುವಿಗೆ, ಪ್ರತಿ ದಿನ ಎನಾದರೊಂದು ಖಾಯಿಲೆ ಕಸಾಲೆ ಇದಕ್ಕೆ. ಇದರ ಅದ್ರಷ್ಟವೇ ಹೀಗೆ.ಪೋಲಿಯೋ ಹಾಕಿಸಲು ಹೊದಾಗ ನರ್ಸಮ್ಮ ಕೊಟ್ಟ ಗುಲಾಬಿ ಔಷಧಿ ಹಾಕಿದರೆ ಸ್ವಲ್ಪ ಬಾಯಿ ಮುಚ್ಚುತ್ತದೆ. ಇಲ್ಲವಾದರೆ ಇದರ ಗೋಳು ಹೇಳತೀರದು. ನಾನಾದರೂ ಏನು ಮಾಡುವುದು? ಕಿತ್ತು ತಿನ್ನುವ ಬಡತನ. ಮನೆಕಡೆಯೂ ಅಷ್ಟಕ್ಕಷ್ಟೆ. ಗಂಡನ ಸಂಪಾದನೆ ತಿನ್ನಲಿಕ್ಕೆ ಉಡಲಿಕ್ಕೆ ಸಾಲದು. ಒಂದಕ್ಷರ ಬರದ ನಾನು. ಕೂಲಿ ಮಾಡಲು ಕೈಗೂಸು. ನಿಟ್ಟುಸಿರಿಡುತ್ತ ತೂತಿನಿಂದಾಚೆ ನೋಡಿದೆ.
"ಅಬ್ಬಾ!!! ಮಳೆಯಾದರೂ ನಿಂತಿತಲ್ಲ.." ಎಂದುಕೊಳ್ಳುತ್ತಾ ಮಲಗಿದ್ದ ಮಗುವಿನ ಮೈ ಮತ್ತೆ ಮುಟ್ಟಿ ನೋಡಿದೆ. ಜ್ವರ ಕಮ್ಮಿಯಾಗಿತ್ತು.
     ನನ್ನ ಗಂಡ ರಸ್ತೆ ರಿಪೇರಿ, ಬ್ರಿಡ್ಜ್, ಡ್ಯಾಮ್ ಕಾಮಗಾರಿ ಕೆಲಸವಿದ್ದಾಗ ಕಂತ್ರಾಕ್ತಿನ ಮೇರೆಗೆ ಮೂರು, ಆರು ತಿಂಗಳು ಹೀಗೆ ಕೂಲಿಗೆ ಬೇರೆ ಬೇರೆ ಊರಿಗೆ ಹೋಗಿ ಕೆಲಸ ಮಾಡುವವ. ನನಗು ತಂದೆ ತಾಯಿಯಿಲ್ಲ, ಅಣ್ಣನೊಬ್ಬನೇ! ಗಂಡ  ಹೊದೆಡೆಗೆ ನಾನು ಹೋಗಲೇಬೇಕು. ಹಾಗಾಗಿ ಮನೆ ಮಠ ಏನಿಲ್ಲ. ರಕ್ಷಣೆಗೆಂದು ಒಂದು ಸೂರಿನ ಏರ್ಪಾಡು ಹೇಗೋ ಆಗುತ್ತದೆ. ಕೆಲವೊಮ್ಮೆ ಸರಕು ಸಲಕರಣೆಗೆಂದು ಮಾಡಿದ ಕಟ್ಟದವಾದರೆ, ಕೆಲವೊಮ್ಮೆ ತಗಡಿನ ಗುಡಿಸಲು, ಇಲ್ಲವೇ ಸ್ವಲ್ಪ ಉದಾರಿ ಸಾಹುಕಾರನಾಗಿದ್ದರೆ ನಾಲ್ಕೈದು ನಮ್ಮಂಥ ಸಂಸಾರಗಳು ಕೂಡಿರಲು ಒಂದು ಚಿಕ್ಕ ಮನೆ.
   ನಮ್ಮ ಸದ್ಯದ ಅರಮನೆ ನೀವು ನೋಡಬೇಕು. ಇದು ಊರಿನಿಂದಾಚೆ ಯಾವುದೋ ಹೆದ್ದಾರಿಯಂತೆ. ಇಲ್ಲಿ ಹತ್ತಿರದಲ್ಲೆನೂ ಇಲ್ಲವೆ ಇಲ್ಲ. ಹಗಲು ರಾತ್ರಿಯನ್ನದೆ ಟ್ರಕ್ಕು ಲಾರಿಗಳು ಓಡುತ್ತಲೇ ಇರುತ್ತವೆ. ನಾವಿರುವುದು ದೊಡ್ಡ ದೊಡ್ಡ ಸಿಮೆಂಟಿನ ತೂಬುಗಳಲ್ಲಿ. ಇವನ್ನು ಚರಂಡಿ ನೀರು, ಕಸವನೆಲ್ಲ ನದಿ ಹೊಳೆಗಳಿಗೆ ಸೇರಿಸಲು ಉಪಯೋಗಿಸುತ್ತಾರಂತೆ. ಹಾಗಂತ ಅವರು ಹೇಳಿದ್ದರು. ಈಗ ಅವರು ಮಾಡುತ್ತಿರುವುದು ಅದೇ ಕೆಲಸ. ನಮ್ಮಂತೆ ಇನ್ನು ಕೆಲ ಕೂಲಿಯಾಳುಗಳು ಸುತ್ತ ಮುತ್ತಲಿದ್ದಾರೆ. ಆದರೆ ನನಗೆ ಸಣ್ಣ ಮಗುವಿರುವುದರಿಂದ , ಬೀದಿ ದೀಪದ ಕೆಳಗೇ ಇರುವ ಈ ತೂಬಿನಲ್ಲಿರಲು ಎಲ್ಲರು ಒಪ್ಪಿದರು. ಅಡಿಗೆ ಹೊರಗೆ ಮಾಡಿಕೊಂಡು ಮಲಗಲು, ಮಳೆಯಿಂದ ರಕ್ಷಣೆ ಪಡೆಯಲು, ತೂಬಿನೊಳಕ್ಕೆ ಸೇರಿಬಿಡುತ್ತೇವೆ.ಹೀಗೆ ಇನ್ನೆರಡು ಮೂರು ತಿಂಗಳೆನೋ. ಮತ್ತೆ ಇನ್ನೆಲ್ಲಿಗೋ ಪ್ರಯಾಣ.
       ಇನ್ನು ಅವರು ಕೂಲಿಯಿಂದ ಬಂದಿಲ್ಲ. ಕೆಲವೊಮ್ಮೆ ಎರಡು ಪಟ್ಟು ಸಂಬಳಕ್ಕಾಗಿ ನಾಲ್ಕೈದು ತಾಸು ಹೆಚ್ಚಿಗೆ ಮಾಡಿಕೊಂಡೆನೋ ಬರುತ್ತಾರೆ. ಬಂದು ಪ್ರಜ್ನೆಯಿಲ್ಲದೆ ಮಲಗಿ ಬಿಡುತ್ತಾರೆ. ಆಗ ನಾನೂ ಬೇಡ ನನ್ನ ಮಗುವು ಬೇಡ. ನಾನೂ ಅವರನ್ನು ಕೇಳುವ ಗೋಜಿಗೆ ಹೊಗುವುದಿಲ್ಲ. ಬೆಳಿಗ್ಗೆ ಮತ್ತೆ ಓಟ. ಇಂದೂ ಸಹ ಹೊತ್ತಾಗಿ ಬರುವರೆನೋ! ಹೀಗೇ ಯೋಚಿಸುತ್ತಿರುವಾಗ ಒಂದು ಟೆಂಪೋನಂಥ ವಾಹನ ಬಂದು ಬೀದಿ ದೀಪದಡಿ ನಿಂತಿತು. ಹೊತ್ತಲ್ಲದ ಈ ಹೊತ್ತಿನಲ್ಲಿ ಗಾಡಿಯಾವುದಾದರು ಬಂದು ನಿಂತರೆ ನನ್ನ ಎದೆಯೆ ಒಡೆದು  ಹೋದಂತಾಗುತ್ತದೆ. ಸುಮ್ಮ ಸುಮ್ಮನೇ ಹೆದರುವ ಹೆಂಗಸಲ್ಲ ನಾನು. ಹಳ್ಳಿಯಲ್ಲಿದಾಗ ದನ ಕರುಗಳು ಮನೆಗೆ ಬಾರದ ದಿನಗಳಲ್ಲಿ, ಅಂತಹ ದಟ್ಟ ಕಾಡುಗಳಲ್ಲಿ ಸಂಜೆಗತ್ತಲಾದರೂ ಒಬ್ಬಳೇ ಓಡಾಡುತ್ತಿದವಳು. ಹುಲಿ ಚಿರತೆಗಳ ಭಯವಿಲ್ಲದೆ. ಆದರೆ ಕೆಲ ತಿಂಗಳುಗಳ ಹಿಂದೆ ನಡೆದ ಘಟನೆಯಿಂದ ಇತ್ತೀಚಿಗೆ ಯಾವ ಗಾಡಿ ಬಂದು ನಿಂತರೂ ಜೀವ ಬಾಯಿಗೆ ಬಂದಂತಾಗುತ್ತದೆ.
      ಅಂದೂ ಇವರು ಕೂಲಿಯಿಂದ ಬರುವುದು ಹೊತ್ತಾಗಿತ್ತು. ನಾನಿನ್ನೂ ಬಸುರಿ. ಏಳು ತಿಂಗಳು ತುಂಬಿದ್ದರು ಅಣ್ಣನ ಕರೆ ಬಂದಿರಲಿಲ್ಲ. ಬರುವುದು ಖಾತ್ರಿಯಿರಲಿಲ್ಲ. ಇರುವುದೊಬ್ಬ ಅಣ್ಣ. ಅವನೇ ಕರೆಯದಿದ್ದರೆ ನಾನೆಲ್ಲಿಗೆ ಹೋಗುವುದು. ಕತ್ತಲಾಗಿ ಹೋಗಿತ್ತು, ಬೀದಿ ದೀಪ ತನ್ನಷ್ಟಕ್ಕೆ ತಾನೇ ಉರಿದುಕೊಳ್ಳುತ್ತಲಿತ್ತು. ನಮ್ಮನ್ನು ಬಿಟ್ಟರೆ ಅದರ ಸದುಪಯೋಗ ಯಾರಿಗೂ ಇಲ್ಲವೆಂದುಕೊಳ್ಳುತ್ತಲಿದ್ದಗಲೇ, ಬಿಳಿ ಬಣ್ಣದ ಗಾಡಿಯೊಂದು ಬಂದು ನಿಂತಿತು. ನಾನೂ ತೂಬಿನೊಳಗಿದ್ದದ್ದರಿಂದ ಅವರು ನಿಂತರೂ ನನಗೇನೂ ವ್ಯತ್ಯಾಸವಾಗುತ್ತಿರಲಿಲ್ಲ. ಗಾಡಿಯಿಂದ ಇಳಿದ ಕೆಲ ಪಡ್ಡೆ ಹುಡುಗರು, ತೂಬಿನೊಳಗೆ ಯಾರೂ ವಾಸ ಮಾಡಲು ಸಾಧ್ಯವಿಲ್ಲವೆಂದುಕೊಂಡಂತೆ ನನ್ನ ಅಸ್ತಿತ್ವದ ಪರಿವೆ ಇಲ್ಲದಂತೆ ಮಾತನಾಡಲು ಶುರು ಮಾಡಿದರು. ಕೇಕೆ ಹಾಕುತ್ತಾ, ಹೀಯಾಳಿಸುತ್ತಾ, ಶುರುವಾದ ಮಾತು ಬೈಗಳು ತುಂಬಿ, ತೀರಾ ಅವಾಚ್ಯವೆನಿಸತೊಡಗಿತು. ಅವರೆಲ್ಲ ಕುಡಿದಿದ್ದರೋ, ಅಥವಾ ಅಲ್ಲೇ ನಿಂತು ಕುಡಿಯುತಿದ್ದರೋ, ತಿಳಿಯಲಿಲ್ಲ. ತೂಬಿನ ಕಿಂಡಿಯಿಂದ ನೋಡಲೂ ಭಯವಾಗುತ್ತಿತ್ತು. ಬಸುರಿ ಬೇರೆ.  ಮಾತಿಗೆ ಮಾತು ಬೆಳೆದು ಒಬ್ಬರನ್ನೊಬ್ಬರು ನೂಕಾಡತೊಡಗಿದಂತಾಯಿತು. ಒಬ್ಬ ತಳ್ಳಿದ ರಭಸಕ್ಕೆ ಇನ್ನೊಬ್ಬ ತೂಬಿನ ಮೇಲೇ ಬಂದು ಬೀಳಬೇಕೆ? ನನಗೆ ಕೈ ಕಾಲೇ ಬಾರದಂತಾದವು. ಸುತ್ತ ಮುತ್ತಲಿನ ತೂಬುಗಳಿಗೂ, ನಮ್ಮ ತೂಬಿಗೂ ಸ್ವಲ್ಪ ದೂರವಿದ್ದುದರಿಂದ ಯಾರಿಗೂ ಈ ಗಲಾಟೆ ಕೇಳಿಸದಿರದು. ಮೇಲೆ ಬಿದ್ದವನಿಗೆ ಒಳಗೆ ನಾನಿರುವುದು ತಿಳಿಯಲಿಲ್ಲವೇನೋ, ಸುಮ್ಮನೆ ಎದ್ದು ಹೋಗಿ, ತನ್ನನ್ನು ತಳ್ಳಿದವನನ್ನು ಹಿಡಿದನೆಂದು ಕಾಣುತ್ತದೆ, ಮತ್ತೆ ಹೊಡೆದಾಡುವ ಶಬ್ದ ಕೇಳಿತು. ಮತ್ತೊಮ್ಮೆ ಯಾರೋ ಮೇಲೆ ಬಿದ್ದು ತೂಬು ಸ್ವಲ್ಪ ಅಲುಗಾಡಿತು. ಬೆವೆತು ನೀರಾಗಿದ್ದ ನನಗೆ ಬಾಯೆಲ್ಲ ಒಣಗಿತು. ಬಿದ್ದವನ ಮೇಲೆ ಒಂದರಮೇಲೊಂದರಂತೆ ನಾಲು ಶೀಷೆಗಳನ್ನು ಬೇರೆ ಒಡೆದರು. ನನ್ನನ್ನು ನೋಡಿದ್ದರೆ ಅವರಿಬ್ಬರ ಜಗಳ ಮರೆತು ನನ್ನನ್ನೇನು ಮಾಡುತ್ತಿದರೋ ದೇವರಿಗೇ ಗೊತ್ತು. ಹುಲಿ ಚಿರತೆಗಳಿಗಿಂತ ಹುಲು ಮಾನವರು ಕ್ರೂರಿಗಳು.. ಅಂತ ಎಲ್ಲೋ ಕೇಳಿದ ನೆನಪು. ಸ್ವಲ್ಪ ಹೊತ್ತಿನ ಮೇಲೆ ಮತ್ತೊಂದು ಧ್ವನಿ ಕೇಳಿಸಿತು. ಇಷ್ಟು ಹೊತ್ತು ಆ ವ್ಯಕ್ತಿ ಏನು ಮಾಡುತ್ತಿದ್ದನೋ ಒಮ್ಮೆಲೇ ಎಲ್ಲ ಶಾಂತವಾಗಿ, ಗಾಡಿ ಹೊರಟ ಶಬ್ದ ಕೇಳಿತು. ನಾನೂ ತೂಬಿನ ಕಿಂಡಿಯಿಂದ ನೋಡಿದೆ. ಅವರೆಲ್ಲ ಹೋಗಿದ್ದರು. ಬದುಕಿದೆ ಜೀವ ಎಂದುಕೊಂಡು ಸುಯ್ದೆ.

  ಇಂದು ಮತ್ತೆ ಬಂದು ನಿಂತ ಬಿಳಿ ಟೆಂಪೋ ನೋಡಿ ಎರಡು ಪಟ್ಟು ಘಾಬರಿಯಾಯಿತು. ಮತ್ತೆಲ್ಲಿ ಅಂದಿನಂತೆ ಪಡ್ಡೆ ಹುಡುಗರು ಬಂದರೋ ಎಂದು. ಟೆಂಪೋವಿನಿಂದ ಇಳಿದವರು ದೊಡ್ಡ ಜಮಖಾನೆಯಂಥದ್ದೇನೋ ಹೊತ್ತುಕೊಂಡು ಬಂದರು. ಮತ್ತೊಂದು ಲಾಂಟರ್ನು, ಸ್ಟವ್ವು ಏನೇನನ್ನೋ ತಂದರು. ನೋಡ ನೋಡುತ್ತಿದ್ದಂತೆಯೆ ಒಲೆಯಂತೆ ಮಾಡಿ, ಏನನ್ನೋ ತಯಾರಿಸತೊಡಗಿದರು. ಜಮಖಾನೆಯ ಮೇಲೆ ಕುಳಿತವರು ನಗುತ್ತ, ಮಾತನಾಡುತ್ತ, ತೂಬಿನ ಕಡೆ ನೋಡಿದ ಹಾಗಾಯಿತು. ನಾನು ಪಕ್ಕನೇ ಚಿಮಣಿ ದೀಪ ಆರಿಸಿದೆ.
 ಮತ್ತಾರೂ ಈ ಕಡೆ ನೋಡಲಿಲ್ಲ. ನಾನು ಎವೆಯಿಕ್ಕದೆ ಅವರನ್ನೇ ನೋಡುತ್ತಿದ್ದೆ. ಸ್ವಲ್ಪ ಹೊತ್ತಲ್ಲೇ, ಎಲ್ಲರು ಒಂದೇ ಪಾತ್ರೆಯಿಂದ ಗಬಗಬನೆ ತಿನ್ನತೊಡಗಿದರು. ನನಗೆ ಈ ಪೇಟೆ ಜನಗಳ ಶೋಕಿ ನೋಡಿ ನಗು ಬಂತು. ಎಲ್ಲರು ಮನೆ ಮಠ ಇದ್ದುಕೊಂಡೇ ಇಲ್ಲಿ ರಸ್ತೆಯ ಮೇಲೆ ಅಡುಗೆ ಮಾಡಿಕೊಂಡು ತಿನ್ನುವ ಶೋಕಿ. ನಮಗಾದರೋ ಪ್ರತಿ ದಿನ ಬೀದಿಯಲ್ಲೇ ಅಡುಗೆ. ಅಥವಾ ಎಲ್ಲೋ ದೂರದಿಂದ ಬಂದವರೋ ಏನೋ. ಈ ಹೆದ್ದಾರಿಯ ಮೇಲೆ ಯಾವ ಹೋಟೆಲ್ಲೂ ಇಲ್ಲದ ಕಾರಣ ಇಲ್ಲಿ ಸ್ವಯಂಪಾಕ ಮಾಡಿಕೊಳ್ಳುತ್ತಿದ್ದರೆನೋ.  ಅಂತೂ ತಿಂದವರೆಲ್ಲ ಗಾಡಿ ಸೇರಿಕೊಂಡರು. ಒಬ್ಬ ಮಾತ್ರ ತಂದ ಪಾತ್ರೆ  ಪಗಡಗಳನೆಲ್ಲ  ಜೋಡಿಸುತ್ತಿದ್ದ. ಆ ದೊಡ್ಡ ಜಮಖಾನದಂಥಹ ವಸ್ತುವನ್ನು ಸುತ್ತಿ ಒಂದುಕಡೆಯಿಟ್ಟ. ಮತ್ತೆಲ್ಲವನ್ನೂ ಸಿಡಿಸಿಡಿಯೆನ್ನುತ್ತಾ ಒಂದೊಂದಾಗಿ ಹೊತ್ತುಕೊಂಡು ಹೋಗಲಾರಂಭಿಸಿದ. ನಾನು ನೋಡುತ್ತಿರುವಾಗಲೇ ಗಾಡಿ ಚಾಲುವಾಯಿತು.  ಒಳಗಿದ್ದವರೆಲ್ಲ ಈತನನ್ನು ಹಾಸ್ಯ ಮಾಡುತ್ತಿದ್ದರು. ಇವನೂ ಓಡಿಹೋಗಿ ಗಾಡಿ ಹತ್ತಿದ. ನನಗೂ ಅವನ ಪೇಚಾಟ ನೋಡಿ ನಗು ಬಂತು. ಗಾಡಿ ಹೊರಟು ಹೋಯಿತು. ಹ್ಹ  ಹ್ಹ ಹ್ಹ ವಿಚಿತ್ರ ಜನ. ಇವರು ಬಂದರೆ ಹೇಳಬೇಕು ಇಂದಿನ ಕಥೆ ಎಂದು ಮತ್ತೆ ಹೊರಗೆ  ಕಣ್ಣಾದೆ. ಅರೆ!!! ಆ ಜಮಖಾನದಂಥ ವಸ್ತು. ಗಡಿಬಿಡಿಯಲ್ಲೋ ಅಥವ ಕೋಪದಿಂದ ಬೇಕಂತಲೇ ಸಿಡಿಮಿಡಿಗೊಳ್ಳುತ್ತಿದ್ದವನು ಬಿಟ್ಟು ಹೋದನೆನೋ. ಬೆಚ್ಚಗೆ ಮಗುವಿಗೆ ಹಾಸಲಾದರೂ ಆಗುವುದೆನೋ..ಛೆ! ಛೆ! ಬೇಡ. ಮತ್ತವರು ವಾಪಸು ಬಂದು ಬಿಟ್ಟರೆ ಅವಮಾನವಾಗುವುದು. ಆದಲ್ಲೆ ಇರಲಿ...
ಮತ್ತೆ ಚಿಮಣಿ ದೀಪ ಹತ್ತಿಸಿ ಇವರು ಬರುವುದನ್ನೆ ಕಾಯುತ್ತಿದ್ದೆ. ಆದು ಏನೊ, ಹೇಗಿದೆಯೋ!.. ಮಳೆಗಾಲಕ್ಕೆ ಬೆಚ್ಚಗೆ ಹಾಸು ಆಗುವುದೋ ಎನೋ. ನಾನೆನೂ ಕದಿಯುತ್ತಿಲ್ಲವಲ್ಲ. ಅವರೇ ಬಿಟ್ಟು ಹೋದರು. ಬಂದು ಕೇಳಿದರೆ, ಕೊಟ್ಟರಾಯಿತು. ಅವರು ಬಂದಾಗ ಬಾರೀ ಹುಮ್ಮಸ್ಸಿನಿಂದ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿದೆ. ಅವರಿಗೇನೋ ಆ ಕಥೆ ಅಷ್ಟು ಸ್ವಾರಸ್ಯಕರವಾಗಿ ಕಾಣಲಿಲ್ಲವೆಂದು ತೋರುತ್ತದೆ. ಹ್ಹ್ !! ಇರಲಿ ನಾಳೆ ಬೆಳಿಗ್ಗೆ ತಮಾಷೆ ತೋರಿಸುತ್ತೇನೆ ಅಂದುಕೊಂಡು ಮಲಗಿದೆ. ತಾರ್ಪಲನ್ನು ಹೇಗೆ ಉಪಯೋಗಿಸುವುದು, ಮಳೆ ನೀರು ಬೀಳದಂತೆ ಹೇಗೆ ಮಾಡುವುದು ಎಂತೆಲ್ಲ ಯೋಚಿಸುತ್ತಲೇ ರಾತ್ರೆ ಕಳೆದೆ.

ಬೆಳಕಾದುದೆ ತಡ.. "ಇಲ್ಲಿದೆ ಬನ್ನಿ ತಮಾಷೆ!!.." ಹರಡಿದರೆ ತಾರ್ಪಾಲು ಸಾಮಾನ್ಯದ್ದಲ್ಲ!! ಅದಕ್ಕೊಂದು ಕಿಟಕಿ, ಬಾಗಿಲು!! ಸರಿಯಾಗಿ ಹರಡಿಟ್ಟರೆ ಅದು ಮನೆಯೇ!! ಇವರು ಮೊದಲ ಸಲ ಅಚ್ಚರಿಗೊಂಡಿದ್ದನ್ನು ನೋಡಿ ನನ್ನ ಸಾಹಸಕ್ಕೆ ನಾನೇ ಮೆಚ್ಚಿಕೊಂಡೆ. ಅವರೆಲ್ಲ ಮತ್ತೆ ಬರುವುದು ಕಾಣೆ. ಬಂದರು ಮೊದಲಿನಂತೆ ಸುತ್ತಿ ಅವರಿಗೆ ಕೊಟ್ಟರಾಯಿತಲ್ಲವೇ?  ಇವರು ನಾಲ್ಕು ದೊಡ್ಡ ಗೂಟಗಳನ್ನು ನೆಟ್ಟು, ನೆಲ ಗಟ್ಟಿ ಮಾಡಿ ತಾರ್ಪಾಲನ್ನು ಮನೆಯಂತೆ ನಿಲ್ಲಿಸಿದರು. ಗಾಳಿಗೆ ಬಾಗದಂತೆ, ಮಧ್ಯೆ ಕೋಲು ನಿಲ್ಲಿಸಿ ಗಟ್ಟಿ ಮಾಡಿದರು. ಆಹಾ! ಎಂಥ ಸೊಗಸಿನ ತಾರ್ಪಾಲಿನರಮನೆ!! ಅಡುಗೆ ಮೊದಲಿನಂತೆ ಹೊರಗೆ ಮಾಡಿಕೊಂಡರು ಈ ಮನೆ ತೂಬಿಗಿಂತ ಎಷ್ಟು ಬೆಚ್ಚಗೆ. ತೂಬಾದರೋ ಎರಡೂ ಕಡೆಯಿಂದ ತೆರೆದಿದ್ದು, ನಾ ಕಟ್ಟಿದ್ದ ಬಟ್ಟೆ ಅಷ್ಟು ಬೆಚ್ಚಗಿಡುತ್ತಿರಲಿಲ್ಲ. ಮಗುವಿಗೆ ಈಗ ಬೆಚ್ಚಗಿನ ಸೂರಿದೆ. ಮಗುವನ್ನೆತ್ತಿಕೊಂಡು ಇಬ್ಬರು ಹೊಸ ಮನೆಗೆ ಪ್ರವೇಶ ಮಾಡಿದೆವು. ಮೂರು ಜನ ಮಲಗಲು ಸಾಕಷ್ಟು ಸ್ಥಳವಿತ್ತು.
 ಎಲ್ಲಿಂದಲೋ ಬಂದ ಆ ಜನಗಳಲ್ಲಿ, ಬೇಕಂತಲೋ ಅಥವಾ ಮರೆತೋ ಬಿಟ್ಟು ಹೋದ ಆ ಮನುಷ್ಯನನ್ನು ಮನದಲ್ಲೇ ಧನ್ಯವಾದಿಸಿದೆ. ಇಷ್ಟೊಂದು ಅವಶ್ಯಕತೆಯಿದ್ದ ನಮಗೆ, ವರವಾಗಿ ಬಂದ ತಾರ್ಪಾಲಿನರಮನೆಯನ್ನು ಸರಿಯಾದ ಸಮಯದಲ್ಲಿ ಕೊಟ್ಟ ದೇವರನ್ನು ವಂದಿಸಿದೆ. ಹೇಗೋ ಬಂದ ನಮ್ಮ ತರ್ಪಾಲಿನರಮನೆ ನಮ್ಮೂವರಿಗೆ ಬೆಚ್ಚಗಿನ ಗೂಡು ಮಾಡಿಕೊಟ್ಟಿತ್ತು.

5 comments:

  1. ಹಾಯ್ ಮಮತಾ... ಹೇಗಿದ್ದೀಯಾ.. ?

    ಕನ್ನಡದಲ್ಲಿ ಬರೆಯೋಕೆ ಶುರು ಮಾಡಿದ್ದೀಯ!.. ತುಂಬಾ ಸಂತೋಷ... ಕಥೆ ಚೆನ್ನಾಗಿದೆ... ಸುಖ ಸಂತೋಷಗಳೂ ಕೇವಲ ನಮ್ಮ ಸದ್ಯದ ಸ್ಥಿತಿಯ ಮೇಲೆ ಅವಲಂಬಿಸಿರುತ್ತವೆ ಅಲ್ಲವೇ... ಈಗ ಇರುವುದಕ್ಕಿಂತ ಸ್ವಲ್ಪ ಚೆನ್ನಾಗಿರುವ ಜೀವನ ನಮಗೆ ಸಂತೋಷ ತರುತ್ತದಲ್ಲವೇ.. ತೂಬಿನಲ್ಲಿ ಮಲಗುವವರಿಗೆ ಟಾರ್ಪಾಲಿನ ಟೆಂಟ್ ಅರಮನೆಯಂತೆ ಕಂಡಲ್ಲಿ ಆಶ್ಚರ್ಯವಿಲ್ಲ ... ಮುದ್ದಾದ ಬರವಣಿಗೆ... ಇಷ್ಟವಾಯಿತು... ಇನ್ನಷ್ಟು ಬರೆ... ಅಭಿನಂದನೆಗಳು

    - ಉಮೇಶ್

    ReplyDelete
  2. Hey Mamzi..

    Sooper barahagarthinamma neenu... Thumba channagide kathe.. Nin kannada anthu thumba cute... I like it.. I like it Momziiii :-)

    Eege baritha eru.. All the best Dear...


    -Leela

    ReplyDelete
  3. kathe tumba svarasyakaravaagide mamta.. olle kathegaarti neenu.. baravanige munduvaresu.

    ReplyDelete
  4. Very Captivating and insightful. thumba chennagide.

    ReplyDelete
  5. can u translate it please ...sorry cant read kannada...i can understand a bit!

    ReplyDelete