badge

Friday, March 11, 2011

ಜೀವನ ಸಂಧ್ಯಾ






ಮದುವೆಗೆ ಉಡುಗೊರೆಯಾಗಿ ಬಂದ ಆ ಗೋಡೆ ಗಡಿಯಾರ ನಿಂತು ನಾಲ್ಕೋ ಐದೋ ವರ್ಷವಾಗಿರಬೇಕು. ಅದರ ಬುಡದಲ್ಲೇ ನೇತಾಡುವ ಲೋಲಾಕು ಸಮಯದ ಪರಿವೇ ಇಲ್ಲದಂತೆ ಅತ್ತಿಂದಿತ್ತ ಆಯ ತಪ್ಪಿದಂತೆ ಆಡುತ್ತಿತ್ತು. ಮುಂಜಾನೆಯಿಂದ ಒಂದೇ ಸಮನೆ ಹನಿಯುತ್ತಿದ್ದ ಮಳೆಗೆ, ಕಿಟಕಿಯ ಮೇಲೆ ಮಳೆ ಹನಿ ಒಳಗೆ ಬಾರದಂತೆ ಹಾಕಿಟ್ಟ ತಾರ್ಪಾಲಿನ ಮೇಲೆ ಸಿಡಿಯುತ್ತಿದ್ದ ಹನಿಗಳ ಶಬ್ದ ತುಂಬಾ ಅಸಹ್ಯಕರವಾಗಿತ್ತು. ಮತ್ತಲ್ಲೆಲ್ಲೋ ಕೀರ್ ಕೀರ್ ಎಂದು ಕಿವಿ ಪರದೆಯೇ ಹರಿಯುವಂಥ ಜೀರುಂಡೆಗಳ ಸದ್ದು...
 ಕೊನೆಗಾಲದಲ್ಲಿ ಮುದುಕನಿಗೆಂದು ಬಿಟ್ಟು ಹೋದ, ಬಿರುಕುಬಿಟ್ಟ, ಇನ್ನೆರಡು ಮಳೆಗೆ ಶರಣಾಗೋ ಗುಡಿಸಲಿನಂಥ ಪುಟ್ಟ ಮನೆಯೊಳಗೆ, ಬರೀ ಕಣ್ಣು-ಕಿವಿಗಳಿರುವ ಜೀವಂತ ಶವವಾಗಿ ಕುಳಿತಿದ್ದೆ ಆ ಕುರ್ಚಿಯಲಿ. ಕಣ್ಣುಗಳಿಗೆ ಸುಮಾರಾಗಿ ಮೂರು ವರ್ಷದ ಹಿಂದೆಯೇ ಹೂಬಿದ್ದು ಬರೀ ಆಕ್ರತಿಗಳೇ ಕಾಣಿಸುತಿದ್ದವು. ಕಿವಿಯೋ ಪರಮ ವೈರಿ. ಆ ಮಣ್ಣಿನ ನೆಲದಲ್ಲಿ ಗೂಡುಕಟ್ಟಿದ್ದ ಇರುವೆಗಳ ಸಂಚಾರವೂ ಕೇಳುವಷ್ಟು ಸೂಕ್ಷ್ಮ. ಅದೋ ಇನ್ನೇನು ಆರಿಹೊಗೋ ಸಮಯ ಬಂದು ಚಡಪಡಿಸಿ, ಕೊನೆಯ ಎಣ್ಣೆ ಹನಿ ಚಿಟರ್ರೆಂದು ಆರಿಹೊಗೋ ಹಾಗಿರುವ ದೀಪ. ಸಂಜೆ ಏಳೋ ಎಂಟೋ ಆಗಿರಬೇಕು. ಬೆಳಿಗ್ಗೆ ಬ್ರೆಡ್ಡಿನ ತುಣುಕುಗಳನ್ನು ಕಾಫಿಯಲ್ಲಿ ನೆನೆಸಿ, ಬಾಯಿಗೆ ತುರುಕಿ, ಬೆಡ್ ಪ್ಯಾನ್ ಬದಲಿಸಿ, ವಾಸನೆಗೆ ಅಸಹ್ಯಿಸಿಕೊಂಡು, ಶಪಿಸಿ, ಬೇಗನೇ ಇವನನ್ನ ಕರೆದುಕೋ ದೇವರೇ ಎಂದು ಬೇಡಿ ದೀಪ ಹಚ್ಚಿ ಹೋದ ಕೆಲಸದ ಆಳು - ಅವಳ ಹೆಸರು ಏನೋ ಎಂದೋ ಮರೆತು ಹೋಯ್ತು. . ನೆನಪಿದ್ದರೂ ಏನು ಮಾಡುತ್ತಿದ್ದೆ? ಎಡಗಡೆ ಪಾರ್ಶ್ವ ಹೊಡೆದು, ಕೈ ಕಾಲು ಬಾಯಿ ಆಡಿಸಲು ಆಗದೆ, ಕುರ್ಚಿ ಮಂಚಗಳೇ ಹಾಸ್ಯ ಮಾಡುವಂಥ ಈ ಜೀವ ಯಾಕಿನ್ನೂ ಬದುಕಿದೆ ಎಂದು ದೀನನಾಗಿ - ಆ ಗೂಡಿನಲ್ಲಿ ಇನ್ನೇನು ಆರಿದೆನೋ ಎಂಬಂತಿದ್ದ ದೀಪದ ಬೆಳಕಿನಲ್ಲಿ ಕಾಣುತ್ತಿದ್ದ ದೇವರ ಫೋಟೋ ನೋಡಿ ನಗುತ್ತಿದ್ದೆ.

ಕತ್ತಲ ನಿಶ್ಶಬ್ದಕ್ಕಿಂತ ಕ್ರೂರಿ ಇನ್ಯಾರು ಇರಲಾರರು. ಅಲ್ಲೆಲ್ಲೋ ಕಸದ ಕೊಂಪೆಯಲಿ ಹೆಕ್ಕಿ ತಿನ್ನುವ ಹೆಗ್ಗಣಗಳ ಕಾರುಬಾರು ಜೋರಾಗುತ್ತಲೇ ಅನ್ನಿಸಿತು ಮಳೆ ಪೂರ್ತಿ ನಿಂತಿದೆಯೆಂದು. ಕೊನೆಯಿಲ್ಲದೆ ಟರ್ರ್ ಟರ್ರ್ ಎನ್ನುತ್ತಾ ಕಿವಿಗೆ ಚಿಟ್ಟು ಹಿಡಿಸುವ ಕಪ್ಪೆ. ಶ್ಹ್ಹ್! ಎಂದರೆ ಕೇಳೀತೇ ಅದಕ್ಕೆ? ಈ ವಕ್ರಮೂತಿಯಿಂದ ಇನ್ನೇನು ಹೇಳಲಾದೀತು? ಹಾವೋ ಹದ್ದೋ ಹಿಡಿದುಕೊಂಡು ಹೋಗಬಾರದೇ ಅಂದುಕೊಳ್ಳುತ್ತಿದಂತೆಯೇ ಗಕ್ಕಂದಿತು ಜೀವ. ಆರಲು ತಯಾರಾದ ದೀಪದ ಬೆಳಕಿಗೆ ಉಟ್ಟಿದ್ದ ಪಂಚೆಯ ನೆರಳು  ಎಲ್ಲಿಂದಲೋ ಎದ್ದು ನನ್ನಲ್ಲಿಗೇ ಬರುತ್ತಿರುವ ದೈತ್ಯನಂತೆ ಕಂಡಿತು. ನೀನಾದರು ನನ್ನ ಸಂಧ್ಯೆಗೆ ಇತಿ ಹಾಡು ಎಂದು ಬೇಡಿದೆ. ಅದೇಕೋ ನನ್ನತ್ತ ಬರದೆ ನನ್ನಿಂದ ದೂರವಗುತ್ತಿದಂತೆ ಭಾಸವಾಯಿತು. ಪೂರ್ತಿ ಬತ್ತಿದ ಕಣ್ಣುಗಳಲ್ಲಿ ಹನಿಯು ಒಡೆಯದಂತೆ ಅತ್ತಿತು ಮನ. ತನ್ನ ಕೆಲಸವಾಯಿತೆಂಬಂತೆ ಮಂದವಾದ ಎಣ್ಣೆ-ಬತ್ತಿಯ ಘಮ ಬೀರಿ ಶಾಂತವಾಯಿತು ದೀಪ. ಕತ್ತಲಿಗೆ ಮಾಯವಾದ ದೈತ್ಯನ ಕಡೆಗೆ ನೋಡಿ ನನ್ನ ಸರದಿಗಾಗಿ ಕಾಯುತ್ತಾ ಕುಳಿತೆ...

4 comments: