ಕೈಗನ್ನಡಿಯಲ್ಲಿ ಏನು ನೋಡೋದು ಮಣ್ಣು. ಕೈಯಗಲ ಕನ್ನಡಿ ಅದರಲ್ಲಿ ಅರ್ಧ ಕೂತಿರೋ ಎಣ್ಣೆ-ಕೊಳೆ. ಸರಿಯಾಗಿ ಮೀಸೇನೂ ಕಾಣಿಸಲ್ಲ. ಎಂಥ ಮೀಸೆ ನನ್ನದು ಗೊತ್ತೇ. ಆ ಚಿನ್ನದಂಗಡಿ ಮಾರವಾಡಿಯ ಹುಡುಗಿ ಪದೇ ಪದೇ ಆಚೆ ಬಂದು ನೋಡಿ ಕಣ್ಣಿಂದಲೇ ಕರೆಯುವಳು.. ನಾನಂದ್ರೆ ಏನು.....
ಹಾಗಂತಾ ಕನ್ನಡಿ ನೋಡೋಕೆಂದೇ ಈ ದಾರಿ ಬರೋನಲ್ಲ ನಾನು. ಅಮ್ಮ ಕೆಲಸಕ್ಕೆ ಹೋದ ಮೇಲೆ ಏನು ಮಾಡೋದ ಅಂತಾನೆ ತಿಳಿಯೋಲ್ಲ. ಮಧ್ಯಾಹ್ನ ಊಟದ ಹೊತ್ತಿನವರೆಗೆ ಹೇಗಾದರೂ ಸಮಯ ಕಳೀಬೇಕಲ್ಲ. ಊಟದ ಹೊತ್ತಿನವರೆಗೂ ಇಲ್ಲೇ ಪಂಚರ್ ಸಾಬಿಯ ಅಂಗಡಿಯಲ್ಲಿ ಹರಟೆ ಹೊಡೆಯುತ್ತಾ ಕೂರೋದು. ಆಗಾಗ್ಗೆ ಬರುವ ಟೀಗಾದ್ರು ಮೋಸವಿಲ್ಲ ಬಿಡಿ.
ಆದ್ರೆ ಪಂಚರ್ ಸಾಬಿಯ ಅಂಗಡಿಗೆ ನೇರವಾಗೇನೋ ಹೋಗಬಹುದು. ಆದ್ರೆ ಅಲ್ಲಿ ಮಧ್ಯೆ ಮಂಗಳೂರು ಪ್ರಾವಿಜನ್ ಸ್ಟೋರ್ ಇದೆಯಲ್ಲ ಅವನ ಹತ್ತಿರ ಮೂರು ಸಾವಿರ ಕೈಸಾಲ ಮಾಡಿ ಆಗಲೇ ಎರಡು ತಿಂಗಳಾಯಿತೇನೋ. ಅವನೂ ಹೋಗಿ ಬರೋವಾಗಲೆಲ್ಲ ದುಡ್ಡು ಕೇಳುತ್ತಾನೆ. ಭಡವ!!! ಮೊನ್ನೆ ತಾನೇ ಅಮ್ಮ ಅವನಂಗಡಿಗೆ ಹೋದಾಗ ಅವಳ ಹತ್ತಿರ ಕೇಳಿದನಂತೆ.
ನಾನೇನು ಊರು ಬಿಟ್ಟು ಹೋಗುತ್ತಿದೀನೇನು. ನಾಳೆಯೋ ನಾಡಿದ್ದೋ ಕೊಟ್ಟರಾಯಿತು ಅಂದರೆ ಅಮ್ಮ ಪ್ರತೀಸಲದಂತೆ ಅಳಲಾರಂಭಿಸಿದಳು. "ನನ್ನ ಟೀಬಿ ಖಾಯಿಲೆ, ಬೆನ್ನು ಮುರಿಯೋ ಹಾಗೆ ಬೇರೆಯವರ ಮನೆಗೆಲಸ, ಮನೆ ಮೇಲಿನ ಸಾಲ, ಸತ್ತ ಅಪ್ಪ.." ಥೂ!!! ನೆಮ್ಮದಿಯಾಗಿ ಇರಕ್ಕು ಬಿಡಲ್ಲ ಈ ಹೆಂಗಸು... ನಾನೇನು ಕಡಿಮೆಯೇ... ಒಮ್ಮೆ ಸರಿಯಾದ ಕೆಲಸ ಸಿಕ್ಕರೆ ಇವರನ್ನೆಲ್ಲ ಕೊಂಡುಕೊಂಡೆ ಬಿಟ್ಟೇನು...ಹ್ಹ !! ಅದೇನು ದೊಡ್ಡ ವಿಷಯಾನೆ?... ಅದೇ ರಾತ್ರಿ ಅಮ್ಮ ನಿದ್ದೆಯಲ್ಲಿದ್ದಾಗ, ಅವಳ ಸಣ್ಣದೆರಡು ಬುಗುಡಿ ವಾಲೆ ಮಾರಿದ್ದೆ. ಸಾಲ ತೀರಿಸೋ ಉದ್ದೇಶವೇನೋ ಇತ್ತು. ಆದರೆ ಕಿಟ್ಟಿ, ನನ್ನ ಜಿಗರಿ ದೋಸ್ತು, ಅವ ಕೇಳಿದರೆ ಇಲ್ಲ ಅನ್ನೋಕಾಗುತ್ಯೆ? ಅಲ್ಲೇ ಹತ್ತಿರದ ವೈನ್ ಶಾಪಿನಲ್ಲಿ ಇಂಡಿಯಾ ಗೆದ್ದ ಖುಷಿಗೆ ಪಾರ್ಟಿ
ಮಾಡಿದ್ವಿ.
ಕೊಟ್ಟರಾಯಿತು ಮಂಗಳೂರಿನವನಿಗೆ. ಏನವಸರ ಈಗ???
ಈ ಪಂಚರ್ ಸಾಬೀನೂ ಬಹಳ ಖಿಲಾಡಿ. ಒಂದು ಬಿಡಿಗಾಸು ತೆಗೆಯೋಲ್ಲ. ಎಷ್ಟು ಸಾರಿ ಕೇಳಿದ್ದೀನಿ. ಬಾಯಿಬಿಟ್ಟು ಕೇಳೋ ಜಾಯಮಾನ ನಂದೇ? ನಾನಂದ್ರೆ ಏನು? ಆ ಟಿಂಬರ್ ಮರ್ಚೆಂಟ್ ಗೋಪಾಲಯ್ಯನ ಕೆಲ್ಸಾನ ಥೂ ಅಂತ ಉಗಿದು ಬಂದೋನು.ಹೊಟ್ಟು ತೂಕ ಮಾಡಿ ಚೀಲಕ್ಕೆ ತುಂಬಿಸೋ ಕೆಲಸ ಅಂತೆ. ಥೂ..ಮೈ ಕೈಯೆಲ್ಲ ಕೊಳೆಯಾಗೋ ಕೆಲಸ ಅದು.
ಕೈ ಬೇರೆ ಒರಟಾಗಿ ಹೋಗಿತ್ತು. ಹೇಳಿದರೆ ಧಿಮಾಕಿನ ಮಾತಾಡುತ್ತಾನೆ. ಹೌದೋ ಗೋಪಾಲ, ನಾನು ಮೈಸೂರಿನ ಮಹಾರಾಜನ ಮಗನೇ. ಒಂದು ತಿಂಗಳಿನ ಸಂಬಳ ಕೂಡ ಕೊಡದೆ ಕಳಿಸಿದೇ..
" ಓಹೋ ಧರ್ಮಣ್ಣದು ಸಾಹುಕಾರ್ರು!!ಆವೋ ಆವೋ. ಇವತ್ತೇನು ಪ್ಲೈವುಡ್ ದು ಅಂಗಡೀಕೆ ಮುಂದೆ ಟೈಮ್ ಆಯ್ತೂ?" ಇವನ**ನ.. ಎಷ್ಟು ಧಿಮಾಕು. ದಿನಕ್ಕೆ ನೂರು ರೂಪಾಯಿ ದುಡಿಯೋಲ್ಲ. ಹೀಗೆ ಮಾತಾಡ್ತಾನೆ. ಕಾರ್ಯವಾಸಿ ಕತ್ತೇ ಕಾಲಂತೆ. "ಇಲ್ಲ ಸಾಬೀ!! ಆ ಮಂಗಳೂರು ಸ್ಟೋರ್ ಕಾಕನ ಮುಖಕ್ಕೆ ಅವನ ದುಡ್ಡು ಎಸೆದು ಬಂದೆ. ಅದಕ್ಕೇ ತಡವಾಯ್ತು...
ಟೀ ಹೇಳ್ಸೋ ಸಾಬೀ"... ಏನೋ ಗೊಣಗುತ್ತ ಸಾಬೀ ಪಂಚರ್ ಕೆಲಸದ ಚೂಟ್ಟೆಗೆ ಟೀ ತರಲು ಹೇಳಿದ. "ಕೊಟ್ ಬಿಟ್ರಿ ಕಾಕಾದು ದುಡ್ಡು? ನಿಮ್ದುಕೆ ಅಮ್ಮ ಅವ್ರು ನೆನ್ನೆ ಬಂದಿದ್ರು.. ತುಂಬಾ ನೊಂದ್ಕೊಂಡ್ ಬಿಟ್ಟಿದೆ ಧರ್ಮಣ್ಣ.. ಕಾಕಾ ಏನೇನೋ ಹೇಳ್ದ ಅಂತೆ.. ನಿಮ್ದುಕೆ ಯಾವ್ದಾದ್ರು ನವ್ಕ್ರಿ ಮಾಡಬಾರ್ದು? ಟೀಬಿ ಅಂತೆ ಅವ್ರಿಗೆ.. ಒಳ್ಳೆ ಕಡ್ಡಿ ಮಾಫಿಕ್ ಕಾಣ್ತಾರೆ.. ಒಳ್ಳೆ ಡಾಕ್ಟ್ರು ಹತ್ರ ದಿಖಾನೇಕಾ ನಯೀ?" ಇವನೊಬ್ಬ ತರಲೇ ಸಾಬೀ. ಊರೊರೆಲ್ಲರ ವಿಚಾರ ಬೇಕು ಇವ್ನಿಗೆ. ನಮ್ಮಮ್ಮನಿಗೂ ಬೇರೆ ಕೆಲಸ ಇಲ್ಲ.. ಎಲ್ಲ ಬಿಟ್ಟು ಇವನ ಹತ್ತಿರ ಮನೆ ವಿಷ್ಯಾನೆಲ್ಲಾ ಹೇಳೋದೇ? ಸಾಬೀ ಮತ್ತೆ " ಅದೆಲ್ಲೋ ಶೋರೂಂ ಕೆಲ್ಸಾ ಇದೆ ಅಂತ ಹೇಳ್ತಿತ್ತು ನಿಮ್ದುಕೆ ಅಮ್ಮ, ಚಾರ್ ಹಜಾರ ದೇತಿ ಕತ್ತೇ. ಹೋಗ್ಬಾರ್ದು ತುಮ್ಹೆ? " ... ನಾಲ್ಕ್ ಸಾವಿರ ಸಂಬಳಕ್ಕೆ ಬೆಳಿಗ್ಗೆ ಆರು ಘಂಟೆಗೆಲ್ಲಾ ಶೋರೂಂ ಬಾಗಿಲು ತೆಗಿಬೇಕಂತೆ. ಅವ್ನೇನು ತಲೆತಿರುಕ ಮಾರ್ವಾಡಿ ಏನು. ಆರು ಘಂಟೆಗೆ ಯಾವ್ ಗಿರಾಕಿ ಬರ್ತಾನೆ. ಅದು ಅಲ್ದೆ ನಾನ್ ಏಳೋದೇ ತಡ.ಬೇಡ ಅಂದುಬಿಟ್ಟೆ. ಚೆನ್ನಾದ ಕನಸು ಬೀಳೋ ಸಮಯ. ಅಲೆ ಅಲೆ ತರಂಗ - ನನ್ನಂಥ ಸದೃಶ ಸುಂದರ ಯುವಕ, ರತಿಯೇ ನಾಚುವಂಥ ಸುಂದರಿ ಸ್ನಿಗ್ಧೆ, ಅವಳ ಕಣ್ಣು ಮೂಗು ಕಿವಿಗಳು ಎಲ್ಲಾ ತಿದ್ದಿ ತೀಡಿದಂತೆ, ನನ್ನ ಮೋಹಕ್ಕೆ ಪರವಶಳಾಗಿ ಮನೆ ಊರು ಬಿಟ್ಟು ನನ್ನ ಹಿಂದೆ ಓಡಿ ಬರುವ ಚೆಲುವೆ. ನಾನೇನು ಸಾಮನ್ಯನೆ? ನಾನಂದ್ರೆ ಏನು? ಆ ಚಿನ್ನದಂಗಡಿ ಮಾರ್ವಾಡಿ ಹುಡುಗಿ ದುಂಬಾಲು ಬಿದ್ದೇ ಬಿಡೋದೇ? ಅವಳ ಸ್ಕೂಟಿ ತೆಗೆದುಕೊಂಡು ನಮ್ಮನೆ ಹತ್ತಿರ ಸುಳಿದಾಡೋದು ನನ್ಗೊತ್ತಿಲ್ವೆ?.."ಏನು ಧರ್ಮಣ್ಣ, ಬೆಳ್ಗೆ ಬೆಳ್ಗೆನೇ ಕನ್ಸು ಕಾಣತಾ ಇದೀರಿ? .. ಆ ಮಾರ್ವಾಡಿದು ಹುಡ್ಗ ಬಂದಿದ್ದ.. ನಿಮ್ದುಕೆ ಏನೋ ಆ ಹುಡ್ಗಿನ ಕೈಸೆ ಕೈಸೇಕಿ ದೆಖ್ತಿ ಕತೇ.. ಅವ್ಳು ನಿಮ್ಮನೆ ಹತ್ರ ಟ್ಯುಶನ್ಗೆ ಬಂದ್ರೆ ಹಾಡು ಗೀಡು ಹೇಳ್ಕೊಂಡು ಸತಾತಿ ಕತೇ..
ಬೇಡ ಧರ್ಮಣ್ಣ, ನಿಮ್ದುಕೆ ಮನೆ ಹತ್ರ ಟ್ಯೂಶನ್ ಗೆ ಓದೋಕೆ ಹೋಗುತ್ತೆ ವೋ ಚ್ಹೋಕ್ರಿ. ಸುಮ್ನೆ ಬಿಡ್ಬಾರ್ದು? .." ಇವನೆಂಥ ಸಾಬೀ ಇವನು. ನಾನ್ಯಾರು? ಅವಳ ಹಿಂದೆ ನಾನ್ಯಾಕೆ ಸುತ್ತಬೇಕು..ಬಿಳಿ ಜಿರಳೆ ಹಾಗೆ, ಒಣಗಿ ರಟ್ಟಾಗಿರೋ ಅವಳನ್ಯಾರು ನೋಡ್ತಾರೆ. ಹ್ಹ.. ಟೀ ಹೀರಿ ಮುಗಿಸೋ ಹೊತ್ತಿಗೆ ಇಷ್ಟೆಲ್ಲಾ ಕೇಳಬೇಕಾಯಿತು ಸಾಬಿಯಿಂದ. ದಿನಕ್ಕೆ ನಲವತ್ತೋ
ಐವತ್ತೋ ದುಡಿಯೋ ಇವನಿಗೆ ಎಷ್ಟು ಧಿಮಾಕು? ಮದ್ವೆ ಆಗಿದೆ ಅಂತ ಜಂಬ ಬೇರೆ. 'ನಮ್ ಬೇಗಂ ಚೆನ್ನಾಗ್ ನೋಡ್ಕೋಬೇಕು ಧರ್ಮಣ್ಣ ತುಂಬಾ ಕಷ್ಟ ಪಟ್ಟಿದೆ ಅದು' ಅಂತ ನಂಗ್ ಹೇಳ್ತಾನೆ. ಇವ್ನೋಬ್ನೆ ದುಡಿಯೋದು. ಏನ್ ಸೀಮೆಗಿಲ್ಲದ್ ಹೆಂಡ್ತಿ ಇವನಿಗಿರೋದು. ಶ್ಹಪ್ಪ! ಇವನ ಕೈಯಿಂದ ಒಂದು ಪುಡಿಗಾಸು ಸಿಗೋ ಹಾಗೆ ಕಾಣಲ್ಲ. ಮನೆಗೇ ಹೋಗಿ ಏನಾದರೊಂದು ಉಪಾಯ ಮಾಡಿದರಾಯ್ತು.
ಆಗೋಲ್ಲ.. ಅದಕ್ಕೆ ಶೋರೂಂ ಕೆಲಸ ಬೇಡ ಅಂತ ಇರೋದು. ಮನುಷ್ಯನಿಗೆ ಅದರಲ್ಲೂ ನನ್ನಂಥ ಸ್ಪುರದ್ರೂಪಿಗೆ ನಿದ್ದೆ ಸರಿಯಾಗಿಲ್ಲವೆಂದರೆ ಕಣ್ಣೆಲ್ಲ ಊದಿ ಸುತ್ತಲೂ ಕಪ್ಪಾಗಿ ವಕ್ರವಾಗಿರುತ್ತೆ. ನಿಜ. ಯಾರಾದ್ರು ಅಂಗಡಿ ಹಾಕಿಕೊಟ್ಟಿದರೆ ಸ್ವಲ್ಪ ಹೊತ್ತು ಕೂತಿದ್ದು ಊಟಕ್ಕೂ, ನಿದ್ರೆಗೂ ತೊಂದರೆಯಾಗದಂತೆ ಮನೆಗೇ ಹತ್ತಿರವೇ ಇದ್ದುಕೊಂಡು ದುಡಿಯಬಹುದಿತ್ತು.
ಒಳ್ಳೆ ವರದಕ್ಷಿಣೆ ಕೊಡೊ ಮಾವ ಸಿಕ್ಕರೆ ಅದೂ ಆಗುತ್ತೆ. ಹಾಗೇ ನಿದ್ದೆ ಬಂದದ್ದೇ ಗೊತ್ತಾಗಲಿಲ್ಲ. ಅಮ್ಮ ಒಲೆಯ ಮೇಲೆ ಉಫ್ಫ್ ಉಫ್ಫ್ ಎನ್ನುತ್ತ ಕೆಮ್ಮುತ್ತ ಟೀ ಮಾಡುತ್ತಿದ್ದಳು. ಥೂ ಹಾಳು ಕೆಮ್ಮು. ದಿನಾ ಒಂದೊಂದು ಮಾತ್ರೆ ತೆಗೆದುಕೊಳ್ಳಬೇಕು ಅಂದರಂತೆ ಡಾಕ್ಟ್ರು. ಅವರಿಗೂ ಬೇಕಲ್ಲ ದುಡ್ಡು.."ಬುಗುಡಿ ವಾಲೆ ತೊಗೊಂಡೆ ಸಾಲ ತೀರಿಸ್ತಿನಿ ಅಂತ.. (ಕೆಮ್ಮಿ) ಮಂಗಳೂರು ಅಂಗಡಿ ಕಾಕ ಅವಮಾನ ಆಗೋ ಹಾಗೆ ಮಾತಾಡಿದ.. ನಿಮ್ಮಪ್ಪ ಇದ್ದಾಗ (ಕೆಮ್ಮಿ) ಒಂದು ದಿನವು ಒಬ್ಬನಿಂದ್ಲೂ ಹೀಗೆಲ್ಲ ಆಡಿಸ್ಕೊಂದಿಲ್ಲ....ನಾ.." ಏನು ಹೇಳ್ತಾಳೋ ಯಾರಿಗ್ ಬೇಕು. ದಿನಾ ಒಂದೇ ಗೋಳು. ಹೊರಗೆ ಬಂದ್ರೆನೇ ಚೆನ್ನ. ಇಲ್ಯಾರು ಮಾತಾಡೋರಿಲ್ಲ ..
ರಾತ್ರಿ ಊಟದ ಸಮಯ. ಅಮ್ಮ ಮಲಗಿರೋ ಹಾಗಿದೆ. ತಟ್ಟೆ... ಢಣ್ ಎಂದು ಸದ್ದಗುತ್ತಲೇ ಮತ್ತೆ ಶುರುವಾಯಿತು, ಅಮ್ಮನ ಕೆಮ್ಮಿನ ಗನ್ನು. ಥೋ ಯಾಕೆ ಬೇಕಿತ್ತು ನಂಗೆ. ಊಟ ಮಾಡೋಕೂ ನೆಮ್ಮದಿಯಿಲ್ಲ. ಕೆಮ್ಮಿ ಕೆಮ್ಮಿ ಸಾಯ್ತಾಳೆ.. ತಲೆ ನೋವಪ್ಪ ಇದೊಂದು.ಯಾರಿಗ್ ಬೇಕು ಊಟ.ಎಣ್ಣೆ ಜೊತೆ ತಿಂದ ಕಬಾಬ್ ಸಾಕು ಇವತ್ತಿಗೆ. ಮಲಗೋಣ...(ಕೆಮ್ಮು)
"ಸುಮ್ನೆ ಬಿದ್ಕೊಬಾರ್ದೆ? ಆ ಮಾತ್ರೆನಾದ್ರೂ ನುಂಗು. ಅದೇನ್ ಹೋಗೋ ಕಾಲದ ಕೆಮ್ಮೋ. ಬಾಯಿ ಮುಚ್ಕೊಂಡ್ ಮಲ್ಕೊಳಮ್ಮಾ.." ಯಾಕೋ ಟೈಮ್ ಸರಿಯಿಲ್ಲ. ಆ ಸಾಬೀನೂ ನನ್ನ ಉದಾಸೀನ ಮಾಡ್ತಾನೆ. ನಾನ್ಯಾರು ?? ನಾನಂದ್ರೆ ಏನು. ನಾ ಮನಸು ಮಾ...(ಕೆಮ್ಮು)... ಥೂ ಇದರ ... ಯಾಕೆ ಮುದ್ಕಿ ಸುಮ್ನೆ ಸಾಯೋದಲ್ವೇನೆ? ..ಛೆ!... ಕಣ್ಣಿಗ್ಯಾಕೋ ನಿದ್ದೇನೆ ಹತ್ತುತ ಇಲ್ವಲ್ಲ.. ಮಧ್ಯಾಹ್ನ ಮಲಗಿದ್ದಕ್ಕೋ ?.. ಅಲ್ಲ ಈ ಅಮ್ಮನ ಕೆಮ್ಮು... ಸ್ವಲ್ಪ ಕಣ್ಣು ಹತ್ತಿತು...ಮತ್ತೊಮ್ಮೆ ಕೆಮ್ಮಿದರೆ ನಾ ರಾಕ್ಷಸನಾಗಿಬಿಡುವುದೇ ಸರಿ.. ಇನ್ನು ಒಂದೇ ಒಂದು ಬಾರಿ ಕೆಮ್ಮಲಿ.. ಕೆಮ್ಮಿದಳೆ ?... ಛೆ ಇಲ್ಲ... ಅರೆ! ಕೆಮ್ಮಿಲ್ಲ? ನಿದ್ದೆ ಬಂತೇನೋ? ಸಧ್ಯ... ಆದರೂ ಭಯ.. ಇರು ನೋಡೋಣ.. ಧಬ್ಬ್! ಬಾಗಿಲು ಕಾಲಿಂದ ಒದ್ದೆ. ಏನಾಶ್ಚರ್ಯ! ಕೆಮ್ಮಿಲ್ಲ???
"ಅಮ್ಮಾ.." ಉತ್ತರವಿಲ್ಲ... ಅಲ್ಲೇ ಮಲಗಿದ್ದಲಿಂದಲೇ ಓರೆಗಣ್ಣಿನಲ್ಲಿ ನೋಡಿದೆ. ಸ್ವಲ್ಪವೂ ಮಿಸುಕಾಡುತ್ತಿಲ್ಲ... ಭಯವಾಗತೊಡಗಿತು. ಉಹೂ, ನಿದ್ದೆ ಹೋಗಿರಬಹುದೇ? ಸ್ವಲ್ಪ ಹೊತ್ತು ಹಾಗೇ ನಿಟ್ಟಿಸಿದೆ. ಉಸಿರಾಡುತ್ತಿದಂತೆ ಕಾಣಲಿಲ್ಲ .ಸಮೀಪಿಸಿ ನೋಡಿದೆ. ಉಹೂ.. ಎದೆ ಧಸಕ್ಕೆಂದಿತು.. ಅರಿಯದಂತೆ ಕಣ್ಣಿಂದ ಅಶ್ರುಧಾರೆ ಉಕ್ಕಿತು. ನೋಡಲಾರೆ. ಕೆಮ್ಮು ಹೆಚ್ಚಾಗಿತ್ತೇನೋ? ಎಲ್ಲ ಮಾತ್ರೆಗಳನ್ನು ಒಮ್ಮೆಲೇ ನುಂಗಿಬಿಟ್ಟಳೆ? ನೆನ್ನೆ ತಾನೇ ತಂದ ಹೊಸ ಮಾತ್ರೆ ಡಬ್ಬಿ ಖಾಲಿಯಾಗಿತ್ತು...ಮಗನ ಮೌಡ್ಯತೆ ದುರಹಂಕಾರದಿಂದಾಗುವ ಕಾರ್ಪಣ್ಯಕ್ಕೆ, ಪ್ರೀತಿಯ ಪಾಶಕ್ಕೆ ಸಿಲುಕಿ, ಮಮತೆಯ ಮೂರ್ತಿವೆತ್ತವಳು ನನ್ನಿಂದ ದೂರವಗಿದ್ದಳು....
matte mecchuge aytu.. chennagide mamta.
ReplyDeleteBelagge belagge Odi thale kedo thara bardhiddhiyalla mamzi...
ReplyDeleteGud one kane...
nimduke chandagi bardayte.
ReplyDeleteNice post :)
ReplyDeleteSakkathaagide :) you got a new fan in me ;)
ReplyDeleteಹ್ಮ್... ಚೆನ್ನಾಗಿದೆ ಮಮತಾ... ಒಂಥರ ವಿಶಣ್ಣವಾದ ಆವರಿಸಿಕೊಂಡಿದೆ ಮನಸ್ಸಿಗೆ... ಏದ್ದೇಳು ಮಂಜುನಾಥ ಫಿಲ್ಮ್ ನೆನಪಾಯ್ತು.... ಗಹನವಾದ ಬರವಣಿಗೆ... ಅಭಿನಂದನೆಗಳು ...
ReplyDeleteThanks Everyone.. Howdu Eddelu manjunatha tharaha ne.. aadre naane manjunaathanaade illi..
ReplyDelete