ಕೆಲವೊಮ್ಮೆ ಮನೆಯಲ್ಲಿನ ಅಜ್ಜಿ ಅಜ್ಜಂದಿರು ತಮ್ಮ ವಿಪರೀತ ವರ್ತನೆಯಿಂದ ತಲೆ ಬಿಸಿ ಮಾಡಿದ್ದುಂಟೆ? ವಟ ವಟ ಎಂದು ಮಾತಾಡುತ್ತಾ , ಎಲ್ಲ ಚರ್ಚೆಗಳಲ್ಲೂ ತಮ್ಮ ತರ್ಕ ಮುಂದಿಟ್ಟು ಹೊಸ ಪೀಳಿಗೆ ಮತ್ತು ತಮ್ಮ ನಡುವಿನ ಮಹಾ ಮಹಾ ಅಂತರವನ್ನು ಸ್ಪಷ್ಟ ಪಡಿಸುವರೆ? ಹೀಗೊಂದು ಅಜ್ಜಿ ನಮ್ಮೆಲ್ಲರಿಗೂ ಸಮೀಪದಲ್ಲಿದ್ದಾರೆ. ನಮಗೆ ಸ್ವಂತ ಅಜ್ಜಿಯಲ್ಲ , ನಮ್ಮ ಅಕ್ಕನ ಅತ್ತೆ. ವಯಸ್ಸು ೭೨. ಅವರ ಕಾಲದಲ್ಲಿ ತುಂಬಾ ಸುಂದರಿ . ಈಗಲೂ ಮುದ್ದು ಮುದ್ದು. ಕರಾವಳಿ ಕಡೆ ಸೌಂದರ್ಯ ಕೇಳಬೇಕೆ? ಮಹಾನ್ ಮಡಿವಂತೆ . ನಾ ಚಿಕ್ಕವಳಿದ್ದಾಗಿನ ನೆನಪು, ಊರಿಗೆ ರಜೆಗೆಂದು ಹೋದಾಗಲೆಲ್ಲಾ , ಅಪ್ಪಿ ತಪ್ಪಿ ಬಹಿಷ್ಟರಾದ ಹೆಂಗಸರನ್ನು ಅಕಸ್ಮಾತ್ತಾಗಿ ಮುಟ್ಟಿದರೆ ಮುಗಿಯಿತು ಕಥೆ. ಒಂದು ಕಲ್ಪನಾ ರೇಖೆ ಎಳೆದಂತೆ ಊಹಿಸಿಕೊಂಡು , ಬಾವಿ , ಕೊಟ್ಟಿಗೆ ಯಾವ ಗೋಡೆಯನ್ನು ಮುಟ್ಟದೆ ನೇರ ಮನೆಯಿಂದ ಬಹು ದೂರ ಇರುವ ಸ್ನಾನದ ಮನೆಗೆ ಹೋಗಿ ಅಲ್ಲಿಯೂ ಒಲೆ - ಮಡಕೆ ಏನೂ ಮುಟ್ಟದೆ ಸ್ನಾನ ಮಾಡಿ ಹಾಗೆ ನಿರ್ವಾಣ ಓಡಿ ಬಂದು ಬಟ್ಟೆ ಬದಲಿಸಬೇಕು(ನಮ್ಮ ಈಗಿನ ವಯಸ್ಸು ಕಲ್ಪಿಸಿಕೊಳ್ಳಬೇಡಿ ) . ಪ್ರತಿ ಸಾರಿ ಇದೊಂದು ಆಟವೇ ಆಗುತ್ತಿತ್ತು ನಮಗೆ . ಮತ್ತವರು ಮಾಡಿದ ಅಡುಗೆ ರುಚಿ ! ಅದೆಂಥ ಮೃಷ್ಟಾನ್ನ ಭೋಜನ . ಅಂದಿನ ದಿನಗಳಲ್ಲಿ ಮಿಕ್ಸಿ , ಗ್ರೈಂಡರ್ ಕಾಣದ ಕೈ , ಅರೆಗಲ್ಲಿನ ಮೇಲೆ ನುಣ್ಣಗೆ ರುಬ್ಬಿ , ಒಲೆಯನ್ನು ಊದಿ ಊದಿ ಮಾಡುತ್ತಿದ್ದ ಅಡುಗೆಯ ರುಚಿ ಅಸಾಧಾರಣ!
ಚಿಕ್ಕ ವಯಸ್ಸಿನಲ್ಲೇ ಒಂದಾದ ಮೇಲೊಂದು ಆಘಾತಗಳನ್ನು ಅನುಭವಿಸಿರುವ ಹಿರಿ ಜೀವ ! ಇರುವ ಒಬ್ಬನೇ ಮಗ , ನಂತರ ಸೊಸೆ , ಗಂಡ ಹೀಗೆ ಎಲ್ಲರೂ ವಿಧಿ ಪರವಶರಾಗಿ ಕೊನೆಗೆ ಒಬ್ಬ ಮಗಳು ಮತ್ತು ೪ ಮೊಮ್ಮಕ್ಕಳನ್ನು ಬಿಟ್ಟರೆ ವಾರಗಿತ್ತಿಯರು ಮತ್ತವರ ಸಂಸಾರ ಇರುವ ಒಂದು ದೊಡ್ಡ ಮನೆ. ಇಷ್ಟೇ ಅಜ್ಜಿಯ ಆಸ್ತಿ . ನೋಡಿಕೊಳ್ಳಲು ಆಗದೆ ಇದ್ದ ಆಕಳುಗಳನ್ನೆಲ್ಲ ಮಾರಿಬಿಟ್ಟಿದ್ದರು .. ಮೊಮ್ಮಕ್ಕಳೆಲ್ಲ ಬೆಳೆದು, ನೌಕರಿ ಸೇರಿ , ಬೆಂಗಳೂರಿನಲ್ಲಿ ಮನೆ ಮಾಡಿ ಕರೆಸಿಕೊಂಡಿದ್ದರು .
ಇಲ್ಲಿನ ಜೀವನಕ್ಕೆ ಹೊಂದಿಕೊಳ್ಳುವುದು ಕಷ್ಟವಾದರೂ ಹೇಗೋ ನಡೆಸಿಕೊಂಡು ಹೋಗುತ್ತಿದ್ದರು ...
ಅಂದೊಮ್ಮೆ ಮನೆಯಲ್ಲೇ ಒಂದು ಸಣ್ಣ ಅಪಘಾತ ! ಅಜ್ಜಿ ಕೂತಲ್ಲಿಂದ ಬಿದ್ದು ಕೈ ಮುರಿದುಕೊಂಡು ಬಿಟ್ಟರು. ಮನೆಯಲ್ಲಿ ಕೊನೆಯ ಮೊಮ್ಮಗಳನ್ನು ಬಿಟ್ಟರೆ ಇನ್ನು ಯಾರು ಇಲ್ಲ.
ಹಾಗೆ ಹೀಗೆ ಮಾಡಿ ಅಂಬುಲೆನ್ಸ್ ಕರೆಯಿಸಿ ಅಜ್ಜಿಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅಜ್ಜಿಗೆ ಪೆಟ್ಟು ಬಿದ್ದ ಕಾರಣ ಪಾರ್ಶ್ವವಾಯು ಆಯಿತು. ಆಕೆಯ ಮುಖದ ಎಡ ಭಾಗ ಸಂಪೂರ್ಣ ದುರ್ಬಲವಾಗಿತ್ತು. ರಾತ್ರಿಯಾದರೂ ಯಾವುದಕ್ಕೂ ಪ್ರತಿಕ್ರಿಯಿಸುತ್ತಿರಲಿಲ್ಲ . ಡಾಕ್ಟರ್ ಮನೆಯವರನ್ನೆಲ್ಲ ಕರೆಯಿಸಿಬಿಡಿ ಎಂದು ಬಿಟ್ಟರು. ಮನೆ ತುಂಬಾ ಓಡಾಡಿಕೊಂಡು ಚೈತನ್ಯದಿಂದ ಇರುತ್ತಿದ್ದ ಅಜ್ಜಿಯನ್ನು ಈ ಸ್ತಿತಿಯಲ್ಲಿ ನೋಡಿ ಕನಿಕರವಾಯಿತು. ICU ನಲ್ಲಿ , ಆಕ್ಸಿಜನ್ ಮಾಸ್ಕ್ ಹಾಕಿ , ECG ಕೊಟ್ಟು monitor ಮಾಡುತ್ತಿದ್ದ ಆ ಚಿತ್ರ ನೆನೆಸಿಕೊಂಡರೆ ಬೇಜಾರೆನಿಸುತ್ತದೆ. ಎಲ್ಲರೂ ನೆಂಟರಿಷ್ಟರಿಗೆ ಫೋನ್ ಮಾಡಿ ಸುದ್ದಿ ತಲುಪಿಸಲು ಶುರು ಮಾಡಿದರು.
ಆಸ್ಪತ್ರೆಯಲ್ಲಿ ಒಬ್ಬರು ಉಳಿದು ಮಿಕ್ಕಿದವರೆಲ್ಲ ಮನೆಗೆ ಬಂದೆವು . ಸುಮಾರು ೪ ಗಂಟೆಗೆ ಮತ್ತೆ ಅಣ್ಣನ ಫೋನ್ ಬಂತು . ಅಜ್ಜಿಯ BP ಒಮ್ಮೆಲೇ ಕ್ಷೀಣಿಸಿದೆ ಎಂದು. ಯಾರೂ ಮಲಗಿರಲಿಲ್ಲ , ಮತ್ತೆ ಎಲ್ಲರು ಒಳಗೊಳಗೇ ಬಿಕ್ಕುತ್ತಾ ಇದ್ದ ದೇವರು ದಿಂಡಿರನ್ನೆಲ್ಲ ಪ್ರಾರ್ಥಿಸಿದೆವು. ನಿಜವಾದ ಪ್ರೀತಿ Airport ನಲ್ಲಿ ವಿದಾಯ ಹೇಳುವಾಗ ಕಾಣುತ್ತದೆ ಮತ್ತು ನಿಜವಾದ ಪ್ರಾರ್ಥನೆ ಆಸ್ಪತ್ರೆಯ ಗೋಡೆಗಳಿಗೆ ಕೇಳಿಸುತ್ತದೆ ಎಂದು ಕೇಳಿದ್ದೆ. ಅದು ಇಂದು ಗುರುತಾಯಿತು. ಸ್ವಲ್ಪ ನಿದ್ದೆ ಹತ್ತುತ್ತಲೇ ಮತ್ತೆ ಎದ್ದು ಆಸ್ಪತ್ರೆಗೆ ಧಾವಿಸಿದೆವು.
ಪವಾಡಗಳ ಬಗ್ಗೆ ಕೇಳಿದ್ದೆ, ಆದರೆ ಎಂದೂ ನಂಬಿರಲಿಲ್ಲ. ಅಂದಿನ ದಿನ ಪ್ರಾರ್ಥನೆಗಳಿಗೂ ಶಕ್ತಿ ಇದೆ ಎಂದೆನಿಸಿತು. ಇಷ್ಟು ಓದಿ ಕಲಿತು , ಮುನ್ನಡೆದಿದ್ದರು ಮನದಾಳದಲ್ಲಿ ಒಂದು ನಂಬಿಕೆ ಗಟ್ಟಿಯಾಯಿತು. ಪ್ರಾರ್ಥನೆಗಳು ಫಲಿಸುತ್ತವೆ! ಹೌದು !
ಅಜ್ಜಿ ಬೆಳ್ಳಾನ ಬೆಳಗ್ಗೆ ಎದ್ದು, ನೆನ್ನೆ ಏನೂ ನಡೆದಿಲ್ಲ ಎಂಬಂತೆ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ICU ಸುತ್ತ ಒಮ್ಮೆ ನೋಡಿ , ನರ್ಸ್ ನ ಕರೆದು , "ಏಯ್ ನನಗೊಂದು ಲೋಟ ಚಾ ತಂದು ಕೊಡ್ತೀಯೇನೆ ?" ಅಂದಿದ್ದಾರೆ !! ನಮಗೆಲ್ಲ ಅಪಾರ ಸಂತೋಷ ಮತ್ತು ನಗು. ಒಬ್ಬರಾದ ಮೇಲೆ ಒಬ್ಬರಂತೆ ಅವರನ್ನ ಭೇಟಿ ಮಾಡ್ಲಿಕ್ಕೆ ಹೋದೆವು. ಹಿಂದಿನ ದಿನ ನಡೆದ ಸಂಗತಿಯ ಕೊಂಚ ಅರಿವೂ ಇರದ ಅಜ್ಜಿ ನನ್ನನ್ನು ನೋಡಿ "ನೀ ಯಾವಾಗ ಮೈಸೂರಿಗೆ ಬಂದ್ಯೇ?" ಅಂದರು. "ಅಜ್ಜಿ ಇದು ಮೈಸೂರಲ್ಲ ಬೆಂಗಳೂರು" ಎಂದೆ .
ಅಜ್ಜಿ ಮತ್ತೆ ICU ಸುತ್ತ ನೋಡಿ, "ಇಲ್ಲಿ ಮೇಲೊಂದು ರೂಮು ಮತ್ತು ಕೆಳಗೊಂದು ರೂಮಿದೆ , ಬರೀ ಮೆಟ್ಟಿಲುಗಳೇ , ನನ್ನ ಕೈಲಿ ಹತ್ತೊಕಾಗಲ್ಲ" ಎಂದರು ... ಏನೋ ಹುಟ್ಟಂದಿನಿಂದ ಈ ಆಸ್ಪತ್ರೆ ನೋಡಿರುವ ಹಾಗೆ..ನಾ ನಕ್ಕೆ , ನೆನ್ನೆಯಿಂದ stretcher ಮೇಲೆ ಇದ್ದು, ಲೋಕದ ಪರಿವೆ ಇಲ್ಲದೆ ಬಿದ್ದಿದ್ದ ಅಜ್ಜಿಗೆ ಭ್ರಮೆಯೇನೋ ಎಂದು. ಆದರೆ ನಿಜವಾಗಿಯೂ basement ನಲ್ಲಿ ಲ್ಯಾಬ್ ಮತ್ತು ಮೇಲೆ ವಾರ್ಡ್ಗಳು ಇದ್ದವು ಅಲ್ಲಿ! ಮತ್ತೆ ನನ್ನನ್ನು ಉದ್ದೇಶಿಸಿ "ನೆನ್ನೆ ಮೆಂತೆ ಇಡ್ಲಿ ಹಿಟ್ಟು ರುಬ್ಬಿಟ್ಟು ಬಂದಿದ್ದೇನೆ , ಬಿಸಿ ಬಿಸಿ ಇಡ್ಲಿ ಮಾಡಿಕೋ , ಬೆಲ್ಲ ಸ್ವಲ್ಪ ಹಾಕು, ಹಸಿವಾಗಿರಬೇಕಲ್ಲ ನಿನಗೆ " ಎಂದರು .. ನನ್ನ ಕಣ್ಣಲ್ಲಿ ನೀರಾಡಿತು. ಇಷ್ಟು ನೋವು ತಿನ್ನುತ್ತ ಮಲಗಿದ್ದಾರೆ , ಕೈ ಮೂಳೆ ಮುರಿದಿದೆ, ಕೈ ಎಲ್ಲ ನೀಲಿ ನೀಲಿ ಆಗಿ ಸೊಟ್ಟಗಾಗಿದೆ , ಉಸಿರಾಡಲು ಯಂತ್ರ ಅಳವಡಿಸಿದ್ದಾರೆ , ಆದರು ನಾನು ತಿನ್ನಲಿಲ್ಲ ಎಂದು ಯೋಚನೆ!
ಅದು ಅಲ್ಲದೆ , ಅವರ ನೆನಪಿನ ಶಕ್ತಿ ಅದ್ಭುತ ! ನಿಜವಾಗಿಯೂ ಹಿಂದಿನ ದಿನ ಮೆಂತೆ ಇಡ್ಲಿ ಹಿಟ್ಟನ್ನು ರುಬ್ಬಿಟ್ಟು ಕೂತಾಗ ಆದ ಅಪಘಾತ ಅದು..!
ಅಲ್ಲಿ ಕುಳಿತ ನರ್ಸ್ ಮತ್ತು ಬಾಯ್ ರನ್ನು ಉದ್ದೇಶಿಸಿ "ನನ್ನಿಂದ ನಿಮಗೆಲ್ಲ ಎಷ್ಟು ತೊಂದರೆ ಆಯಿತು ಅಲ್ಲವೇ?" ಎಂದರು . ನರ್ಸ್ ಹತ್ತಿರ ಬಂದು ಮಾತನಾಡಿಸಿದರು . ನಾವೆಲ್ಲಾ ಪದೇ ಪದೇ ICU ಕಡೆ ಹೋಗಲಿಲ್ಲ . ಅಜ್ಜಿ ಎಲ್ಲರನ್ನು ಮಾತನಾಡಿಸಿ ಸುಸ್ತಾಗುತ್ತಾರೆಂದು.
೪-೫ ದಿನ ಬಿಟ್ಟು ಅಜ್ಜಿ ಡಿಸ್ಚಾರ್ಜ್ ಆದರು. ಅಲ್ಲಿದ್ದ ನರ್ಸ್ ಬಾಯ್ ಎಲ್ಲರು ಅಜ್ಜಿಯನ್ನು ಕಳಿಸಿಕೊಟ್ಟು, ಎಂತಹ ನಗು ಮುಖದ ಅಜ್ಜಿ ಎಂದು ಖುಷಿ ಪಟ್ಟರು.
ಅಜ್ಜಿ ಈಗ ಚೇತರಿಸಿಕೊಳ್ಳುತ್ತಾ ಇದ್ದಾರೆ . ಒಂದು ಸಣ್ಣ ಶೀತ , ನೆಗಡಿಯಾದರೆ , ಜ್ವರ ಬಂದರೆ , ಜೀವವೇ ಹೋದ ಹಾಗೆ ಆಡುವ ಕೆಲವರಿಗೆ, ಸಾವನ್ನು ಗೆದ್ದು ಬಂದ ಈ ಅಜ್ಜಿ ಎಂತಹ ಅಪರೂಪದ ಉದಾಹರಣೆ! ಇನ್ನು ನೂರು ಕಾಲ , ಸ್ವಸ್ಥವಾಗಿ ಆರೋಗ್ಯಪೂರ್ಣವಾಗಿ ಬದುಕಿ ಸೆಂಚುರಿ ಬಾರಿಸಲೆಂದು ಆಶಿಸುತ್ತಾ ನನ್ನ ಬರವಣಿಗೆಗೆ ಸದ್ಯ ಇತಿ ಶ್ರೀ ಹೇಳುತ್ತಿದ್ದೇನೆ ...
ಪ್ರೀತಿ ತುಂಬಿದ ಅಜ್ಜಿಗೆ ನನ್ನ ಪ್ರಣಾಮಗಳು.
ReplyDeleteKhandita tilistini avarige Sunaath avare ...
ReplyDeleteಅಜ್ಜಿದು ಒಂದು ಫೋಟೋ ಇದ್ರೆ ನಿಮ್ಮ ಬರಹಕ್ಕೆ ಸೇರಿಸಿ ಮೇಡಮ್. ಈ ಲೇಖನ ಓದಿ ನಿಮ್ಮ ಅಜ್ಜಿಯವರನ್ನ ನೋಡಬೇಕು ಅನಿಸೊತ್ತೆ. :)
ReplyDeletemore than admiring her ability, she defiantly will have lot of treasure of experience , wrt Food way of life Good , Do and Don'ts just spare some time talking to her and collect and document she is one of rare ನಮ್ಮ ಹಿರಿಯ ತಲೆಮಾರಿನ ಅನುಭವ /ಜಾನಪದ ಪರಂಪರೆಯ ಕಣಜ , pls don't waste time, we need have patience collecting information from them many times it wil test ur patience.
ReplyDelete