badge

Sunday, July 24, 2011

IT ಯಲ್ಲೂ ಮಜಾ ಐತಿ

IT  ಇಂಡಸ್ಟ್ರಿ ಅಂದ್ರೇನೆ ಹೀಗೆ ಕಣ್ರೀ 22 ಇಂದ 52 ವಯಸ್ಸಿನ ಎಲ್ಲಾ ಶೇಪ್, ರೇಸ್, ಟೈಪ್, ಕಲರ್ ಜನ ಸಿಗ್ತಾರೆ ನೋಡಿ. ಉದಾಹರಣೆಗೆ, ನಲವತ್ ಆದ್ರೂ ಹೆಣ್ಣು ಸಿಗದೇ ಪರದಾಡ್ತಿರೋ ಬ್ಯಾಚೆಲರ್ಗಳು, ಇಂಜಿನಿಯರ್ ಗಂಡ ಸಿಗ್ಲಿ ಅನ್ನೋ ಒಂದೇ ಉದ್ದೇಶದಿಂದ ಇಂಜಿನಿಯರಿಂಗ್ ಮಾಡಿ ಬಂದಿರೋ ಕನ್ಯಾಮಣಿಗಳು, ಮನೆ ಲೋನ್ ತೀರಿಸಕ್ಕಾಗದೆ ಗಂಡ – ಹೆಂಡತಿ ಶಿಫ್ಟ್ ವೈಸ್ ಕೆಲಸ ಮಾಡಿ ಮಕ್ಳನ್ ಬೇಬಿ ಸಿಟ್ಟರ್ ಪಾಲು ಮಾಡಿರೋ ಪೇರೆಂಟ್ಸ್ ಗಳು, ದಿನಕ್ಕೆ 14 ಅವರ್ ಕೆಲಸ ಮಾಡಿ ಹೊತ್ತಲ್ಲದ್ ಹೊತ್ತಲಿ ಇಮೇಲ್ ಕಳ್ಸೋ ಪುಡಾಂಗುಗಳು, ಅಲ್ಲೋ ಇಲ್ಲೋ ಒಬ್ರೋ ಇಬ್ರೋ ಅನ್ನೋ ಹಾಗೆ ನನ್ ಥರಾ ಡೆಡಿಕೇಟೆಡ್ / ಆನೆಸ್ಟ್ / ಹಾರ್ಡ್ ವರ್ಕಿಂಗ್ / ಇಂಟೆಲಿಜೆಂಟ್ ಜನಾನು ಇರ್ತಾರೆ ಅನ್ನಿ....(ಹಾಗಲ್ಲಾರೀ.. ಬ್ಲಾಗ್ ಬರೀವಾಗ ಸ್ವಲ್ಪ ಅತಿಶಯೋಕ್ತಿ ಇದ್ರೆ ಬ್ಲಾಗಿಗು ಬೆಲೆ ಇರುತ್ತೆ ಅಂತ ನಮ್ ಬ್ಲಾಗ್ ಮೇಸ್ಟ್ರು ಹೇಳ್ತಾ ಇರ್ತಾರೆ)

ಅಂದಹಾಗೆ ನಾನ್ಯಾಕೆ ಕನ್ನಡದಲ್ಲಿ ಬ್ಲಾಗ್ ಮಾಡ್ತಾ ಇದೀನಿ ಅಂತ ನೀವೆಲ್ಲ ಕೆಳ್ಲೇ ಇಲ್ಲಾ... ಇದು ಒಂಥರಾ ಫೀಲಿಂಗ್ಸ್ ಗೆ ಸಂಭಂಧಿಸಿದ ವಿಚಾರ ಕಣ್ರೀ. ನಮ್ ಕಷ್ಟಾನ ನಮ್ ಮದರ್ ಟಂಗಲ್ಲಿ
ಹಂಚ್ಕೊಂಡ್ರೆ ಮನಸ್ಸು ಹಗುರ ಆಗುತ್ತೆ ಅಂತಾರೆ. ಕೊಂಕಣೀಲಿ ಬರಿಯೋ ಸಾಹಸ ಯಾಕೆ ಮಾಡ್ಲಿಲ್ಲಾ ಅಂತ ಕೆಳ್ದೇ ಇರೋದೇ ವಾಸಿ, ಯಾಕೆಂದ್ರೆ, ನನ್ ಭಾಷಾ ಪರಿಜ್ನಾನ ನೋಡಿ ನೊಬೆಲ್-ಗಿಬೆಲ್ ಕೊಟ್ಟಾರು ಆಮೇಲೆ.  ಅದು ಅಲ್ದೆ ನಮ್ ಉಮೇಶ್ ಬಾಳಿಕಾಯಿ ಅವ್ರು ಮೊನ್ನೆ ತಾನೆ ಮತ್ತೆ ಮತ್ತೆ ಕನ್ನಡದಲಿ ಬರಿಯಮ್ಮ ಅಂತ ಹೇಳಿದ್ರು ಬೇರೆ. ನವೆಂಬರ್ ತಿಂಗಳೂ ಹತ್ರ ಬರ್ತಿದೆ, ಕನ್ನಡ ಸಂಘದವರ ಹಾಗೆ ನನಗೂ ನವೆಂಬರ್ ತಿಂಗಳಲ್ಲೇ ಕನ್ನಡ ನೆನಪಾಗುತ್ಯೇ ಅಂತ ಏನೂ ಕೇಳ್ಬೇಡಿ.  ವರ್ಷಪೂರ್ತಿ ನೆನಪಿರುತ್ತೆರೀ!
ಸರಿ ಸರಿ,ಬನ್ರಿ ದುಃಖ ಹಂಚಿಕೊಳ್ಳೋ ಕಾರ್ಯಕ್ರಮಾನ ಕಂಟಿನ್ಯೂ ಮಾಡೋಣ.. ಪ್ರಾಬ್ಲಮ್ ಇಂದಿನದಲ್ಲ ಮಾರಾಯ್ರೆ.. ಸಾವಿರದೊಂಬೈನೂರ್ ಎಷ್ಟರಲ್ಲೋ,ಹುಟ್ಟಿದೆಲ್ಲಾ ಮಕ್ಳು ಡಾಕ್ಟರ್ ಆಗಬೇಕು ಇಲ್ಲ ಇಂಜಿನೀರ್ ಆಗ್ಬೇಕು ಅಂತ ದೊಡ್ಡೋರೆಲ್ಲ ಉಪವಾಸ ಸತ್ಯಾಗ್ರಹ ಮಾಡಿದ್ರಂತೆ. ಎಲ್ಲಾರ್ಗೂ ಸರಕಾರೀ ಕೆಲಸ ಸಿಗೋದ್ ಕಷ್ಟ ನೋಡ್ರಿ ಹಾಗಾಗಿ. ಹಾಗೆ ಪರಂಪರಾಗತವಾಗಿ ನಮ್ಮನೆಲಿರೋ ಎಲ್ಲ ದೊಡ್ಡೋರಿಗೂ ಇದೆ ರೂಢಿಯಾಯ್ತು - ನಾವೆಲ್ಲ PCMB PCMC PCME ಅಂತ pshycho ಗಳಾದ್ವಿ. competitionನಂತೆ ಎಲ್ಲ ಪಾಸ್ ಆಗಿ, ಇಂಜಿನಿಯರ್ ಕಾಲೇಜ್ಗು ಸೇರಿದ್ವಿ. ಅಲ್ಲೂ ತಲೆ ಬುಡ ನೋಡದೆ ಪಾಸ್ ಆಗೋ ತಯಾರಿಯಲ್ಲಿ ಓದಿ ಕಡೆದು ಹಾಕಿದ್ವಲ್ಲ ಅಲ್ಲೇ mistake ಆಗಿದ್ದು. ಫೇಲ್ ಆಗಿದ್ದಾದ್ರೆ ಉಧ್ಧಾರ ಆಗ್ತಿದ್ವೋ ಏನೋ.
 ಹೋಗ್ಲಿ ಬಿಡಿ - ಇಲ್ಲಿ ತನಕ ಬಂದಾಯ್ತು, ನಡೆ ಮುಂದೆ ನಡೆ ಮುಂದೆ ಅಂತ ಬಂಡಿ ನಡೆಸ್ತಾ ಹೋಗ್ಬೇಕು. ಹಾಗ್ ನೋಡಿದ್ರೆ ಅಂಥ ಭಯಂಕರವಾಗೆನೂ ಇಲ್ಲಾ ರೀ ಜೀವನ. ವಾರೆಕ್ಕೆ 45-75 ಅವರ್ ಕೆಲ್ಸ ಮಾಡ್ತೀವಿ, ವೀಕ್ ಡೇ ಅಂಬೋ ವೀಕ್ ಡೇ ಗಳಲ್ಲಿ ಊಟ ತಿಂಡಿ ಸರಿಯಾಗಗದ ಕಾರಣ ವೀಕೆಂಡ್  ಗಳಲ್ಲಿ ಕಂಡೂ ಕಾಣದ ಭಕ್ಷ್ಯ- ಭೋಜನ ತಿಂದು, ಇರೋ ಬರೋ  salaryನೆಲ್ಲ ಸುರಿದು, ಕ್ಯಾಲೊರೀಸ್ ಎಂಬ ಭೂತದ ಭಯದಲ್ಲಿ  excercise ಮಷೀನೇ ಬೆವರೋ ಹಾಗೆ ಓಡ್ತೀವಿ. ತಿಂಗಳಿಗೆ 1000 ರೂಪಾಯಿ ಜಿಮ್ ಗೆ ಹಾಕಿ ಕರಗಿತೋ ಇಲ್ಲವೋ ಬಡಜೀವ ಅಂತ ಪದೇ ಪದೇ weighing  ಮಷೀನ್ ಮೇಲೆ ನಿಂತಾಗ, ಅದು ನಮ್ಮನ್ ನೋಡಿ ಮಾಡೋ ವಕ್ರ ಮೂತಿಗೂ competition ಅನ್ನೋ ಹಾಗೆ ಮೂತಿ ಮಾಡ್ತಿವಿ. ನೆನ್ನೆ ಓಡಿದ್ 30 ನಿಮಿಷಕ್ಕೂ ರಾತ್ರಿ Mc.Donalds ನಲ್ಲಿ ತಿಂದ friesಗು tally ಮಾಡಿ ಖುಷಿ ಪಡ್ತೀವಿ. ವೀಕೆಂಡ್ ಪಾರ್ಟಿ ಅಂತ 30 ml ಟೆಕೀಲ ಗೆ ಇನ್ನೂರ್ ರುಪಾಯಿ ಕೊಟ್ಟು ಕಿವಿಗಡಚಿಕ್ಕೋ ಮ್ಯುಸಿಕ್ ಬಾಕ್ಸ್ ತಾಳಕ್ಕೆ ಕುಣಿದು, ನಾಲ್ಕೇ ನಾಲ್ಕು  ಗೋಬಿ ಮಂಚೂರಿಯನ್ ಒಂದು ಪ್ಲೇಟ್ ಮೇಲೆ, ಬೆಂದು ಬಸವಳಿದು ನಮ್ಮನ್ನು ವ್ಯಂಗ್ಯವಾಗಿ ನೋಡಿ ನಕ್ಕಾಗ, ಬಿಲ್ ನಿಂದಾದ shock ಗೋ ಎಂಬಂತೆ ಒಂದೇ ಒಂದು ಪೀಸ್ ಉಳಿಸಿ ಆಚೆ ಬರ್ತೀವಿ.
BMTC ಗೆ almost ಟಾಟಾ ಹೇಳಿರೋ ಹಾಗಿದೆ ನಮ್ಮಲ್ಲಿ ಕೆಲೋವ್ರು(especially ನಾನೆ). ಅದೆನೋ ಆಟೋ ವ್ಯಾಮೋಹ ನಮ್ಮಂಥೋರಿಗೆ. ಬಸ್ ಸ್ಟಾಪ್ ಎಲ್ಲಿದೆ ಅನ್ನೋ ಗೋಜಿಗೆ ಹೆದರಿ ಆಟೋ ಹೆಸರಲ್ಲಿ ಸುಲಿಗೆ ಮಾಡಿಸ್ಕೊಂಡು, ಬದಲಾಗಿ ಅವರ ಜನ್ಮಾನೆಲ್ಲಾ ಜಾಲಾಡಿ, ಇದ್ದ ಬದ್ದ ಆಟೋ ಡ್ರೈವರ್ ಗಳನೆಲ್ಲಾ ತೆಗಳಿ, ಪದೇ ಪದೇ ಆಟೋ ಮೊರೇನೆ ಹೋಗ್ತೀವಿ.
 ನಿಜ ಹೇಳ್ಬೇಕು ಅಂದ್ರೆ ಇಷ್ಟು ದೊಡ್ಡ ಪ್ರಪಂಚದಲ್ಲಿ ನಮ್ ಕಷ್ಟಾನ ಕೇಳಿ ಅರ್ಥ ಮಾಡ್ಕೊಳೋದು ಒಂದೇ ವಸ್ತು. ಅದೇ ನಾವ್ ಕೆಲಸ ಮಾಡೋ ಸಿಸ್ಟಮ್. ಒಂದ್ 4X4 cubicle ಅಲ್ಲಿ code ಮಾಡಿ, compile ಮಾಡಿ,run ಮಾಡಿ, test ಮಾಡಿ, youtube,facebook  ನೋಡ್ಕೊಂಡು, ಬೇಜಾರಾದಾಗ ಬ್ಲಾಗ್ ಬರೆಯೋಕೆ ಸಹಾಯ ಮಾಡುವ ಸ್ನೇಹಿತ ಕಮ್ ಸ್ನೇಹಿತೆ. Facebook ಅಂದಾಗ ನೆನಪಾಯ್ತು ನೋಡಿ, ಅದು ಒಂಥರಾ stress buster ನಮ್ಮಂಥೋರಿಗೆ. ದಿನದ 9-10 ಅವರ್ ಅಲ್ಲಿ 30 ನಿಮಿಷಕ್ಕೊಮ್ಮೆಯೆಂಬಂತೆ, ಒಂದೆರಡ್ ನಿಮಿಷ ಅವರಿವರ  profile  ನೋಡಿ, ಯಾರ್ ಮದುವೆ ಆಯಿತೋ, ಯಾರ್ ಪಾಪುಗೆ ಹಲ್ಲು ಬಂತೋ, relationship status ಚೇಂಜ್ ಆಯಿತೋ, ಏನು ಇಲ್ಲಾಂದ್ರೆ farmville ಯಿಂದಾ ಬಂದ ಕೋಳಿ, ಕುರಿ, ಎಮ್ಮೆಗಳನ್ನ accept  ಮಾಡೋದ್ರಲ್ಲೂ ಒಂಥರಾ  stress relieve ಆಗುತ್ತೆ. ಅದೆಲ್ಲಾ ಮಾಡಿ ಮತ್ತೆ ಕೆಲ್ಸ ನೆನಪಾಗಿ, guilty ಫೀಲ್ ಮಾಡ್ಕೊಳೋದು ಇದೆ. ಇಷ್ಟೆಲ್ಲಾ emotions ಒಂದು ಸಿಸ್ಟಮ್ ಮುಂದೆ ತೋರಿಸ್ತೀವಿ, relate ಮಾಡ್ತೀವಿ, colleagues ಜೊತೆ communicator /IM ಮ್ಯಾನೇಜರ್ ಗಳನ್ನ ಹೊಗಳಿ ತೆಗಳಿ ಸಮಾಧಾನದ ನಿಟ್ಟುಸಿರು ಬಿಡ್ತೀವಿ.

ಇದೆಲ್ಲ realise ಆಗಿ, ನಮ್ ಲೋನ್ ಎಲ್ಲ ತೀರಿ, ನಮ್ ಮಕ್ಳು settle ಆಗಿ ಅವ್ರ ಮಕ್ಳಿಗೆ ಗ್ರೀನ್ ಕಾರ್ಡ್ ಸಿಗೋ ವರೆಗೆ ನಮ್ ಆಯುಷ್ಯದ buffer almost ಫುಲ್ ಆಗಿರುತ್ತೆ ಬಿಡಿ. ಹಾಗೆ ವೈರಾಗ್ಯ ಬಂದು ಒಂದೆರಡ್ ಲೈನ್ ಬರೆದೆ, ತಲೆಗೆ ಮನಸಿಗೆ ಹಚ್ಚಿಕೊಳ್ದೆ window ಕ್ಲೋಸ್ ಮಾಡ್ರಿ. ಅಲ್ಲಿ background ಅಲ್ಲಿರೋ ನಾಲಕ್ಕಾರ್ ಕರೀ DOS ಸ್ಕ್ರೀನ್ ಏನೋ ಹೇಳ್ತಿದೆ ಕೇಳಿ!!!

Tuesday, July 12, 2011

ತಾರ್ಪಾಲಿನರಮನೆ

"ಸಂಜೆ ಹಿಡಿದ ಜಡಿಮಳೆ ನಿಲ್ಲೊದುಂಟೆ .." ಎಂಬ ಅವ್ವನ ಮಾತು ನೆನಪಾಗಿ ಒಂದೇ ಸಮನೆ ರಾಚುತಿದ್ದ ಮಳೆ ನೋಡಲು ತೂಬಿನಲ್ಲಿ ಮಾಡಿಟ್ಟ ಗುಂಡಗಿನ ತೂತಿನಿಂದ ಇಣುಕಿ ನೋಡಿದೆ. ಈಗಷ್ಟೇ ಕತ್ತಲಾಗಿ, ಜೀರುಂಡೆ ಚಿರಿಗ್ ಚಿರಿಗ್ ಚಿರಿಗ್ ಎಂದು ಶಬ್ದ ಮಾಡುತ್ತಲಿತ್ತು. ಕೈಗೂಸು ಜ್ವರದಿಂದ ನರಳುತ್ತಿರುವುದು ನೋಡಿ ಹೊಟ್ಟೆ ಚುರ್ ಎಂದಿತು. ಇನ್ನು ನಾಲ್ಕು ತಿಂಗಳಾಗಿಲ್ಲ ಮಗುವಿಗೆ, ಪ್ರತಿ ದಿನ ಎನಾದರೊಂದು ಖಾಯಿಲೆ ಕಸಾಲೆ ಇದಕ್ಕೆ. ಇದರ ಅದ್ರಷ್ಟವೇ ಹೀಗೆ.ಪೋಲಿಯೋ ಹಾಕಿಸಲು ಹೊದಾಗ ನರ್ಸಮ್ಮ ಕೊಟ್ಟ ಗುಲಾಬಿ ಔಷಧಿ ಹಾಕಿದರೆ ಸ್ವಲ್ಪ ಬಾಯಿ ಮುಚ್ಚುತ್ತದೆ. ಇಲ್ಲವಾದರೆ ಇದರ ಗೋಳು ಹೇಳತೀರದು. ನಾನಾದರೂ ಏನು ಮಾಡುವುದು? ಕಿತ್ತು ತಿನ್ನುವ ಬಡತನ. ಮನೆಕಡೆಯೂ ಅಷ್ಟಕ್ಕಷ್ಟೆ. ಗಂಡನ ಸಂಪಾದನೆ ತಿನ್ನಲಿಕ್ಕೆ ಉಡಲಿಕ್ಕೆ ಸಾಲದು. ಒಂದಕ್ಷರ ಬರದ ನಾನು. ಕೂಲಿ ಮಾಡಲು ಕೈಗೂಸು. ನಿಟ್ಟುಸಿರಿಡುತ್ತ ತೂತಿನಿಂದಾಚೆ ನೋಡಿದೆ.
"ಅಬ್ಬಾ!!! ಮಳೆಯಾದರೂ ನಿಂತಿತಲ್ಲ.." ಎಂದುಕೊಳ್ಳುತ್ತಾ ಮಲಗಿದ್ದ ಮಗುವಿನ ಮೈ ಮತ್ತೆ ಮುಟ್ಟಿ ನೋಡಿದೆ. ಜ್ವರ ಕಮ್ಮಿಯಾಗಿತ್ತು.
     ನನ್ನ ಗಂಡ ರಸ್ತೆ ರಿಪೇರಿ, ಬ್ರಿಡ್ಜ್, ಡ್ಯಾಮ್ ಕಾಮಗಾರಿ ಕೆಲಸವಿದ್ದಾಗ ಕಂತ್ರಾಕ್ತಿನ ಮೇರೆಗೆ ಮೂರು, ಆರು ತಿಂಗಳು ಹೀಗೆ ಕೂಲಿಗೆ ಬೇರೆ ಬೇರೆ ಊರಿಗೆ ಹೋಗಿ ಕೆಲಸ ಮಾಡುವವ. ನನಗು ತಂದೆ ತಾಯಿಯಿಲ್ಲ, ಅಣ್ಣನೊಬ್ಬನೇ! ಗಂಡ  ಹೊದೆಡೆಗೆ ನಾನು ಹೋಗಲೇಬೇಕು. ಹಾಗಾಗಿ ಮನೆ ಮಠ ಏನಿಲ್ಲ. ರಕ್ಷಣೆಗೆಂದು ಒಂದು ಸೂರಿನ ಏರ್ಪಾಡು ಹೇಗೋ ಆಗುತ್ತದೆ. ಕೆಲವೊಮ್ಮೆ ಸರಕು ಸಲಕರಣೆಗೆಂದು ಮಾಡಿದ ಕಟ್ಟದವಾದರೆ, ಕೆಲವೊಮ್ಮೆ ತಗಡಿನ ಗುಡಿಸಲು, ಇಲ್ಲವೇ ಸ್ವಲ್ಪ ಉದಾರಿ ಸಾಹುಕಾರನಾಗಿದ್ದರೆ ನಾಲ್ಕೈದು ನಮ್ಮಂಥ ಸಂಸಾರಗಳು ಕೂಡಿರಲು ಒಂದು ಚಿಕ್ಕ ಮನೆ.
   ನಮ್ಮ ಸದ್ಯದ ಅರಮನೆ ನೀವು ನೋಡಬೇಕು. ಇದು ಊರಿನಿಂದಾಚೆ ಯಾವುದೋ ಹೆದ್ದಾರಿಯಂತೆ. ಇಲ್ಲಿ ಹತ್ತಿರದಲ್ಲೆನೂ ಇಲ್ಲವೆ ಇಲ್ಲ. ಹಗಲು ರಾತ್ರಿಯನ್ನದೆ ಟ್ರಕ್ಕು ಲಾರಿಗಳು ಓಡುತ್ತಲೇ ಇರುತ್ತವೆ. ನಾವಿರುವುದು ದೊಡ್ಡ ದೊಡ್ಡ ಸಿಮೆಂಟಿನ ತೂಬುಗಳಲ್ಲಿ. ಇವನ್ನು ಚರಂಡಿ ನೀರು, ಕಸವನೆಲ್ಲ ನದಿ ಹೊಳೆಗಳಿಗೆ ಸೇರಿಸಲು ಉಪಯೋಗಿಸುತ್ತಾರಂತೆ. ಹಾಗಂತ ಅವರು ಹೇಳಿದ್ದರು. ಈಗ ಅವರು ಮಾಡುತ್ತಿರುವುದು ಅದೇ ಕೆಲಸ. ನಮ್ಮಂತೆ ಇನ್ನು ಕೆಲ ಕೂಲಿಯಾಳುಗಳು ಸುತ್ತ ಮುತ್ತಲಿದ್ದಾರೆ. ಆದರೆ ನನಗೆ ಸಣ್ಣ ಮಗುವಿರುವುದರಿಂದ , ಬೀದಿ ದೀಪದ ಕೆಳಗೇ ಇರುವ ಈ ತೂಬಿನಲ್ಲಿರಲು ಎಲ್ಲರು ಒಪ್ಪಿದರು. ಅಡಿಗೆ ಹೊರಗೆ ಮಾಡಿಕೊಂಡು ಮಲಗಲು, ಮಳೆಯಿಂದ ರಕ್ಷಣೆ ಪಡೆಯಲು, ತೂಬಿನೊಳಕ್ಕೆ ಸೇರಿಬಿಡುತ್ತೇವೆ.ಹೀಗೆ ಇನ್ನೆರಡು ಮೂರು ತಿಂಗಳೆನೋ. ಮತ್ತೆ ಇನ್ನೆಲ್ಲಿಗೋ ಪ್ರಯಾಣ.
       ಇನ್ನು ಅವರು ಕೂಲಿಯಿಂದ ಬಂದಿಲ್ಲ. ಕೆಲವೊಮ್ಮೆ ಎರಡು ಪಟ್ಟು ಸಂಬಳಕ್ಕಾಗಿ ನಾಲ್ಕೈದು ತಾಸು ಹೆಚ್ಚಿಗೆ ಮಾಡಿಕೊಂಡೆನೋ ಬರುತ್ತಾರೆ. ಬಂದು ಪ್ರಜ್ನೆಯಿಲ್ಲದೆ ಮಲಗಿ ಬಿಡುತ್ತಾರೆ. ಆಗ ನಾನೂ ಬೇಡ ನನ್ನ ಮಗುವು ಬೇಡ. ನಾನೂ ಅವರನ್ನು ಕೇಳುವ ಗೋಜಿಗೆ ಹೊಗುವುದಿಲ್ಲ. ಬೆಳಿಗ್ಗೆ ಮತ್ತೆ ಓಟ. ಇಂದೂ ಸಹ ಹೊತ್ತಾಗಿ ಬರುವರೆನೋ! ಹೀಗೇ ಯೋಚಿಸುತ್ತಿರುವಾಗ ಒಂದು ಟೆಂಪೋನಂಥ ವಾಹನ ಬಂದು ಬೀದಿ ದೀಪದಡಿ ನಿಂತಿತು. ಹೊತ್ತಲ್ಲದ ಈ ಹೊತ್ತಿನಲ್ಲಿ ಗಾಡಿಯಾವುದಾದರು ಬಂದು ನಿಂತರೆ ನನ್ನ ಎದೆಯೆ ಒಡೆದು  ಹೋದಂತಾಗುತ್ತದೆ. ಸುಮ್ಮ ಸುಮ್ಮನೇ ಹೆದರುವ ಹೆಂಗಸಲ್ಲ ನಾನು. ಹಳ್ಳಿಯಲ್ಲಿದಾಗ ದನ ಕರುಗಳು ಮನೆಗೆ ಬಾರದ ದಿನಗಳಲ್ಲಿ, ಅಂತಹ ದಟ್ಟ ಕಾಡುಗಳಲ್ಲಿ ಸಂಜೆಗತ್ತಲಾದರೂ ಒಬ್ಬಳೇ ಓಡಾಡುತ್ತಿದವಳು. ಹುಲಿ ಚಿರತೆಗಳ ಭಯವಿಲ್ಲದೆ. ಆದರೆ ಕೆಲ ತಿಂಗಳುಗಳ ಹಿಂದೆ ನಡೆದ ಘಟನೆಯಿಂದ ಇತ್ತೀಚಿಗೆ ಯಾವ ಗಾಡಿ ಬಂದು ನಿಂತರೂ ಜೀವ ಬಾಯಿಗೆ ಬಂದಂತಾಗುತ್ತದೆ.
      ಅಂದೂ ಇವರು ಕೂಲಿಯಿಂದ ಬರುವುದು ಹೊತ್ತಾಗಿತ್ತು. ನಾನಿನ್ನೂ ಬಸುರಿ. ಏಳು ತಿಂಗಳು ತುಂಬಿದ್ದರು ಅಣ್ಣನ ಕರೆ ಬಂದಿರಲಿಲ್ಲ. ಬರುವುದು ಖಾತ್ರಿಯಿರಲಿಲ್ಲ. ಇರುವುದೊಬ್ಬ ಅಣ್ಣ. ಅವನೇ ಕರೆಯದಿದ್ದರೆ ನಾನೆಲ್ಲಿಗೆ ಹೋಗುವುದು. ಕತ್ತಲಾಗಿ ಹೋಗಿತ್ತು, ಬೀದಿ ದೀಪ ತನ್ನಷ್ಟಕ್ಕೆ ತಾನೇ ಉರಿದುಕೊಳ್ಳುತ್ತಲಿತ್ತು. ನಮ್ಮನ್ನು ಬಿಟ್ಟರೆ ಅದರ ಸದುಪಯೋಗ ಯಾರಿಗೂ ಇಲ್ಲವೆಂದುಕೊಳ್ಳುತ್ತಲಿದ್ದಗಲೇ, ಬಿಳಿ ಬಣ್ಣದ ಗಾಡಿಯೊಂದು ಬಂದು ನಿಂತಿತು. ನಾನೂ ತೂಬಿನೊಳಗಿದ್ದದ್ದರಿಂದ ಅವರು ನಿಂತರೂ ನನಗೇನೂ ವ್ಯತ್ಯಾಸವಾಗುತ್ತಿರಲಿಲ್ಲ. ಗಾಡಿಯಿಂದ ಇಳಿದ ಕೆಲ ಪಡ್ಡೆ ಹುಡುಗರು, ತೂಬಿನೊಳಗೆ ಯಾರೂ ವಾಸ ಮಾಡಲು ಸಾಧ್ಯವಿಲ್ಲವೆಂದುಕೊಂಡಂತೆ ನನ್ನ ಅಸ್ತಿತ್ವದ ಪರಿವೆ ಇಲ್ಲದಂತೆ ಮಾತನಾಡಲು ಶುರು ಮಾಡಿದರು. ಕೇಕೆ ಹಾಕುತ್ತಾ, ಹೀಯಾಳಿಸುತ್ತಾ, ಶುರುವಾದ ಮಾತು ಬೈಗಳು ತುಂಬಿ, ತೀರಾ ಅವಾಚ್ಯವೆನಿಸತೊಡಗಿತು. ಅವರೆಲ್ಲ ಕುಡಿದಿದ್ದರೋ, ಅಥವಾ ಅಲ್ಲೇ ನಿಂತು ಕುಡಿಯುತಿದ್ದರೋ, ತಿಳಿಯಲಿಲ್ಲ. ತೂಬಿನ ಕಿಂಡಿಯಿಂದ ನೋಡಲೂ ಭಯವಾಗುತ್ತಿತ್ತು. ಬಸುರಿ ಬೇರೆ.  ಮಾತಿಗೆ ಮಾತು ಬೆಳೆದು ಒಬ್ಬರನ್ನೊಬ್ಬರು ನೂಕಾಡತೊಡಗಿದಂತಾಯಿತು. ಒಬ್ಬ ತಳ್ಳಿದ ರಭಸಕ್ಕೆ ಇನ್ನೊಬ್ಬ ತೂಬಿನ ಮೇಲೇ ಬಂದು ಬೀಳಬೇಕೆ? ನನಗೆ ಕೈ ಕಾಲೇ ಬಾರದಂತಾದವು. ಸುತ್ತ ಮುತ್ತಲಿನ ತೂಬುಗಳಿಗೂ, ನಮ್ಮ ತೂಬಿಗೂ ಸ್ವಲ್ಪ ದೂರವಿದ್ದುದರಿಂದ ಯಾರಿಗೂ ಈ ಗಲಾಟೆ ಕೇಳಿಸದಿರದು. ಮೇಲೆ ಬಿದ್ದವನಿಗೆ ಒಳಗೆ ನಾನಿರುವುದು ತಿಳಿಯಲಿಲ್ಲವೇನೋ, ಸುಮ್ಮನೆ ಎದ್ದು ಹೋಗಿ, ತನ್ನನ್ನು ತಳ್ಳಿದವನನ್ನು ಹಿಡಿದನೆಂದು ಕಾಣುತ್ತದೆ, ಮತ್ತೆ ಹೊಡೆದಾಡುವ ಶಬ್ದ ಕೇಳಿತು. ಮತ್ತೊಮ್ಮೆ ಯಾರೋ ಮೇಲೆ ಬಿದ್ದು ತೂಬು ಸ್ವಲ್ಪ ಅಲುಗಾಡಿತು. ಬೆವೆತು ನೀರಾಗಿದ್ದ ನನಗೆ ಬಾಯೆಲ್ಲ ಒಣಗಿತು. ಬಿದ್ದವನ ಮೇಲೆ ಒಂದರಮೇಲೊಂದರಂತೆ ನಾಲು ಶೀಷೆಗಳನ್ನು ಬೇರೆ ಒಡೆದರು. ನನ್ನನ್ನು ನೋಡಿದ್ದರೆ ಅವರಿಬ್ಬರ ಜಗಳ ಮರೆತು ನನ್ನನ್ನೇನು ಮಾಡುತ್ತಿದರೋ ದೇವರಿಗೇ ಗೊತ್ತು. ಹುಲಿ ಚಿರತೆಗಳಿಗಿಂತ ಹುಲು ಮಾನವರು ಕ್ರೂರಿಗಳು.. ಅಂತ ಎಲ್ಲೋ ಕೇಳಿದ ನೆನಪು. ಸ್ವಲ್ಪ ಹೊತ್ತಿನ ಮೇಲೆ ಮತ್ತೊಂದು ಧ್ವನಿ ಕೇಳಿಸಿತು. ಇಷ್ಟು ಹೊತ್ತು ಆ ವ್ಯಕ್ತಿ ಏನು ಮಾಡುತ್ತಿದ್ದನೋ ಒಮ್ಮೆಲೇ ಎಲ್ಲ ಶಾಂತವಾಗಿ, ಗಾಡಿ ಹೊರಟ ಶಬ್ದ ಕೇಳಿತು. ನಾನೂ ತೂಬಿನ ಕಿಂಡಿಯಿಂದ ನೋಡಿದೆ. ಅವರೆಲ್ಲ ಹೋಗಿದ್ದರು. ಬದುಕಿದೆ ಜೀವ ಎಂದುಕೊಂಡು ಸುಯ್ದೆ.

  ಇಂದು ಮತ್ತೆ ಬಂದು ನಿಂತ ಬಿಳಿ ಟೆಂಪೋ ನೋಡಿ ಎರಡು ಪಟ್ಟು ಘಾಬರಿಯಾಯಿತು. ಮತ್ತೆಲ್ಲಿ ಅಂದಿನಂತೆ ಪಡ್ಡೆ ಹುಡುಗರು ಬಂದರೋ ಎಂದು. ಟೆಂಪೋವಿನಿಂದ ಇಳಿದವರು ದೊಡ್ಡ ಜಮಖಾನೆಯಂಥದ್ದೇನೋ ಹೊತ್ತುಕೊಂಡು ಬಂದರು. ಮತ್ತೊಂದು ಲಾಂಟರ್ನು, ಸ್ಟವ್ವು ಏನೇನನ್ನೋ ತಂದರು. ನೋಡ ನೋಡುತ್ತಿದ್ದಂತೆಯೆ ಒಲೆಯಂತೆ ಮಾಡಿ, ಏನನ್ನೋ ತಯಾರಿಸತೊಡಗಿದರು. ಜಮಖಾನೆಯ ಮೇಲೆ ಕುಳಿತವರು ನಗುತ್ತ, ಮಾತನಾಡುತ್ತ, ತೂಬಿನ ಕಡೆ ನೋಡಿದ ಹಾಗಾಯಿತು. ನಾನು ಪಕ್ಕನೇ ಚಿಮಣಿ ದೀಪ ಆರಿಸಿದೆ.
 ಮತ್ತಾರೂ ಈ ಕಡೆ ನೋಡಲಿಲ್ಲ. ನಾನು ಎವೆಯಿಕ್ಕದೆ ಅವರನ್ನೇ ನೋಡುತ್ತಿದ್ದೆ. ಸ್ವಲ್ಪ ಹೊತ್ತಲ್ಲೇ, ಎಲ್ಲರು ಒಂದೇ ಪಾತ್ರೆಯಿಂದ ಗಬಗಬನೆ ತಿನ್ನತೊಡಗಿದರು. ನನಗೆ ಈ ಪೇಟೆ ಜನಗಳ ಶೋಕಿ ನೋಡಿ ನಗು ಬಂತು. ಎಲ್ಲರು ಮನೆ ಮಠ ಇದ್ದುಕೊಂಡೇ ಇಲ್ಲಿ ರಸ್ತೆಯ ಮೇಲೆ ಅಡುಗೆ ಮಾಡಿಕೊಂಡು ತಿನ್ನುವ ಶೋಕಿ. ನಮಗಾದರೋ ಪ್ರತಿ ದಿನ ಬೀದಿಯಲ್ಲೇ ಅಡುಗೆ. ಅಥವಾ ಎಲ್ಲೋ ದೂರದಿಂದ ಬಂದವರೋ ಏನೋ. ಈ ಹೆದ್ದಾರಿಯ ಮೇಲೆ ಯಾವ ಹೋಟೆಲ್ಲೂ ಇಲ್ಲದ ಕಾರಣ ಇಲ್ಲಿ ಸ್ವಯಂಪಾಕ ಮಾಡಿಕೊಳ್ಳುತ್ತಿದ್ದರೆನೋ.  ಅಂತೂ ತಿಂದವರೆಲ್ಲ ಗಾಡಿ ಸೇರಿಕೊಂಡರು. ಒಬ್ಬ ಮಾತ್ರ ತಂದ ಪಾತ್ರೆ  ಪಗಡಗಳನೆಲ್ಲ  ಜೋಡಿಸುತ್ತಿದ್ದ. ಆ ದೊಡ್ಡ ಜಮಖಾನದಂಥಹ ವಸ್ತುವನ್ನು ಸುತ್ತಿ ಒಂದುಕಡೆಯಿಟ್ಟ. ಮತ್ತೆಲ್ಲವನ್ನೂ ಸಿಡಿಸಿಡಿಯೆನ್ನುತ್ತಾ ಒಂದೊಂದಾಗಿ ಹೊತ್ತುಕೊಂಡು ಹೋಗಲಾರಂಭಿಸಿದ. ನಾನು ನೋಡುತ್ತಿರುವಾಗಲೇ ಗಾಡಿ ಚಾಲುವಾಯಿತು.  ಒಳಗಿದ್ದವರೆಲ್ಲ ಈತನನ್ನು ಹಾಸ್ಯ ಮಾಡುತ್ತಿದ್ದರು. ಇವನೂ ಓಡಿಹೋಗಿ ಗಾಡಿ ಹತ್ತಿದ. ನನಗೂ ಅವನ ಪೇಚಾಟ ನೋಡಿ ನಗು ಬಂತು. ಗಾಡಿ ಹೊರಟು ಹೋಯಿತು. ಹ್ಹ  ಹ್ಹ ಹ್ಹ ವಿಚಿತ್ರ ಜನ. ಇವರು ಬಂದರೆ ಹೇಳಬೇಕು ಇಂದಿನ ಕಥೆ ಎಂದು ಮತ್ತೆ ಹೊರಗೆ  ಕಣ್ಣಾದೆ. ಅರೆ!!! ಆ ಜಮಖಾನದಂಥ ವಸ್ತು. ಗಡಿಬಿಡಿಯಲ್ಲೋ ಅಥವ ಕೋಪದಿಂದ ಬೇಕಂತಲೇ ಸಿಡಿಮಿಡಿಗೊಳ್ಳುತ್ತಿದ್ದವನು ಬಿಟ್ಟು ಹೋದನೆನೋ. ಬೆಚ್ಚಗೆ ಮಗುವಿಗೆ ಹಾಸಲಾದರೂ ಆಗುವುದೆನೋ..ಛೆ! ಛೆ! ಬೇಡ. ಮತ್ತವರು ವಾಪಸು ಬಂದು ಬಿಟ್ಟರೆ ಅವಮಾನವಾಗುವುದು. ಆದಲ್ಲೆ ಇರಲಿ...
ಮತ್ತೆ ಚಿಮಣಿ ದೀಪ ಹತ್ತಿಸಿ ಇವರು ಬರುವುದನ್ನೆ ಕಾಯುತ್ತಿದ್ದೆ. ಆದು ಏನೊ, ಹೇಗಿದೆಯೋ!.. ಮಳೆಗಾಲಕ್ಕೆ ಬೆಚ್ಚಗೆ ಹಾಸು ಆಗುವುದೋ ಎನೋ. ನಾನೆನೂ ಕದಿಯುತ್ತಿಲ್ಲವಲ್ಲ. ಅವರೇ ಬಿಟ್ಟು ಹೋದರು. ಬಂದು ಕೇಳಿದರೆ, ಕೊಟ್ಟರಾಯಿತು. ಅವರು ಬಂದಾಗ ಬಾರೀ ಹುಮ್ಮಸ್ಸಿನಿಂದ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿದೆ. ಅವರಿಗೇನೋ ಆ ಕಥೆ ಅಷ್ಟು ಸ್ವಾರಸ್ಯಕರವಾಗಿ ಕಾಣಲಿಲ್ಲವೆಂದು ತೋರುತ್ತದೆ. ಹ್ಹ್ !! ಇರಲಿ ನಾಳೆ ಬೆಳಿಗ್ಗೆ ತಮಾಷೆ ತೋರಿಸುತ್ತೇನೆ ಅಂದುಕೊಂಡು ಮಲಗಿದೆ. ತಾರ್ಪಲನ್ನು ಹೇಗೆ ಉಪಯೋಗಿಸುವುದು, ಮಳೆ ನೀರು ಬೀಳದಂತೆ ಹೇಗೆ ಮಾಡುವುದು ಎಂತೆಲ್ಲ ಯೋಚಿಸುತ್ತಲೇ ರಾತ್ರೆ ಕಳೆದೆ.

ಬೆಳಕಾದುದೆ ತಡ.. "ಇಲ್ಲಿದೆ ಬನ್ನಿ ತಮಾಷೆ!!.." ಹರಡಿದರೆ ತಾರ್ಪಾಲು ಸಾಮಾನ್ಯದ್ದಲ್ಲ!! ಅದಕ್ಕೊಂದು ಕಿಟಕಿ, ಬಾಗಿಲು!! ಸರಿಯಾಗಿ ಹರಡಿಟ್ಟರೆ ಅದು ಮನೆಯೇ!! ಇವರು ಮೊದಲ ಸಲ ಅಚ್ಚರಿಗೊಂಡಿದ್ದನ್ನು ನೋಡಿ ನನ್ನ ಸಾಹಸಕ್ಕೆ ನಾನೇ ಮೆಚ್ಚಿಕೊಂಡೆ. ಅವರೆಲ್ಲ ಮತ್ತೆ ಬರುವುದು ಕಾಣೆ. ಬಂದರು ಮೊದಲಿನಂತೆ ಸುತ್ತಿ ಅವರಿಗೆ ಕೊಟ್ಟರಾಯಿತಲ್ಲವೇ?  ಇವರು ನಾಲ್ಕು ದೊಡ್ಡ ಗೂಟಗಳನ್ನು ನೆಟ್ಟು, ನೆಲ ಗಟ್ಟಿ ಮಾಡಿ ತಾರ್ಪಾಲನ್ನು ಮನೆಯಂತೆ ನಿಲ್ಲಿಸಿದರು. ಗಾಳಿಗೆ ಬಾಗದಂತೆ, ಮಧ್ಯೆ ಕೋಲು ನಿಲ್ಲಿಸಿ ಗಟ್ಟಿ ಮಾಡಿದರು. ಆಹಾ! ಎಂಥ ಸೊಗಸಿನ ತಾರ್ಪಾಲಿನರಮನೆ!! ಅಡುಗೆ ಮೊದಲಿನಂತೆ ಹೊರಗೆ ಮಾಡಿಕೊಂಡರು ಈ ಮನೆ ತೂಬಿಗಿಂತ ಎಷ್ಟು ಬೆಚ್ಚಗೆ. ತೂಬಾದರೋ ಎರಡೂ ಕಡೆಯಿಂದ ತೆರೆದಿದ್ದು, ನಾ ಕಟ್ಟಿದ್ದ ಬಟ್ಟೆ ಅಷ್ಟು ಬೆಚ್ಚಗಿಡುತ್ತಿರಲಿಲ್ಲ. ಮಗುವಿಗೆ ಈಗ ಬೆಚ್ಚಗಿನ ಸೂರಿದೆ. ಮಗುವನ್ನೆತ್ತಿಕೊಂಡು ಇಬ್ಬರು ಹೊಸ ಮನೆಗೆ ಪ್ರವೇಶ ಮಾಡಿದೆವು. ಮೂರು ಜನ ಮಲಗಲು ಸಾಕಷ್ಟು ಸ್ಥಳವಿತ್ತು.
 ಎಲ್ಲಿಂದಲೋ ಬಂದ ಆ ಜನಗಳಲ್ಲಿ, ಬೇಕಂತಲೋ ಅಥವಾ ಮರೆತೋ ಬಿಟ್ಟು ಹೋದ ಆ ಮನುಷ್ಯನನ್ನು ಮನದಲ್ಲೇ ಧನ್ಯವಾದಿಸಿದೆ. ಇಷ್ಟೊಂದು ಅವಶ್ಯಕತೆಯಿದ್ದ ನಮಗೆ, ವರವಾಗಿ ಬಂದ ತಾರ್ಪಾಲಿನರಮನೆಯನ್ನು ಸರಿಯಾದ ಸಮಯದಲ್ಲಿ ಕೊಟ್ಟ ದೇವರನ್ನು ವಂದಿಸಿದೆ. ಹೇಗೋ ಬಂದ ನಮ್ಮ ತರ್ಪಾಲಿನರಮನೆ ನಮ್ಮೂವರಿಗೆ ಬೆಚ್ಚಗಿನ ಗೂಡು ಮಾಡಿಕೊಟ್ಟಿತ್ತು.