ಮಲೆಗಳಲ್ಲಿ ಮದುಮಗಳು - ಕನ್ನಡ ಸಾಹಿತ್ಯಕ್ಕೆ ರಾಷ್ಟ್ರಕವಿ ಕುವೆಂಪು ರವರ ಅತ್ಯುನ್ನತ ಕೊಡುಗೆ. ಇಂತಹ ಮಹಾಕಾವ್ಯಕ್ಕೆ ಜೀವ ಕೊಟ್ಟು ಕನ್ನಡ ರಂಗಭೂಮಿ ಕಲಾರಸಿಕರ ಕಣ್ಣು-ಕಿವಿಗಳಿಗೆ ಹಬ್ಬದೌತಣದ ಸವಿ ಉಣಿಸಿದ ಅಹೋ ರಾತ್ರಿ ನಡೆದ ನಾಟಕ ಮಲೆಗಳಲ್ಲಿ ಮದುಮಗಳು. ಸಿ. ಬಸವಲಿಂಗಯ್ಯ ಅವರ ನಿರ್ದೇಶನದಲ್ಲಿ ಕರ್ನಾಟಕ ಕಲಾಗ್ರಾಮ - ಜ್ಞಾನ ಭಾರತಿ ಅಂಗಳದಲ್ಲಿ ನಡೆಯಿತು. ರಾತ್ರಿ 8. 30 ರ ಹಾಗೆ ಶುರುವಾಗಬೇಕಿದ್ದ ಪ್ರಯೋಗ , ಮಳೆರಾಯನ ಕೃಪೆಯಿಂದ 11.30 ಕ್ಕೆ ಶುರುವಾಯಿತು . ಒಟ್ಟು ೪ ವಿವಿಧ ವೇದಿಕಗಳ ಮೇಲೆ ತೆರೆ ಕಂಡ ಪ್ರಯೋಗ , ೯ ಗಂಟೆಗಳ ಕಾಲ ನಿರ್ವಹಿಸುವ ಯೊಜನೆಯಿತ್ತು. ಮಲೆನಾಡಿನ ಅಡಿಕೆ ತೋಟದ ರೂಪು ಪಡೆದ ವೇದಿಕೆ-1 ನಿಜವಾದ ಮಳೆಯ ಪ್ರಯುಕ್ತ ಪ್ರೇಕ್ಷಕರಿಗೆ ತೀರ್ಥಹಳ್ಳಿ - ಮೇಗರವಳ್ಳಿಯಲ್ಲೇ ನಾಟಕ ನೋಡಿದ ಅನುಭವ ತಂದಿತು. ಗುತ್ತಿ ಹಾಗು ಅವನ ನಾಯಿ ಹುಲಿಯನ ಪ್ರತಾಪದೊಂದಿಗೆ ಶುರುವಾದ ನಾಟಕ ಮನೊರಂಜನೆಯ ಪರಾಕಾಷ್ಟೆ ಮೀರಿಸಿತ್ತು. ಹುಲಿಯನ ಪಾತ್ರ ಅತ್ಯುತ್ತಮವಾಗಿ ನಿರ್ವಹಿಸಿದ್ದ ಕಲಾವಿದ ಎಲ್ಲರ ಮೆಚ್ಚುಗೆಗೆ ಪಾತ್ರನಾದ. ಐತ - ಪೀಂಚಲು ಜೋಡಿ ನೋಡಲು ಮೋಹಕವಾಗಿತ್ತು. ಹಂಸಲೇಖ ರವರ ಸಂಗೀತಕ್ಕೆ ಸಾಟಿಯುಂಟೆ. ಮತ್ತದಕ್ಕೆ ಹೆಜ್ಜೆ ಹಾಕುತ್ತ ಬಣ್ಣ ಬಣ್ಣದ ಉಡುಗೆ ತೊಟ್ಟ ಕಲಾವಿದರನ್ನು ನೋಡಿ ನಲಿದ ಪ್ರೇಕ್ಷಕರಿಗೆ ನಿದ್ರೆಯ ಸುಳಿವು ಬರದೇ ಇದ್ದುದು ಆಶ್ಚರ್ಯಕರ. ಗುತ್ತಿ ನಾಯಿ ಹುಲಿಯ, ಮತ್ತು ಹಂದಿಯ ನಡುವಿನ ದಾಳಿ ದೃಶ್ಯ, ನಾಗತ್ತೆ ನಾಗಕ್ಕರ ಜೊತೆ ನಡೆಯುವ ಕುಂಟ ವೆಂಕತಪ್ಪನ ಅವಾಂತರ, ಕರಿಮೀನ್ ಸಾಬಿಯ ಹೊನ್ನಳ್ಳಿ ಹೊಡೆತ, ಜಟ್ಟಕ್ಕ - ರತ್ನಮ್ಮರ ಜಗಳ, ತಿಮ್ಮಿಯ ತಾಯಿಯ ಮೇಲೆ ಜಕ್ಕಣಿಯ ದಯ್ಯದ ಪ್ರವೇಶ, ಪಾದ್ರಿಯ "ಬೀಸೇಕಲ್ " ಸವಾರಿ, ಹುಲಿಯ - ಬರ್ಕದ ನಡುವಿನ ಕಾಳಗ, ಮುಂತಾದ ಇನ್ನು ಹಲವಾರು ದೃಶ್ಯಗಳು ನಂಬಲಸಾಧ್ಯ ವಾಗಿ ನಿರ್ವಹಿಸಲಾಗಿತ್ತು. ಒಟ್ಟಿನಲ್ಲಿ ಇಂತಹ ಅತ್ಯದ್ಭುತ ಕಲಾನೈಪುಣ್ಯ ಪ್ರದರ್ಶಿಸಿದ ತಂಡಕ್ಕೆ ಶುಭಶಯಗಳು. ಇಂತಹ ಪ್ರಯೋಗಗಳು ಇನ್ನಷ್ಟು ಬರಲಿ ಎಂದು ಆಶಿಸುತ್ತೇನೆ. ಮಲೆಗಳಲ್ಲಿ ಮದುಮಗಳು ಪ್ರದರ್ಶನ 30 ಮೇ ವರೆಗೆ ಮಂಗಳವಾರ, ಗುರುವಾರ, ಶನಿವಾರ ಹಾಗು ರವಿವಾರ 8.30 ರಿಂದ 5.30 ಪ್ರಾತಃ ತನಕ ನಡೆಯುತ್ತದೆ. ಮಳೆರಾಯ ಮುನಿಯದೆ ಸಹಕರಿಸಿದರೆ ಖಂಡಿತ ನೋಡಲೇಬೇಕಾದ ಅಪ್ರತಿಮ ಪ್ರಯೋಗನಿಸ್ಸಂಶಯವಾಗಿ . ನಿಸ್ಸಂಶಯವಾಗಿ ನೋಡಿ ಬನ್ನಿ. ನಿರಾಶರಾಗುವ ಒಂದೂ ಕಾರಣ ನಿಮಗೆ ಸಿಗಲಾರದು. - ಹಾವ್ ಮೀನ್ :)
For More Pics:
https://www.facebook.com/media/set/?set=a.10151450123067399.1073741827.755622398&type=1
Listen to the music of play:
https://www.youtube.com/watch?v=QdHlrSvmW0s
No comments:
Post a Comment