badge

Friday, February 15, 2013

ಕುಡುಕ ರತ್ನ..


ಆಗಷ್ಟೇ ಮಳೆ ನಿಂತು ತಣಿದ ಬಯಲು. ಅದನ್ನು ಸೋಕಿ ತಂಗಾಳಿ ಮೆತ್ತಗಿನ ಮಣ್ಣಿನ ಸುವಾಸನೆ  ಹೊತ್ತು ಸುಳಿದಾಟವಾಡುತ್ತಿತ್ತು. ಮೋಡದ ಮರೆಯಿಂದ ನಾಚಿಕೊಳ್ಳುತ್ತಾ ಹೊರಬರುತ್ತಿರುವ ಸೂರ್ಯನ ಕೆಂಪು ಗಲ್ಲದಂತೆಯೇ ಕೆಂಪಾದ ಬಾನು. ನಿಂತ ನೀರಿನ ಮೇಲೆ ಬಾನಿನ ಪ್ರತಿಬಿಂಬ. ಒಮ್ಮೆ ಕಣ್ಣನ್ನು ಮುಚ್ಚಿ ಮತ್ತೆ ಕಣ್ತೆರೆದೆ! ಅರೆ! ಕನಸಲ್ಲ. ಇದು ಬೆಂಗಳೂರು ಮಹಾನಗರಿ ! ನಾನೊಬ್ಬ ಸಾಧಾರಣ ಗಣಕ ಯಂತ್ರ ತಜ್ಞೆ. ವಾರ ಪೂರ್ತಿ ದುಡಿದು ರಜೆಯೆಂದು ಮನೆಯಿಂದ   ಹೊರಗೆ  ಬಂದು ಪ್ರಕೃತಿಯನ್ನು ಆಸ್ವಾದಿಸುವ ಮಹದಾಸೆ. ಹೀಗೇ ಪ್ರಕೃತಿಯನ್ನು ಸವೆಯುತ್ತಾ ಅತ್ತಿತ್ತ ನೋಡುತ್ತಾ ಮನೆಯಿಂದ ಬಹು ದೂರ ಬಂದು ಪರಿವೆಯೇ ಇಲ್ಲದಂತೆ ಪಾರ್ಕಿನ ಹೊರಗೆ ಹೆಮ್ಮರದ ಮೇಲೊಂದು ಜೋಡಿ ಮೈನಾಗಳನ್ನು ನೋಡುತ್ತಾ ನಿಂತೆ. ಮರದ ಕೇಸರಿ ಹೂಗಳು  ದಟ್ಟವಾಗಿ ಭೂಮಿಯನ್ನೆಲ್ಲಾ ಆವರಿಸಿದ್ದುವು.  ಗಿಳಿ, ಕೋಗಿಲೆ, ಮೈನಾ ಎಂಬಂತೆ ಹಲವಾರು ಹಕ್ಕಿಗಳ ಕಲರವ ಸಂಗೀತದ ಹಾಗೆ ಮಧುರವಾಗಿತ್ತು . ಪ್ರಕೃತಿ ಸೌಂದರ್ಯ ಸವಿಯುವಾಗ ಪ್ರಪಂಚದ ಅರಿವೇ ಇಲ್ಲದಂತೆ ನಿಂತ ಎಷ್ಟೋ ಪ್ರಸಂಗಗಳು ನನ್ನೊಡನೆ ನಡೆದಿವೆ. ಇಂದೂ ಹಾಗೆಯೇ ಮರದ ಮೇಲಿನ ಸೊಗಸಾದ ಹಕ್ಕಿ ಜೋಡಿಗಳನ್ನು ನೋಡುತ್ತಾ ನಿಂತೇ ಇದ್ದೆ

 ನಾ ತೊಟ್ಟ ಉಡುಪಿನ ಮೇಲೆ ಡಾ .. ಜಿ ಪಿ ರಾಜರತ್ನಂರವರ "ಮೂಗ್ನಲ್ ಕನ್ನಡ ಪದವಾಡ್ತೀನಿ  "ಅಕ್ಷರಗಳು ಮುದ್ರಿತವಾಗಿದ್ದುವು. ಅತೀ ಸಾಧಾರಣ ಉಡುಪು. ಹಾಗೆ  ನಿಂತಿದ್ದವಳಿಗೆ  ದೂರದಲ್ಲೆಲ್ಲೋ ಯಾರೋ ಹಾಡಿದಂತೆ.   ಹಾಂ!! ದಿ।। ಶಂಕರ್ ನಾಗ್ ರವರ ಹಾಡಿನ ಹಾಗೆ, ಆದರೆ ಅಷ್ಟು ಮಾಧುರವಾಗಲ್ಲ !  ಹಾಗೇ ಗಮನಿಸಿದರೆ ಆ ಧ್ವನಿ ಹತ್ತಿರವಾದಂತೆ ಭಾಸವಾಗುತ್ತಿತ್ತು. ನಿಸ್ಸಂದೇಹವಾಗಿ ಆ ಧ್ವನಿ ಹತ್ತಿರಕ್ಕೆ ಬರುತ್ತಿತ್ತು. ಯಾವುದೋ ಕನ್ನಡ ಹಾಡನ್ನು ಅಪಭ್ರಂಶವಾಗಿ ಹಾಗೂ ಅಷ್ಟೇ ಕರ್ಕಶವಾಗಿ ಹಾಡುತ್ತಾ ಬರುತ್ತಿದ್ದ ಒಬ್ಬ ಕುಡುಕ. ಅವನ ಅವಸ್ತೆ ನೋಡಿ ನನಗೆ ಕನಿಕರ ಮೂಡಿತು. ಮಳೆಯಲ್ಲಿ ನೆಂದು, ಮಣ್ಣಲ್ಲಿ ಹೊರಳಿ ಸಂಪೂರ್ಣವಾಗಿ ಕೊಳಕಾಗಿ ಕಾಣುತ್ತಿದ್ದ. ಅವನು ಹಾಡುತ್ತಿದ್ದುದುದೆನೊ  ಎಂಬುದ ಕೇಳಿಸಿಕೊಳ್ಳುವ ಮನಸ್ಸಾಯಿತು. ಮರದ ಮೇಲಿನಿಂದ ಕಣ್ಣುಗಳನ್ನು ಕೀಳದೆ ಹಾಡು ಕೇಳಿಸಿಕೊಳ್ಳತೊಡಗಿದೆ.

ಹಾಡು ಮತ್ತು ಹಾಡನ್ನು ಹಾಡುವವ ಹತ್ತಿರ ಹತ್ತಿರ ವಾದಂತೆ ಎನಿಸಿತು.  ನನ್ನ ನಟನೆ ಇನ್ನು ಹೆಚ್ಚು ಹೊತ್ತು ನಡೆಸಲಾಗುವುದಿಲ್ಲವೆಂದು ಅರಿತು ಹಾಡಿನ ಮೂಲದತ್ತ ಒಮ್ಮೆ ನೋಡಿದೆ. ಅದೇ ಶರೀರ ಮತ್ತಿಷ್ಟು ಹತ್ತಿರವಾಗಿ ನಿಂತು ನನ್ನನ್ನೇ ದಿಟ್ಟಿಸುತ್ತಾ ಇತ್ತು. ಅವನ ಹಾಡು ನಿಂತಿತ್ತು. ಅವನೂ ನಿಂತಿದ್ದ. ನಿಂತಲ್ಲೇ ಜೋರಾಗಿ ನನ್ನ ಉಡುಪಿನ ಮೇಲೆ ಬರೆದಿದ್ದನ್ನು ಓದಲು ಪ್ರಯತ್ನಿಸುತ್ತಿದ್ದ. "ಮೂ ... ಮೂ .. ಮೂ" ಎನ್ನುತ್ತಾ ಮುಂದಿನದನ್ನು ಓದಲು ಹೆಣಗಾಡುತ್ತಿದ್ದ. ಇನ್ನು ಹೆಚ್ಚು ಹೊತ್ತು ಅಲ್ಲೇ ಇದ್ದರೆ ಏನಾಗುವುದೋ ಎಂದು ಭಯದಿಂದ ಮನೆ ಕಡೆ ಓದಿದೆ. "ಮೂ ಮೂ "  ಎನ್ನುವುದ ನಿಲ್ಲಿಸಿದ್ದ ಕುಡುಕ ತನ್ನ ಹಾಡನ್ನು ಮುಂದುವರೆಸತೊಡಗಿದ. "ಎಲೆಲೆ ರಸ್ತೆ , ಏನವ್ಯವಸ್ತೆ , ಕೊಟ್ಯಲ್ಲ ಗಸ್ತು , ಕುಡ್ದಿದ್ಯ ರಸ್ತೆ  ..." ಎಂದು ಹಾಡುತ್ತಿದ್ದನೇನೋ ಎಂದು ನನಗೆ ಅನಿಸಿತು.



1 comment: