
ಸಿಪಾಯಿ ಯಂಥ ಶಿಸ್ತು, ಅವನು ತೊಟ್ಟ ಗರಿಗರಿಯಾದ uniform ಮತ್ತಿನ್ನೂ ಸುಂದರ. ಅವನ ಹೆಸರೇನೋ ನನಗೆ ನೆನಪಿಗೆ ಬಾರದು. ತಮಿಳಿನ ಒಂದು ಹೆಸರಿಡೋಣ. ಕೃಷ್ಣವರ್ಣದ ಸುಂದರಾಂಗ - ಸೆಲ್ವ ಕೃಷ್ಣ. ಸೆಲ್ವ ಕೃಷ್ಣನಿಗೆ ಕನ್ನಡ ಬಾರದು. ಇಂಗ್ಲಿಷ್ ಹಿಂದಿ ಸುತರಾಂ ಬಾರದು. ನನಗೆ ತಮಿಳು ಫ್ರೆಂಚ್ ಗ್ರೀಕ್ ಲ್ಯಾಟಿನ್ ನ ಹಾಗೆ. ಆದರು ಒಂದೊಂದೇ ಪದಗಳನ್ನು ವಿವರಿಸಿ, ಸನ್ನೆ ಮಾಡಿ ತೋರಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದೆ. ಅಂದಿನ travel ಮುಗಿಸಿ ಸಂಜೆ ಕತ್ತಲಾದ ಮೇಲೆ ಎಲ್ಲರು ಕ್ಯಾಂಪ್ ಸೇರಿದೆವು. ಆಗ super nova ಸಮಯ ಚಂದ್ರ ಭೂಮಿಗೆ ಅತ್ಯಂತ ಸಮೀಪದಲ್ಲಿ ಇದ್ದ. ಬೆಳದಿಂಗಳು ದೀಪ ಹತ್ತಿಸಿದಂತೆ ಪ್ರಕಾಶಮಾನವಾಗಿತ್ತು. ನಾನು ನನ್ನ sleeping ಬ್ಯಾಗ್ ಹೊತ್ತುಕೊಂಡು ಹೋಗಿ ಆಚೆ ಅಂಗಳದಲ್ಲಿ ಮಲಗಿದೆ. ಪ್ರಕೃತಿಯನ್ನು ಸವೆಯುವ ಎಂತಹ ಅವಕಾಶ! ಈ ರೀತಿ ಬರುವ ಅವಕಾಶವನ್ನು ತಪ್ಪಿಯೂ ಬಿಡದ ಸ್ವಾರ್ಥಿ ನಾನು. ನೀಲಿಯನ್ನು ನೋಡುತ್ತಾ ಹಾಗೆಯೇ ಪವಡಿಸಿದ್ದೆ. ಹಿಂದೆ ಯಾರೋ ನಿಂತ ಹಾಗೆ ಅನಿಸಿತು. ತಿರುಗಿ ನೋಡಿದರೆ ಯಾರೋ ಹುಡುಗರು ತಂಗಿದ ಟೆಂಟ್ ಕಡೆ ಓಡಿದ ಹಾಗೆ. ಸ್ವಲ್ಪ ಹೊತ್ತಿನ ನಂತರ ಚಳಿಗೋ ಭಯಕ್ಕೋ ತಿಳಿಯದೆ ನನ್ನ ಟೆಂಟ್ ಸೇರಿದೆ. ಮುಂದಿನ ದಿನ ಉಳಿದ ಕಾಡನ್ನು ಮುಗಿಸಬೇಕಿತ್ತು. ಅರ್ಧ ದಿನ ಏನೂ ಕಾಣ ಸಿಗದೇ waterhole ಹತ್ತಿರ ಕಾಯುವುದೆಂದು ನಿರ್ಧರಿಸಿದೆವು. ಸುಮಾರು ೨ ತಾಸು ಕಾದ ಮೇಲು ಒಂದು ಗುಂಪು ಸಾರಂಗಗಳನ್ನ, ಒಂದು dhol, ಕೆಲ ಲಂಗೂರ್ ಬಿಟ್ಟರೆ ಏನು ಕಾಣಿಸಲಿಲ್ಲ. ಎಲ್ಲರೂ ಒಂದೊಂದು ಮರದ ಮೇಲೆ ಹತ್ತಿ ಕುಳಿತೆವು. ಇನ್ನು ಎರಡು ತಾಸು ಕಳೆಯಿತು. ಮೋದದಿಂದ ರಮಿಸುವ ಎರಡು kingfisher ಬಿಟ್ಟರೆ ಏನೇನೂ ಕಾಣಲಿಲ್ಲ. ಎರಡು ದಿನವಾದರೂ ಬೈಸನ್ ಅಥವಾ ಆನೆ ಕಾಣಲಿಲ್ಲವಲ್ಲ ಎಂದು ಕೃಷ್ಣನ ಕಡೆ ನೋಡಿದೆ. ಸ್ವಲ್ಪ ಹೊತ್ತು ಬಿಟ್ಟು ಯಾರ ಕಡೆಗೋ ನೋಡಿ ಹೋಯ್ ಎಂದು ಕೂಗು ಹಾಕಿದ. ದೂರದಲ್ಲೆ ಇದ್ದ ಆ ವ್ಯಕ್ತಿ ಹತ್ತಿರ ಬಂದಮೇಲೆ ಅವರ ವಾರ್ತಾಲಾಪ ಕೇಳಿ "ಯಾನ ಯಾನ " ಎನ್ನುತ್ತಿದ್ದುದನ್ನು ಕೇಳಿ ಆನೆಯ ವಿಷಯ ಎಂದು ಖಾತ್ರಿ ಪಡಿಸಿಕೊಂಡೆ. ಎಲ್ಲರನ್ನು ಏಳಲು ಹೇಳಿದರು. ಆ ವ್ಯಕ್ತಿಯನ್ನು ಹಿಂಬಾಲಿಸಿ ಹೊರಟೆವು. ಸುಮಾರು ೪km ನಡೆದ ಮೇಲೆ ಒಂದೆರಡು ಗುಡಿಸಲುಗಳು ಕಂಡವು. ಆ ಕಾಡಿನ ಜನರ ಬೀಡು. ಸುಮಾರು ೨೫ ಮಂದಿ ಕಾಡಲ್ಲಿ ಹುಣಿಸೇಹಣ್ಣು ಹೆಕ್ಕಿ ಮಾರಿ ಜೀವನ ನಡೆಸುತ್ತಿದ್ದರು. ಅಲ್ಲಿನ ಹೆಂಗಸರೆಲ್ಲರೂ ನನ್ನನ್ನು ಮೇಲಿಂದ ಕೆಳಕ್ಕೆ ನೋಡುತ್ತಿದ್ದರು. ನನ್ನ shoe, ಟೋಪಿ, ಬ್ಯಾಗ್ ಎಲ್ಲ. ನನ್ನ ಹತ್ತಿರ ಇದ್ದ chocolate ಅಲ್ಲಿನ ಮಕ್ಕಳಿಗೆ ಹಂಚಿದೆ. ಅಲ್ಲಿಂದ ಸ್ವಲ್ಪ ದೂರದಲ್ಲೇ ಆನೆಗಳಿವೆ, ಬೆಳಿಗ್ಗೆಯಷ್ಟೇ ಧಾಂಧಲೆ ಮಾಡಿ ಓಡಿದ್ದುವು ಎಂದು ಅಲ್ಲಿನವರು ಹೇಳಿದರು. ನಾವು ಕರಿಯಾನ್ವೇಷಣೆಗೆ ಹೊರಟೆವು. ಸ್ವಲ್ಪ ದೂರದಲ್ಲೇ ಬಂಡೆಯ, ಮರದ ಮೇಲೆ ಆನೆಯ ದಂತದಿಂದ ಆದ ಗೆರೆಗಳು ಕಂಡವು. ಸಮಾನಾಂತರವಾಗಿ ಅಲ್ಲಿ ಇಲ್ಲಿ ಮೂಡಿದ ರೇಖೆಗಳು. ಅಲ್ಲಿಂದ ಸುಮಾರು ೩೦೦ mtr ಮುಂದೆ ನೋಡಿದರೆ ಅಲ್ಲೇ ಗಜರಾಜ!!! ಅದು ನಮಗೆ ಬಾಲದ ಕಡೆಯಾದ್ದರಿಂದ ಅದಕ್ಕೆ ನಮ್ಮ ಇರುವಿಕೆ ತಿಳಿಯಲಿಲ್ಲ. ಸುಮಾರು ಹತ್ತು ನಿಮಿಷ ನೋಡಿದೆವು. ಕಾಡಿನ ಬಲಶಾಲಿ ಪ್ರಾಣಿ ಬಿದಿರನ್ನು ಚಪ್ಪರಿಸುತ್ತ ಮೆಲುಕು ಹಾಕುತ್ತಿದ್ದ .. ಹಟಾತ್ತನೆ ರಘುವಿಗೆ ಫೋಟೋ ತೆಗೆಯಬೇಕೆಂಬೆ ಬಯಕೆ. ಹೊಸದಾಗಿ ಫೋಟೋಗ್ರಫಿ ಬೆಳೆಸಿಕೊಂಡ ಆಸಾಮಿ flash ತೆರೆದು ಕಚಕ್ ಅನ್ನಿಸಿದ. ಅಷ್ಟೇ ಗಜರಾಯ ಗುರ್ರ್ ಎಂದ!!! ಒಮ್ಮೆಲೇ ಘ್ಹೇಳಿತ್ತ ಮತ್ತೆ ನಮ್ಮತ್ತ ತಿರುಗಿದ. ತನ್ನೆರಡೂ ಕಾಲ್ಗಳನ್ನು ಮೇಲಕ್ಕೆತ್ತಿ ಕಿವಿಗಳನ್ನು ಜೋರಾಗಿ ಬಡಿಯತೊಡಗಿದ. ಎದ್ದೆವೋ ಬಿದ್ದೆವೋ ಎಂದು ಅಷ್ಟ ದಿಕ್ಕುಗಳಿಗೂ ಚೆಲ್ಲಾಪಿಲ್ಲಿಯಾದೆವು. ಗಜ ಇನ್ನು ಉಗ್ರನಾದ. ನಮ್ಮತ್ತ ಧವಿಸುವಾಗಲೇ ನಮ್ಮ ಕಾಲು ನಾವು ಕಿತ್ತಿದ್ದೆವು. ಓಡುತ್ತಿರುವಾಗ ಸ್ವಲ್ಪ ವಯಸ್ಸಾದ ಗಾರ್ಡ್ ಧೊಪ್ಪೆಂದು ನೆಲಕ್ಕೆ ಬಿದ್ದರು. ಅವರಿಗಿಂತಲೂ ಮುಂದೆ ಇದ್ದ ನಾನು ಮತ್ತೆ ವಾಪಾಸಾಗಿ ಅವರನ್ನು ಬೆಲ್ಟ್ ಹಿಡಿದು ಎತ್ತಿದೆ. ಮತ್ತೆ ಓಟ ಶುರು. ಸುಮಾರು ೫೦೦mtr ಓಡಿದ ಮೇಲೆ ಬ್ಯಾಗ್ ತೆಗೆದು ಮತಾಪು ಸಿದಿಸಿದೆವು. ಆಗ ಸದ್ದು ಬೇರೆಲ್ಲೋ ಕೇಳತೊಡಗಿತು. ನಮ್ಮಿಂದ ದೂರ ಹೋದ ವಿಷಯ ಗಟ್ಟಿ ಮಾಡಿಕೊಂಡು ಬದುಕಿದೆ ಬಡಜೀವ ಎಂದು ಹೊರಟೆವು.ಮತ್ತೆ ಕಾಡುಜನರ ಮನೆಗಳ ಹತ್ತಿರ ಬಂದು ನೀರು ಕೇಳಿದೆವು. ಅಲ್ಲಿದ್ದ ಎಲ್ಲ ಜನರು ನಮ್ಮ ಸುತ್ತ ನೆರೆದರು. ಕೆಲ ಹೆಂಗಸರು ನನ್ನ ಕೈಮೇಲೆ ಆದ ಗಾಯಗಳು, ರಕ್ತ ಎಲ್ಲ ನೋಡಿ ಕನಿಕರಿಸಿದರು. ಮುಗ್ದ ಜನ. ಅಷ್ಟರಲ್ಲೇ ಸುದ್ದಿ ಹೆಡ್ ಆಫಿಸ್ ಗೆ ತಿಳಿಸಿದ್ದರು ಗಾರ್ಡ್. ಟೆಲಿಫೋನ್ ಸಂಪರ್ಕ ಇಲ್ಲದ ಕಾರಣ ಅವರ ಹತ್ತಿರ ಇದ್ದ walkie talkie ಇಂದ ಕರೆ ಮಾಡಿದ್ದರು. ಸುದ್ದಿ ಅಲ್ಲಿಗೆ ತಲುಪುವ ವೇಳೆಗೆ ಏನೇನೋ ರೂಪು ಪಡೆದಿತ್ತು. "ಆನೆ ಒಬ್ಬ ಹೆಣ್ಣು ಸ್ವಯಂ ಸೇವಕಿಯ ಮೇಲೆ ದಾಳಿ ಮಾಡಿತಂತೆ ", "ಆನೆಯ ಕಾಲಿಗೆ ಅವಳು ಸಿಕ್ಕಿಬಿದ್ದಳಂತೆ " ಎಂದೆಲ್ಲ .ರೇಂಜ್ ಆಫೀಸರ್ walkie talkie ಗೆ ನನ್ನನು ಬರಹೇಳಿ ಆದದ್ದನ್ನು ಕೇಳಿದರು. ನಾನು ಯಾರಿಗೂ ಏನೂ ಆಗಲಿಲ್ಲ ಎಂದು ಧ್ರಡೀಕರಿಸಿದೆ. ಗಾರ್ಡ್ ಮತ್ತು watcher ಇಬ್ಬರಿಗೂ ಸ್ವಲ್ಪ ಛೀಮಾರಿ ಹಾಕಿ ರೇಂಜ್ ಆಫೀಸರ ಡಿಸ್ಕನೆಕ್ಟ್ ಮಾಡಿದರು. ಕೃಷ್ಣ ಮತ್ತು ಗಾರ್ಡ್ ಭಯಪೂರಿತ ದೃಷ್ಟಿಯಿಂದ ಒಬ್ಬರನ್ನೊಬ್ಬರು ನೋಡಿದರು.ಸರಿ ಮತ್ತೆ ಮಧ್ಯಾಹ್ನದ ಪರ್ಯಂತ ಉಳಿದ ಕೆಲಸ ಮುಗಿಸಲು ನಿರ್ಧರಿಸಿ ಟೆಂಟ್ ಹಾಕಿದ ಜಗುಲಿಗೆ ಬಂದೆವು. ಅಲ್ಲಿನ ಸ್ಥಳೀಯ ಕಾಡುಜನರು ನಮಗಾಗಿ ಅಡುಗೆ ಮಾಡಿದ್ದರು. ಮೀನೋ ಏನೋ ಮಾಡಿದ್ದರಿಂದ ನನಗೆ ಮೊಸರನ್ನ ಸಾಕು ಎಂದೆ . ಒಡನೆಯೇ ಸೆಲ್ವ ಕೃಷ್ಣ ತಮಿಳಿನಲ್ಲಿ ಆ ಕಾಡಿನ ಹೆಣ್ಣು ಮಗುವಿಗೆ ಏನೋ ಆದೇಶ ನೀಡಿದ. ಆತ ಖಾಕಿ ವಸ್ತ್ರ ಧರಿಸಿದ್ದರಿಂದಲೋ ಏನೋ ಹುಡುಗಿ ಎದ್ದೆನೋ ಬಿದ್ದೆನೋ ಎಂಬಂತೆ ಅವಳ ಮನೆಯತ್ತ ಓಡಿದಳು. ನನಗಾಗಿ ಏನೋ ಮಾಡಿಸಲು ಅದೇಷಿಸಿದಂತೆ ಅನಿಸಿ ನನಗೆ ಬರುವ ತಮಿಳಿನಲ್ಲಿ "ವೇಂಡಾ , ಸಾದ, ತೈರ್ ಪೋದುಂ "(ಏನೂ ಬೇಡ ಮೊಸರನ್ನ ಸಾಕು ಎಂಬರ್ಥ!!! ) ಎಂದೆ . ಕೃಷ್ಣ "ನೋ ನೋ ಮೇಡಂ .. ಫ್ರೆಶ್ ವೆಜಿಟಬಲ್ " ಎಂದ. ನನಗಾಗಿ ಬಿಸಿಬಿಸಿ ರಸಂ ಮತ್ತು ಪಲ್ಯೆ ತಯಾರಿಯಾಯಿತು. ಅವರ ತಟ್ಟೆಯಲಿ ಊಟ ಮಾಡುವುದು ಸರಿಯೆನಿಸಲಿಲ್ಲ (ಇದೊಂದು, ಮತ್ತೆ ಹಲವು ವಿಷಯಗಳಲ್ಲಿ ತೀರ ಗೊಡ್ಡು ಸಂಪ್ರದಾಯಸ್ಥೆ ). ದೊಡ್ಡದೊಂದು ಎಲೆ ತೊಳೆದು, ಕುಳಿತೆ. ಊಟ ಮಾಡುವಾಗ ಕೃಷ್ಣನನ್ನು ಒಮ್ಮೆ ನೋಡಿದೆ ಗಾರ್ಡ್ ನ ಹತ್ತಿರ ತಮಿಳಿನಲ್ಲಿ ನನ್ನ ಬಗ್ಗೆ ಮಾತನಾಡುತ್ತಿದ್ದ. "ಕನ್ನಡ something something " ಎಂದು.. ಗಾರ್ಡ್ ಸಹ ನನ್ನನ್ನು ನೋಡಿ ಮೆಚ್ಚುಗೆಯ ನೋಟ ಹರಿಸಿದ. ಎಂಜಲು ತಟ್ಟೆ ಯಲ್ಲಿ ತಿನ್ನಬಾರದೆಂಬ ಗೊಡ್ಡು ಸಂಪ್ರದಾಯ ಇವರಿಗೆ ಚೆನ್ನೆನಿಸಿತೋ ಏನೋ. ಊಟ ಮುಗಿಸಿದಾಗ ಎಲೆ ಎತ್ತಲು ಆ ಹುಡುಗಿ ಮತ್ತೆ ಬಂದಳು. ಅವಳ ಕೈಲಿ ಎಲೆ ತೆಗೆಸುವುದು ಸರಿ ಅನಿಸದೆ ಅವಳನ್ನು ಒತ್ತಾಯಿಸಿ ಹಿಂದಕ್ಕೆ ಕಳಿಸಿದೆ . ಎಲೆ ಎಸೆದು, ನೆಲಕ್ಕೆ ಗೋಮೆ ಮಾಡಿ ಬಂದು ಬಾಳೆ ಹಣ್ಣು ತಿನ್ನಲು ಮುಂದಾದೆ. ಕೃಷ್ಣ ನನ್ನನ್ನು ಉದ್ದೇಶಿಸಿ, " Madam Modern , But tradition " ಎಂದ. ಹೊಗಳಿಕೆ ಕೇಳಿ ನನಗು ಸ್ವಲ್ಪ ಆನಂದವಾಯಿತು. ಅವನ ಇಂಗ್ಲಿಷ್ ಕೇಳಲು ಮುದ್ದಾಗಿತ್ತು.ಸಂಜೆಯ ಎರಡು ರೌಂಡ್ ಮುಗಿಸಿ feces ಸ್ಯಾಂಪಲ್ ಶೇಖರಿಸಿ ವಾಪಾಸ್ ಬರುವ ಸಮಯ, ಸೂರ್ಯಾಸ್ತವಾಗುತ್ತಿತ್ತು. ಕೆಂಪಗಿನ ಸೂರ್ಯ ಡೆಂಕನಿಕೊಟ ಅರಣ್ಯದ ಕೆಂಬಗೆರೆ ಕಾಡನ್ನು ರಂಗಾಗಿಸುತ್ತಿತ್ತು. ಹಕ್ಕಿ ಕಲರವ ಕಡಿಮೆಯಾಗುತ್ತ ಎಲ್ಲೋ ಗೂಕ್ ಗೂಕ್ ಎಂದು ಗೂಬೆಯೊಂದು ರಾತ್ರೆಯಾಗುವ ಮುನ್ಸೂಚನೆ ನೀಡುತ್ತಿತ್ತು. ತಂಗಾಳಿ ಸ್ವಲ್ಪ ಭಾರವಾಗಿ ತೀಕ್ಷ್ಣತೆ ಪಡೆದುಕೊಂಡಿತ್ತು. ಪುಟ್ಟ ಗದ್ದೆಯ ಮಧ್ಯ ಹಕ್ಕಿಗಳನ್ನೋಡಿಸಲು ಕಟ್ಟಿದ ಬಟ್ಟೆಯೊಂದು ಪಟ ಪಟ ಶಬ್ದ ಮಾಡುತ್ತಿತ್ತು. ಮುಂಜಾನೆಯೋ ಸಂಜೆಯೋ ತಿಳಿಯದೆ ಕಾಡು ಕೋಳಿಯೊಂದು ತೆಕ್ಕೆಕೋ ತೆಕ್ಕೆಕ್ಕೋ ಎನ್ನುತ್ತಿತ್ತು. ನಾನಂತೂ ಇದೆಲ್ಲ ಆಸ್ವಾದಿಸುವ ಚಟದವಳು. ನಿಧಾನವಾಗಿ ಹಿಂದೆ ಹಿಂದೆ ಸರಿದು ಒಬ್ಬಳೇ ನಡೆಯುತ್ತಿದ್ದೆ. ಬೇರೆಯವರೆಲ್ಲ ಹೋಗಲಿ ಎಂದು. ಎಲ್ಲರಿಂದ ಸುಮಾರು ೧೦೦ mtr ಹಿಂದೆ ಇದ್ದಾಗ ಕೃಷ್ಣ ತಿರುಗಿ ನೋಡಿ ಮತ್ತೆ ವಾಪಸು ಬಂದ. ಭಂಡ !! ನನ್ನ ಏಕಾಂತಕ್ಕೆ ಕತ್ತರಿಯಾಯಿತು. "ನೀ ಪೋ... ನಾ ವರೆ... ನೇಚರ್ ನೈಸ್ " ಎಂದೆ . ದುಷ್ಟ ! "NO madam , I responsible " ಎಂದ. ಥು ಇವನ .. ಇವನು ಜೊತೆಯಲ್ಲಿ ಇರುವುದು ಸರಿಯೆನಿಸಲಿಲ್ಲ. ಬೇಗ ಬೇಗ ಹೆಜ್ಜೆ ಹಾಕಿದೆ "Madam one question " ಎಂದ... "ಎನ್ನ " ಎಂದೆ. "how old madam" ಎಂದು ನೇರ ವಯಸ್ಸನ್ನೇ ಕೇಳಿಬಿಟ್ಟ!! ನಾ ನಕ್ಕು "ವೈ " ಎಂದೆ. ಆ ಪ್ರಶ್ನೆಗೆ ಉತ್ತರಿಸದೆ "marriage ?" ಅಂದ . "ನೋ " ಎಂದೆ . "Father what doing madam" ಎಂದ. "ನೋ ಫಾದರ್ " ಎಂದೆ. ತಂದೆ ಇಲ್ಲ ಎಂಬುದನ್ನು ಕೇಳಿ ಕನಿಕರ ಮೂಡಿತೋ ಏನೋ. ಸ್ವಲ್ಪ ಹೊತ್ತು ಸುಮ್ಮನಿದ್ದ. ಮತ್ತೆ ಎರಡು ನಿಮಿಷವಾದಮೇಲೆ "Boyfriend ?" ಎಂದ. "ಎಸ್ " ಅನ್ನಬೇಕಿತ್ತೋ ಏನೋ. ಆಗ ಹೊಳೆಯಲಿಲ್ಲ . "ನೋ " ಎಂದೆ. ಅವನ ಮುಖ ಕೃಷ್ಣ ವರ್ಣದಿಂದ ಕೆಂಪಾಗ ತೊಡಗಿತು. ನನ್ನತ್ತ ತಿರುಗಿ ನೋಡಿ "how I am ? Like me?" ಎಂದ. ಈಗ ನಿಜವಾಗಿಯೂ ಮುಂದಿನ ಪ್ರಶ್ನೆ ಏನಿರಬಹುದು ಎಂದು ಊಹಿಸಿದೆ "ವೆರಿ Handsome , nice " ಎಂದು ಪ್ರಾಮಾಣಿಕವಾಗಿ ಹೇಳಿದೆ. ಆಮೇಲೆ ತಮಿಳಿನಲ್ಲಿ ಏನೇನೋ ಹೇಳಿದ. ನನಗೆ ತಿಳಿಯಲಿಲ್ಲ. ಎರಡು ವಾಕ್ಯ ಮುಗಿಸಿ "marriage ? " ಎಂದು ಕೇಳಿದ. ನನಗೆ ನಗು ಉಕ್ಕಿ ಬಂತು. ಅವನ ಮುಗ್ಧತೆ ಇನ್ನೂ ಮುದ್ದಾಗಿ ಕಂಡಿತು. ಮುಖದಲ್ಲಿ ಸ್ವಲ್ಪ ಕೋಪ ತರಿಸಿ "Arranged marriage" ಎಂದಾಗ ಅವನ ಮುಖ ನೋಡಬೇಕಿತ್ತು.... ಅವನ ಉದ್ದೇಶ್ಯ ಸ್ಪಷ್ಟವಾಗಿತ್ತು ಮತ್ತು ನಿಷ್ಕಲ್ಮಷತೆ ಎದ್ದು ಕಾಣುತ್ತಿತ್ತು.
ಕ್ಯಾಂಪ್ vacate ಮಾಡಿ, ಪುಟ್ಟ ಬ್ಯಾಗ್ ನ ತುಂಬಾ ನೆಲ್ಲಿಕಾಯಿ ಮತ್ತು ಹುಣಿಸೆ ಹಣ್ಣು ತುಂಬಿಸಿಕೊಂಡು ಹೊರಟಾಗ ಕೃಷ್ಣ ಒಂದು ಚೀಲ ನೆಲಗಡಲೆ ತಂದು ಕೈಗಿತ್ತ. ಅಲ್ಲಿಂದ ಜೀಪ್ ಹತ್ತಿ ಹೆಡ್ ಆಫೀಸ್ ಸೇರಿದೆವು. ನಾವು ತಲುಪುತ್ತಲೇ ಸುಳ್ಳು ಸುದ್ಧಿ ಹರಡಿದ್ದರಿಂದ ಎಲ್ಲ ನನ್ನನ್ನು ನೋಡಲು ಕಾತರರಾಗಿದ್ದರು. ಒಂದೆರಡು ತರುಚಿದ ಗಾಯ ಮಾತ್ರ ನೋಡಿ ಕೆಲವರು ನಿರಾಶರೂ ಆದರು. ಹೆಡ್ ಆಫಿಸ್ ಒಳಗೆ ಕೃಷ್ಣ ಮತ್ತು ಗಾರ್ಡ್ ನಡೆದರು. ಗೆಳೆಯರಿಗೆ ನನ್ನ ಸುಖಗಮನದ ಸುದ್ದಿ ತಿಳಿಸಿ ನನ್ನ ಹತ್ತಿರವಿದ್ದ ರಿಪೋರ್ಟ್ ಕೊಡಲು ಹೆಡ್ ಆಫೀಸ್ ಗೆ ಹೋದೆ. ರೇಂಜ್ ಆಫೀಸೆರ್ ಕೃಷ್ಣ ಮತ್ತು ಗಾರ್ಡ್ ನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು . ನಾವು ಆನೆ ನೋಡಲು ಹೋದ ಪ್ರದೇಶ ನಿಷೇದಿತ ವಾದುದೆಂದು ತಿಳಿದೂ ಹೋದ ಕಾರಣಕ್ಕೆ. ಇಂಗ್ಲಿಷ್ ಚೆನ್ನಾಗಿ ಬಲ್ಲ ರೇಂಜ್ ಆಫೀಸರ್ ಗೆ ತಪ್ಪು ನಮ್ಮದೆಂದು , ಇನ್ನೆಂದು ಇಂಥಹ ಅಪಚಾರ ಆಗದು ಎಂದು ಹೇಳಿ ಅವರಿಬ್ಬರನ್ನು ಶಿಕ್ಷಿಸುವುದು ಸರಿಯಲ್ಲವೆಂದು ಕೇಳಿಕೊಂಡೆ. ಕೃಷ್ಣನ ಹಾಗು ಗಾರ್ಡ್ ನ ಮುಖ ಬಿಳಿಚಿ ಹೋಗಿತ್ತು.
ಎಲ್ಲ ಮುಗಿದು ಬೆಂಗಳೂರಿಗೆ ಹಿಂತಿರುಗುವ ಏರ್ಪಾಡಾಗಿತ್ತು. ನನ್ನ ಟೆಂಪೋ ಟ್ರಾವೆಲರ್ ಸೇರಿ ಕಿಟಕಿಯಿಂದ ಆಚೆ ನೋಡಿದೆ. ಗಾರ್ಡ್ ಮಾತ್ರ ಇದ್ದ. ಅವಮಾನಿತನಾದ ಕೃಷ್ಣ ನನ್ನನ್ನು ಬೀಳ್ಕೊಡಲೂ ಬರಲಿಲ್ಲ. ನನ್ನ ಜೀವನದಲ್ಲಿ ನಡೆದ ಅತಿ ಪುಟ್ಟ love story ಶುರುವಾಗುವ ಮೊದಲೇ ಕೊನೆಗೊಂಡಿತ್ತು