ಅದೊಂದು ಸಾಧಾರಣ ದಿನ. ಆಫೀಸಿನ ಹತ್ತು ಕೆಲಸದ ಮಧ್ಯೆ ಅಲ್ಲಿ ಇಲ್ಲಿ ನಿಂತು ಚಿಂತಿತರಾಗಿ ಮಾತಾಡುತ್ತಿದ್ದುದು ದಿನ ನಿತ್ಯಕ್ಕಿಂತ ಸ್ವಲ್ಪ ವಿಭಿನ್ನವಾಗಿತ್ತಲ್ಲ! ಹೆಚ್ಚು ಕಮ್ಮಿ ಎಲ್ಲರ ಬಾಯಲ್ಲೂ ಒಂದೇ ವಿಷಯ ಚರ್ಚೆಯಾಗ್ತಿತ್ತು. ಆ ೬ ವರ್ಷದ ಮಗುವನ್ನು ದುಷ್ಟರಿಬ್ಬರು ಅಪಹರಿಸಿ ಅತ್ಯಾಚರವೆಸಗಿದ್ದು.! ೬ ವರ್ಷದ ಹಸುಗೂಸದು. ಅದೇ ಸುದ್ದಿಯ ಹಿಂದು- ಮುಂದು ಅರಿಯಲು ನ್ಯೂಸ್ ಓದುತ್ತ ಇದ್ದೆ. ಇಂತಹ ವಿಷಯ ಕೇಳಿದಾಗ, ಮನಸ್ಸು ತುಂಬಾ ಮರುಗುತ್ತದೆ. ದೆಹಲಿಯ ರೇಪ್ ವಿಷಯ ಕೇಳಿದಾಗಲೂ ಒಂದೆರಡು ದಿನ ಅದೇ ವಿಷಯದ ಕಾರ್ಮೋಡ ಕವಿದಿತ್ತು ಮನದಲ್ಲಿ.
ಈಗ ಮತ್ತೆ ಅದೇ ರೀತಿಯ ಕಳವಳ. ಈ ಪರಿಸ್ಥಿತಿ ಯಾರಿಗೆ ಬಂದರೂ ಅದಕ್ಕಿಂತ ಹೀನ ಸ್ಥಿತಿ ಇನ್ಯಾವುದು ಇರಲಾರದು. ಒಂಟಿಯಾಗಿ ಜೀವನ ನಡೆಸುವ ಮಹಿಳೆಯರ ಪಾಡೇನು? ಕೆಲಸಕ್ಕೆ ಹೋಗುವ ನಮ್ಮಂಥ ಹೆಣ್ಣು ಮಕ್ಕಳು ಮನೆಯೊಳಗೆ, ಹೊರಗೆ ಸುರಕ್ಷಿತರೆ? ನಾಳೆ ನಮ್ಮ ಮಕ್ಕಳ ಭವಿಷ್ಯ ಹೇಗೆ .
ಕಾರ್ ನಿಲ್ಲಿಸಿ ಮನೆಯತ್ತ ನಡೆಯುವಾಗಲೂ ಅದೇ ಯೋಚನೆ. ರಸ್ತೆ ದಾಟುವಾಗ BMTC ಬಸ್ಸೊಂದು ಬರುತ್ತಲಿತ್ತು. ನನ್ನ ಮನೆ ಇರೋ ಅಡ್ಡ ದಾರಿಯಿಂದ ಆಕ್ಟಿವಾ ಒಂದರಲ್ಲಿ ಬರುತ್ತಿದ್ದ ಮನುಷ್ಯ ನನ್ನನ್ನು ನೋಡಿ ಅಲ್ಲೇ ನಿಂತ. ನಾನು ಅವನ ಕಡೆ ಗಮನ ಹರಿಸದೆ ರಸ್ತೆ ದಾಟಿದೆ. ಗಾಡಿ ತಿರುಗಿಸಿ ನನ್ನ ಹತ್ತಿರ ಬಂದು ಒಂದೆರಡು ಬಾರಿ "ಎಕ್ಸ್ಕ್ಯೂಸ್ ಮೀ " ಎಂದ .
ಅವನು ಮಾತನಾಡಿಸಬಹುದೆಂದು ಊಹಿಸಿರಲಿಲ್ಲವಾದ್ದರಿಂದ ಪೆಚ್ಚಾಗಿ ಒಮ್ಮೆ ಅವನನ್ನೇ ನೋಡಿದೆ. ಸುಮಾರು ೩೦-೩೫ ವಯಸ್ಸಿನವನಿರಬಹುದು. ತಲೆ ಮೇಲೆ ವಿರಳವಾಗಿದ್ದ ಕೂದಲು, ಖಾಖಿ ಬಣ್ಣದ t shirt ಹಾಕಿದ್ದ. ಇಂಗ್ಲ್ಸಿಶ್ ನಲ್ಲೇ, "ರಸ್ತೆ
ದಾಟುವಾಗ ನನ್ನದೊಂದು ಪರ್ಸ್ ಬಿದ್ದದ್ದು ನೋಡಿದಿರಾ?" ಎಂದ . ಬಹಳ
ಪ್ರಾಮಣಿಕಳಾಗಿ , "ನಾನು ಗಮನಿಸಲಿಲ್ಲ " ಎಂದೆ . ರಸ್ತೆಯ ಮೇಲೆ ಏನು ಬಿದ್ದಿದೆ ಎಂದು ನೋಡುವಷ್ಟು ವ್ಯವಧಾನ ಇರಲಿಲ್ಲ ನನಗೆ.
ಮಾತು ಮುಂದುವರೆಸುತ್ತ "ನನ್ನ ಪರ್ಸ್ ಕಳೆದು ಹೊಗಿದೆ. ನನ್ನ ತಾಯಿಯ ಮೇಲೆ ಆಣೆ . ನನಗೆ ೧೨೦ ರುಪಾಯಿ ಬೇಕು. ನನಗೆ ೨೦೦ ಕೊಟ್ಟರೆ ನಾಳೆ ಬೆಳಿಗ್ಗೆ ತಯಾಣೆ ಹಿಂದಿರುಗಿಸುತ್ತೇನೆ. ನಾನೂ ಇದೇ ರಸ್ತೆಯಲ್ಲಿ ಇರುವುದು " ಎಂದ. ನನಗೂ ಏನು ಮಾಡಬೇಕೆಂದು ತಿಳಿಯಲಿಲ್ಲ.ಅವನನ್ನು ನೋಡಿದರೆ ನಿಜ ಹೇಳುತ್ತಿರುವನೆಂದು ಅನಿಸಿತು. (೧೦ ಕ್ಕೆ ೯ ಜನರನ್ನು ಸಾಧಾರಣ ನಂಬೋ ಪೈಕಿ ನಾನು. ಅದು ಬೇರೆ ವಿಷಯ !!)
ಕರ್ಣನ DNA ನನ್ನೊಳಗೇ ಇದೆ ಎಂಬಂತೆ, ನಾನು ೨೦೦ ತೆಗೆದು ಹಿಂದೂ ಮುಂದು ಯೋಚಿಸದೆ ಅವನ ಕೈಗಿತ್ತೆ. "ನಿಮಗೆ ಹೇಗೆ ಈ ಹಣ ಹಿಂದಿರುಗಿಸಲಿ" ಎಂದ. ಈ ರಸ್ತೆಯ ಬದಿಗಿರುವ ಕಿರಾಣಿ ಅಂಗಡಿಗೆ ಕೊಡಿ. ನಾನವರಿಂದ ತೆಗೆದು ಕೊಳ್ಳುತೇನೆ " ಎಂದೆ . "ಥಾಂಕ್ ಯೂ " ಹೇಳಿ ಮಾಯವಾದ.
ಹಣ
ಕೊಟ್ಟ ನಂತರ ಮೋಸ ಹೋದೇನೋ ಏನೋ ಎಂದು ಯೋಚಿಸುತ್ತ ಮನೆಯತ್ತ ಕಾಲಿಟ್ಟೆ.
ಮನೆ
ಸೇರಿದ ಮೇಲೂ ಅದೇ ಮೋಸ ಹೋದ ಮೇಲೆ ಆಗುವ "ಬಕರಾ " ಭಾವನೆ. ಇದು ಮೊದಲನೇ ಸಾರಿ ಏನಲ್ಲ.
ಬೆಳಗ್ಗಿನಿಂದ ಯಾಕೋ ಸುಸ್ತು ಎನಿಸುತಿತ್ತು. ಒಮ್ಮೊಮ್ಮೆ ಸಂಜೆ ತನಕ ಜೀವ ಬಳಲಿ ಹಾಸಿಗೆ ನೋಡಿದರೆ ಸಾಕು ಕಣ್ಣು ಮುಚ್ಚಿ ಹಾಗೇ ನಿದ್ರಾದೇವಿಯನ್ನು ತಬ್ಬಿಕೊಳ್ಳುವ ಹಾಗೆ. ಇಂದೂ ಅಷ್ಟೇ ಸುಸ್ತಾಗಿತ್ತು. TV ತನ್ನ ಕರ್ತವ್ಯವೆಂಬಂತೆ ಬಾಯಿ ಬಡಿದುಕೊಳ್ಳುತ್ತ ಇತ್ತು. ಅದು ಅದರ ಕರ್ಮ. ಹೇಗೆ ಒಂದು ಸಣ್ಣ ನಿರ್ಜೀವ ವಸ್ತು ಎಲ್ಲರನ್ನು ತನ್ನತ್ತ ಸೆಳೆಯುತ್ತದೆ!
TV ಇಲ್ಲದ ಒಂದೂ ಮನೆ ಈಗಿನ ಕಾಲದಲ್ಲಿ ಇಲ್ಲವೇನೋ! ಮತ್ತೆಷ್ಟು ಮನೆಗಳಲ್ಲಿ ಇದರಿಂದಾಗಿ ಒಬ್ಬರನ್ನೊಬ್ಬರು ಮಾತನಾಡಿಸುತ್ತಿಲ್ಲವೋ !! ಆದರೂ ಒಬ್ಬೊಬ್ಬರೇ ಇರುವ ಮನೆಗಳಲ್ಲಿ ಮಾತ್ರ ಇದೊಂದು ವರವೇ ಸರಿ. ನನ್ನ ಬಿಟ್ಟರೆ ಮತ್ತೊಬ್ಬರು ಇದ್ದಾರೆ ಎಂದು!.
ಬಾಗಿಲು ಟಕ್ -ಟಕ್ ಎಂದು ಸದ್ದು ಮಾಡಿದ ಹಾಗೆ. ಇನ್ನು ರೂಂ ಮೇಟ್ ಬರುವ ಸಮಯ ಆಗಿಲ್ಲ ! ಯಾರಿರಬಹುದು? ನೀರಿನವನು, ಕೆಲಸದವಳನ್ನು ಬಿಟ್ಟರೆ ಸಂಜೆ ಮೇಲೆ ಇನ್ಯಾರೂ ನಮ್ಮ ಮನೆಗೆ ಬರುವುದಿಲ್ಲ . ೩ ನೆ ಮಹಡಿಯಲ್ಲಿ ಇರುವ ೪ ಮನೆಗಳಲ್ಲೂ ನಾವು ಬ್ಯಾಚುಲರ್ಗಳೇ ಇರುವುದು. ಅಕ್ಕ ಪಕ್ಕದ ಮನೆಯವರನ್ನು ಇಂದಿಗೂ ಮಾತನಾಡಿಸಿಲ್ಲ . ಮತ್ತೆ ಬಾಗಿಲು ಟಕ್ -ಟಕ್.
ಬಾಗಿಲು ತೆಗೆದು ನೋಡಿದರೆ, ಅದೇ
ವ್ಯಕ್ತಿ!! ಸ್ವಲ್ಪ ಓರೆಯಾಗಿ ನಿಂತು ನಗುತ್ತ ಇದ್ದಾನೆ!. ನಾನೇ ಹೊರಗೆ ಬಂದು ಬಾಗಿಲನ್ನು ಓರೆ ಮಾಡಿದೆ. "ಹ್ಹ ?!!" ಎಂದೆ. ಪರಿಚಯ ಇಲ್ಲ ಎಂಬಂತೆ. ಇಂಗ್ಲಿಷ್ ನಲ್ಲಿ "ನಿಮ್ಮ ಹತ್ತಿರ ಹಣಾ ತೆಗೆದುಕೊಂಡಿದ್ದೆ" ಎನ್ನುತ್ತಾ ೫೦೦ರ ನೋಟು ಕೈಯಿಗೆ ಕೊಟ್ಟ. "ಒಹ್ !" ಎನ್ನುತ್ತಾ "ಚಿಲ್ಲರೆ ಇಲ್ಲ ಎಂದೆ ".
"ಒಮ್ಮೆ ನೋಡಿ, ಇರಬಹುದು " ಎಂದ.
ಹಿಂತಿರುಗಿ ಒಳಗೆ ಹೋಗಲು ಇನ್ನೇನು ತಿರುಗಬೇಕು ಎನ್ನುವಷ್ಟರಲ್ಲೇ ನನ್ನ ಬೆನ್ನಿಗೆ ಜೋರಾಗಿ ಗುದ್ದಿ ನನ್ನನ್ನು ಮನೆಯೊಳಕ್ಕೆನೂಕಿದ . "ವಾಟ್" ಎಂದು ಉದ್ಗರಿಸುವಷ್ಟರಲ್ಲೇ ನನ್ನ ಬಾಯಿಗೆ ಅಡ್ಡ ಕೈ ಇಟ್ಟು, ನನ್ನನ್ನು ಇನ್ನು ಒಳಕ್ಕೆ ತಳ್ಳಿ , ಬಾಗಿಲು ಹಾಕಲು ಪ್ರಯತ್ನಿಸಿದ. ಅವನ ಕೈ ಎಷ್ಟು ಬಲವಾಗಿ ನನ್ನ ಬಾಯಿ ಮುಚ್ಚಿತ್ತೆಂದರೆ ನನ್ನ ತುಟಿ ಹಲ್ಲಿಗೋ, ಅವನ ಕೈ ಉಂಗುರಕ್ಕೋ ತಾಕಿ ಹರಿಯಿತು. ನೋವು ಅಮ್ಮಾ ಎಂದು ಚೀರಲೂ ಆಗಲಿಲ್ಲ.. ಅಷ್ಟರಲ್ಲಿ ಬಾಗಿಲು ಹಾಕಿ ತನ್ನ ಹಿಡಿತ ಸಡಿಲಿಸಿ ನನ್ನನ್ನು ತನ್ನ ಕಡೆಗೆ ತಿರುಗಿಸುವ ಪ್ರಯತ್ನ ಮಾಡ ತೊಡಗಿದ. ತಿರುಗಿಸಿದ ರಭಸಕ್ಕೆ ನನ್ನ ಕಾಲ್ಬೆರಳು ಕುರ್ಚಿಯ ಕಾಲಿಗೆ ತಗುಲಿ ರಕ್ತ ಸುರಿಯಲು ಪ್ರರಮ್ಭವಾಯ್ತು. ಮತ್ತೆ ನನ್ನನ್ನು ಹಿಂದಕ್ಕೆ ಬಾಯಿ ಮುಚ್ಚಿಟ್ಟೇ, ಮತ್ತೊಂದು ಕೈಯಿಂದ ಕೂದಲನ್ನು ಎಳೆಯ ತೊಡಗಿದ. ನೋವು ತಾಳಲು ಇನ್ನು ಶಕ್ತಿಯೇ ಇರಲಿಲ್ಲ. ಕಣ್ಣು ಮಂಜಾದ ಹಾಗೆ. ಅವನ ಕೈ ಆಗಿಂದಾಗ್ಗೆ ನನ್ನನ್ನು ಅಲ್ಲಿ ಇಲ್ಲಿ ಸ್ಪರ್ಶಿಸುತ್ತಿತ್ತು.
"ಅಮ್ಮಾ " ಎಂದು ಗಕ್ಕನೆ ಎದ್ದೆ. ಮುಖ, ಮೈಮೇಲೆ ಬೆವರು ಹನಿಗಳು. ಒಂದೆರಡು ಘಳಿಗೆ ಇದೆಲ್ಲ ನನ್ನ ಜೊತೆ ನಿಜವಾಗಿಯೂ ನಡೆದ ಹಾಗೆ ಅನಿಸಿತ್ತು. ಎಂತಹ ಭಯಾನಕ ಕನಸು. ಕನಸೇ ಹೀಗೆ ನನ್ನ ಅಸ್ತಿತ್ವವನ್ನು ಕದಲಿಸಿರುವಾಗ, ಆ ಮುದ್ದು ಕಂದಮ್ಮ ಏನೇನನ್ನು ಸಹಿಸಿರಬೇಡ. ಅಬ್ಬಾ ಕ್ರೂರ ಮಾನವ. ಆ ಹಾಲುಗಂದಮ್ಮ ಚೀರಿದಾಗ ನಿನ್ನ ಮನಸ್ಸು ಮರುಗಲಿಲ್ಲವೇ?
ಇದೆಲ್ಲರ ನಡುವೆ, ನನ್ನ ೨೦೦ ರುಪಾಯಿ ಹೋದದ್ದೇನೂ ದೊಡ್ಡ ನಷ್ಟವಲ್ಲ. ಒಂದೊಮ್ಮೆ ಕನಸಿನಲ್ಲಿ ಆದದ್ದು ನಿಜವಾಗಿದ್ದರೆ ಅದಕ್ಕಿಂತ ದೊಡ್ಡ ಅಪಘಾತ ಇನ್ನೊಂದಿಲ್ಲ ಎಂದೆನಿಸಿತು.