ಸಿಗ್ನಲ್ ಹಸಿರಾಗುತ್ತಲೇ ತಾಳ್ಮೆಗೆಡುತ್ತಾ "ಪೀಂ ಪೀಂ ಪೋಂ ಪೋಂ" ಎಂದು ಹಾರ್ನ್ ಮಾಡುತ್ತಿದ್ದ ಗಾಡಿಗಳನ್ನು ನೋಡಿ ನನಗೂ ಸ್ವಲ್ಪ ರೇಗಿತ್ತು. ಅಷ್ಟೇನೂ ಹೆಚ್ಚು ವಾಹನಗಳಿರದ ಸಾಧಾರಣ ಟ್ರಾಫಿಕ್ , ಮತ್ತೇಕೆ ಜನ ಇಷ್ಟು ಅಸಮಧಾನ ವ್ಯಕ್ತ ಪಡಿಸುತ್ತಿದ್ದಾರೋ ಎಂದು ಅನಿಸ ತೊಡಗಿತು. ಬೆಂಗಳೂರಿನ ಅತೀ ಪ್ರತಿಷ್ಟಿತ ರಸ್ತೆ. ಮೊಟ್ಟ ಮೊದಲ ಬಾರಿಗೆ ಮೆಟ್ರೋ ಚಾಲ್ತಿಯಾದ ಮಾರ್ಗ. ಮತ್ತೆ ಹತ್ತು ಹಲವು ಹೊಸ-ಹಳೆ ಬಹು ಮಹಡಿಯ ಕಟ್ಟಡಗಳು. ದೇಶ ವಿದೇಶಗಳಿಂದ ಬಂದ, ವಿವಿಧ ವೇಷ ಭೂಷಣಗಳ, ವಿವಿಧ ಭಾಷೆಗಳನ್ನಾಡುವ , ಎಲ್ಲ ಜಾತಿ ಮತದ, ಹಿರಿ -ಕಿರಿ ಯರು ಓಡಾಡುವ ರಸ್ತೆ. ಅಲ್ಲೇ ಒಂದು BMTC ಬಸ್ ನಿಲ್ದಾಣ. ಆದರೆ ಆ ಮಾರ್ಗವಾಗಿ ಓಡಾಡುವ ಬಸ್ ಸಂಖ್ಯೆ ಅತೀ ವಿರಳ. ಬಸ್ ನಿಲ್ದಾಣದಲ್ಲೂ ಇರುವುದು ಒಬ್ಬರೋ - ಇಬ್ಬರೋ ಅಷ್ಟೇ. ಅಲ್ಲೇ ಸ್ವಲ್ಪ ಕಣ್ಣಾಡಿಸಿದರೆ ಒಂದೆರಡು ಕಡೆ ಕಾಣಸಿಗುವ ಹುಡುಗಿಯರು. ನೋಡಲು ಹೇಗಿದ್ದರೂ , ಅಂಗಾಂಗ ಕಾಣುವ ಹಾಗೆ ಧರಿಸಿರುವ ವಸ್ತ್ರಗಳು. ಹೋಗಿ ಬರುವ ಗಂಡಸರನ್ನು ನೋಡುತ್ತಾ, ಮೋಹಕ ನಗೆ ಬೀರುತ್ತಾ, ನಿಲ್ಲುವ ಆಟೋ - ಟ್ಯಾಕ್ಸಿ, ಬೈಕ್ ಗಳ ಹತ್ತಿರ ಹೋಗಿ ನಿಂತು ಮಾತಾಡಿಸಿ ಮತ್ತೆ ಬಂದು ನಿಲ್ಲುವ ಲಲನೆಯರು. ಸ್ವಲ್ಪ ದೂರ, ಅಗೋ ಆ ಸಿಗ್ನಲ್ ಹತ್ತಿರದ ಮರದ ಕೆಳಗೆ ಒಂದು ಆಟೋ. ಅವನು ಸಹ
ತನ್ನ ಆಟೋವಿನ ಹಿಂದೂ ಮುಂದೂ ಪಾರ್ಕ್ ಮಾಡುವ ಗಂಡಸರ ಹಿಂದೆ ಹೋಗಿ "ಸರ್ ಆಟೋ ಬೇಕಾ ?" ಎಂದು ಮುಗುಳ್ನಕ್ಕು ಅವರ ಉತ್ತರಕ್ಕಾಗಿ ಕಾಯುವವ ... ಅರ್ಥ ಮಾಡಿಕೊಂಡು ಹೌದು ಎನ್ನುವವರನ್ನು ಕರೆದುಕೊಂಡು ಆಟೋನಲ್ಲಿ ಕೂರಿಸಿ ತನ್ನ ಹತ್ತಿರದ ಆಲ್ಬಮ್ ತೋರಿಸಿ ಬೆಲೆ ವಿಷಯಕ್ಕೆ ಇಳಿಯುವವ.ಮತ್ತಿನ್ನೂರು ಮುನ್ನೂರು ಗಜಗಳಲ್ಲೇ ಹೊಯ್ಸಳ ಗಾಡಿಯ ಎಲ್ಲ ದೀಪಗಳನ್ನು ಆರಿಸಿ ಕುಳಿತು ಹರಟೆ ಹೊಡೆಯುತ್ತಿರುವ ಆರಕ್ಷಕರು.
ಇಷ್ಟು ಪೀಠಿಕೆ ಹಾಕಿದ ಮೇಲೆ ಇಲ್ಲಿ ನಡೆಯುತ್ತಿರುವುದಾದರೂ ಏನು ಎಂದು ಅರ್ಥ ಮಾಡಿಕೊಂಡವರು ಜಾಣರು. ಇಷ್ಟು ಹೇಳಿದ ಮೇಲೂ ಇನ್ನೂ ತಿಳಿಯದೆ ಇದ್ದರೆ ನಿಮ್ಮಂಥ ಮುಗ್ಧ ಮನುಷ್ಯ ಇನ್ನೂ ಈ ಪ್ರಪಂಚದಲ್ಲಿ ಇದ್ದಾರೆ ಎಂಬ ಹೆಮ್ಮೆ. ಇಲ್ಲಿ ನಡೆಯುತ್ತಿರುವುದು ಶುಧ್ಧ ಮಾಂಸದ ಧಂಧೆ. ವಯಸ್ಸಿನ ಹೆಣ್ಣು ಮಕ್ಕಳು ಬೀದಿಯಲ್ಲಿ ನಿಂತು ಗಂಡಸರಿಗೆ ತಮ್ಮನ್ನು ತಾವೇ ಮಾರಿಕೊಳ್ಳುವುದು! ಕೆಲವೊಮ್ಮೆ ಆಟೋ ಡ್ರೈವರ್ ಗಳ ಮೂಲಕ ಕಾರುಬಾರು. ಒಮ್ಮೆ ನೋಡಿಯೇ ಅರ್ಥ ಮಾಡಿಕೊಳ್ಳಬಹುದಾದ ಇಷ್ಟು ನೇರವಾದ ವಿಷಯ , ಪೋಲೀಸರ ಗಮನಕ್ಕೆ ಬಾರದೆ ಇರುವುದೇ? ಅವರ ಮೇಲೂ ನನಗೆ ಅನುಮಾನ !!! ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಜೊತೆಗೆ ಅಕ್ರಮ ಧಂದೆ ಯ ಸಿಟಿ ಎನ್ನಬಹುದೇನೋ.
ದೃಶ್ಯ II
ಹಳ್ಳಿಯ ಸ್ವಲ್ಪ ಹೊರಗೆ ಸರ್ಕಾರಿ ಪ್ರಾಥಮಿಕ ಶಾಲೆಯ ಅಂಗಳ. ಅಲ್ಲೊಂದು ಮರದ ಸುತ್ತ ಮಕ್ಕಳಿಗೆ ಕೂರಲೆಂದು ಮಾಡಿದ ಕಟ್ಟೆ. ಅದರಡಿ ಬಳಪದ ಕಲ್ಲಿನಿಂದ ಚೌಕಗಳನ್ನು ಬರೆದು ಆಟವಾಡುತ್ತಿರುವ ಬಾಲೆಯರು. ಇನ್ನೇನು ಅಸ್ತವಾಗೋ ನಿರ್ಧಾರ ಮಾಡಿರುವ ಅರ್ಕದೇವ, ಕೆನ್ನೀರು ಚೆಲ್ಲುತ್ತಾ ಹೊಲ ಗದ್ದೆ ಶಾಲೆಯ ಮೇಲೂ ರಂಗು ಚೆಲ್ಲಿದ್ದ. ಬಾಲೆಯರ ಮೆತ್ತನೆಯ ಮುಂಗುರುಳುಗಳನ್ನು ಮಿನುಗುವ ಪುಟ್ಟ ಪುಟ್ಟ ಕಂಗಳಿಗೆ ತೂರುವ ತಂಗಾಳಿ. ಅವುಗಳನ್ನು ಮುದ್ದು ಕೈಗಳಿಂದ ಸರಿಸುತ್ತಾ ಹುಣಿಸೆ ಬೀಜಗಳಿಂದ ಚೌಕಾಬಾರ ಆಡುತ್ತಿರುವ ಇಬ್ಬರು ಬಾಲೆಯರು. ವಯಸ್ಸು ಏಳೊ ಎಂಟೋ ಅಷ್ಟೇ. ಕಟ್ಟೆಯ ಮೇಲೆ ಕೂತ ಮಕ್ಕಳಿಗೆ ಆಡುವ ಸಂಭ್ರಮ! ಅಲ್ಲೇ ಶಾಲೆಯ ಜಗುಲಿಯ ಮೇಲೆ ಬೀಡಿ ಸೇದುತ್ತಾ ಆಡುತ್ತಿರುವ ಮಕ್ಕಳನ್ನು ಗಮನಿಸುತ್ತಿರುವ ಎರಡು ಹಸಿದ ಕಣ್ಣುಗಳು. ಬೀಡಿ ಪೂರ್ತಿ ಸೇದಿ ಎಸೆದು ಹೋಗಿ, ಇಬ್ಬರಲ್ಲಿ ಒಬ್ಬರನ್ನು ನೆಪ ಮಾಡಿ ಕಳಿಸುವ ಉಪಾಯ ಹೂಡಬೇಕು! ಕೆಲಸ ಮುಗಿದ ಮೇಲೆ ಮಗುವನ್ನು ಹೆದರಿಸಿ ಅಥವಾ ಏನಾದರು ಕೊಡಿಸಿ ಆದದ್ದನ್ನು ಮರೆಯಿಸಿದರಾಯಿತು. ಬೀಡಿಯನ್ನು ಕಾಲಿಂದ ಹೊಸೆದು ಇನ್ನೇನು ಹೊರಡಬೇಕೆನ್ನುಕೊಳ್ಳುವಷ್ಟರಲ್ಲೇ ಹೊಗೆಯಿಂದಾಗಿ ಎದೆಯಲ್ಲಿ ಕಫ ಕೂತು ಜೋರಾಗಿ ಕೆಮ್ಮಲು ಶುರು ಮಾಡಿದನು. ಕೆಮ್ಮಿನ ಶಬ್ದ ಕೇಳಿ ಅತ್ತ ನೋಡಿದ ಮಗುವಿನ ಕಂಗಳು ಭಯದಿಂದ ಸ್ಥಬ್ದವಾದುವು. ಒಮ್ಮೆಲೇ ಉಸಿರು ಹಿಡಿದು, ಎವೆಯಿಕ್ಕದೆ ಒಂದು ಘಳಿಗೆ ಅತ್ತ ನೋಡುತ್ತಿರುವಾಗಲೇ, ಎದುರಿಗಿದ್ದ ಮಗು, ಗೆಳತಿ ಹೀಗೇಕೆ ಬೆದರಿದಳೊ ಎಂದುಕೊಳ್ಳುವಾಗಲೇ , ಅತ್ತ ನೋಡುತ್ತಿದ್ದ ಮಗು "ಕಾಶಿ ಬಂದ ಕಣೇ ! ಬಾರೆ ಓಡೋಣ " ಎಂದು ಆಟವನ್ನು ಅಲ್ಲೇ ಮುಗಿಸಿ ಎದ್ದೆವೋ ಬಿದ್ದೆವೋ ಎಂಬಂತೆ ಓದತೊದಗಿದುವು !!!... ಓಡುತ್ತಿದ್ದ ,ಮಕ್ಕಳನ್ನು ಹಿಡಿಯುವ ಪ್ರಯತ್ನ ಮಾಡಲು ಹೋಗದೆ ಕ್ಯಾಕರಿಸಿ ಉಗಿದು, "ಥೂ ಹಾಳು ಮುಂಡೇರು " ಎಂದು ಬೈದು ಮನೆಯತ್ತ ಹೊರಟ ...
ಕಾಶಿ ಓದು ಬರಹವಿಲ್ಲದೇ ಅಲ್ಲಿ ಇಲ್ಲಿ ಸುತ್ತಿ ದಿನಕಳೆಯುತ್ತಿದ್ದ. ಕೆಲಸ ಕಾರ್ಯಗಳಿಲ್ಲದೇ ಸಮಯ ಕಳೆಯಲು ಶಾಲೆಯ ಹತ್ತಿರ ಬರುತ್ತಿದ್ದವ ಅಲ್ಲಿ ಪುಟ್ಟ ಹೆಣ್ಣು ಮಕ್ಕಳನ್ನು ಬೈದು ಬೆದರಿಸಿ ಅವರ ಮೈ ಕೈ ಮುಟ್ಟುವುದು ಮಾಡುತ್ತಿದ್ದ. ಕೆಲವು ಮಕ್ಕಳಿಗೆ ತಿನ್ನಲು ಏನಾದರು ಕೊಟ್ಟು ಪುಸಲಾಯಿಸುತ್ತಿದ್ದ. ಸ್ವಲ್ಪ ದೊಡ್ಡ ಮಕ್ಕಳಿಗೆ ಇದು ತಿಳಿದು ಅವರಲ್ಲೇ ಮಾತಾಡಿಕೊಂಡು ಕಾಶಿ ಬಂದಾಗ ಓಡಿ ಹೋಗುವುದೆಂದು ನಿರ್ಧರಿಸಿದ್ದರು. ಕಾಶಿಯ ವಿಷಯ ಲಂಪಟತೆ ಕೆಲವು ಹಿರಿಯರಿಗೆ ತಿಳಿದಿದ್ದರೂ ಅವರು ಏನೂ ಹೇಳುತ್ತಿರಲಿಲ್ಲ. ಅವರೆಲ್ಲರೂ ತಮ್ಮ ತಮ್ಮ ಮನೆಯ ಹೆಣ್ಣುಮಕ್ಕಳನ್ನು ಮಾತ್ರ ಅವನಿಂದ ದೂರವಿರುವಂತೆ ಹೇಳುತ್ತಿದ್ದರು. ತಿಳಿಯದೆ ಅವನಿಂದ ಮೋಸ ಹೋದ ಪುಟ್ಟ ಬಾಲೆಯರು ಅವನ ನೆರಳು ಕಂಡರೂ
ಭಯದಿಂದ ನಡುಗುತ್ತಿದ್ದರು.
ದೃಶ್ಯ III
ಮದುವೆ ಮುಗಿದು ಎಲ್ಲವನ್ನು ಪ್ಯಾಕ್ ಮಾಡಲು ಇದ್ದವರೆಲ್ಲ ಅತ್ತಿಂದಿತ್ತ ಇತ್ತಿಂದತ್ತ ತಿರುಗಾಡುತ್ತಿದ್ದರು. ಅಲ್ಲಿ ಬಿದ್ದಿದ್ದ ಬಲೂನ್, ಹೂವುಗಳನ್ನು ಎತ್ತಿಕೊಂಡು ಆಡುತ್ತಿರುವ ಪುಟಾಣಿಗಳು, "ಹಶ್ಶಾ ಬುಸ್ಶಾ ಆಲ್ ಫಾಲ್ ಡೌನ್ ...ಹ್ಹ ಹ್ಹ ಹಹಹಾ " ಎಂದು ಕಿಲಕಿಲನೆ ನಗುತ್ತಾ ಆಡುತ್ತಿರುವ ಮಕ್ಕಳು. ಕೆಲವರು ಮೆಟ್ಟಿಲನ್ನು ಹತ್ತಿ ಇಳಿಯೋ ಆಟವಾಡಿದರೆ, ಇನ್ನು ಕೆಲವರು ಅಡುಗೆ ಮನೆಯತ್ತ ಓಡಿ ಹಪ್ಪಳ ಸಂಡಿಗೆಗಳನ್ನು ಮೆಲ್ಲುತ್ತಾ ಕೇಕೆ ಹಾಕಿ ಕುಣಿಯುವವರು. ಇವೆಲ್ಲ ಆಟಗಳನ್ನು ಆಡಲು ಸ್ವಲ್ಪ ದೊಡ್ಡವರಾದ, ಹಾಗು ಹೆಂಗಸರೊಡನೆ ಬೆರೆಯಲು ಚಿಕ್ಕವರಾದ ಗುಂಪಿನ ಒಂದೆರಡು ಹೆಣ್ಣು ಮಕ್ಕಳು. ಈಗ ತಾನೇ ಬೆಳೆಯುತ್ತಿರುವ ಆ ಕಿಶೋರಿಯರನ್ನು ವಿಧ ವಿಧ ರೀತಿಯ ದೃಷ್ಟಿಯಲ್ಲಿ ನೋಡುವವರು. ಸಂಜೆ ಮನೆಗೆ ತಲುಪುವ ಭರಾಟೆ, ವಧುವನ್ನು ಮನೆ ತುಂಬಿಸಿಕೊಳ್ಳೋ ಕಾರ್ಯಕ್ರಮ ಇತ್ಯಾದಿ, ರಾತ್ರಿ ಉಪಾಹಾರವೆಲ್ಲಾ ಆದಮೇಲೆ, ಎಲ್ಲಾರೂ ದಣಿದು ಸಿಕ್ಕ ಸಿಕ್ಕ ಜಾಗಗಳಲ್ಲೇ ವಿರಮಿಸಿದರು. ಇವೆಲ್ಲವುಗಳ ಮಧ್ಯದಲ್ಲಿ ಅತ್ತ ಪುಟ್ಟ ಮಕ್ಕಳೆಲ್ಲಾ ಅಮ್ಮಂದಿರ ಜೊತೆ ಮಲಗಿದರೆ, ದೊಡ್ಡವರೆಲ್ಲ ಹರಟುತ್ತ ಒಂದೇ ಕಡೆ ಸೇರಿದ್ದರು. ಈ ಕಿಶೋರಿಯರಿಗೆ ಅಲ್ಲೇನು ಕೆಲಸ, ಮತ್ತವರು ಮಾತಾಡಬೇಕಾದ ವಿಷಯಗಳು ಆ ವಯಸ್ಸಿಗೆ ಸೂಕ್ತವಾದುವಲ್ಲ ಎಂದೆನಿಸಿ ಅವರನ್ನು
ಯಾವುದೋ ಒಂದು ಕೋಣೆಗೆ ಹೋಗಿ ಮಲಗಿರೆಂದು ಕಳುಹಿಸಿದರು. ಇವರಿಬ್ಬರೇ ಕೋಣೆ ಸೇರಿ ಬೆಳಗ್ಗಿನಿಂದ ಆದ ಎಲ್ಲ ಸ್ವಾರಸ್ಯಕರ ವಿಷಯಗಳನ್ನು ಮೆಲುಕು ಹಾಕುತ್ತ ನಿದ್ರೆಗೆ ಸರಿದರು. ಹಗಲಿನಿಂದಲೂ ರಾತ್ರಿಯವರೆಗೆ ಇವರಿಬ್ಬರನ್ನು ಗಮನಿಸುತ್ತ ಸರಿಯಾದ ಸಮಯಕ್ಕಾಗಿ ಹೊಂಚು ಹಾಕುತ್ತಿದ್ದ ದೂರದ ಸಂಬಂಧಿ, ಸುಮಾರು ನಲವತ್ತರ, ಈ ಕಿಶೋರಿಯರ ತಂದೆಯ ವಯಸ್ಸಿನ ರಾಜು ಮಾಮನ ಮೇಲೆ ಯಾರಿಗೂ ಅವಮಾನ ಬಂದಿರಲಾರದು... ಬಾಲೆಯರಿಬ್ಬರ ಮಾತು ಮುಕ್ತಾಯವಾಗಿ, ಅವರು ನಿದ್ದೆಗೆ ಜಾರಿರುವುದು ಖಾತ್ರಿ ಮಾಡಿಕೊಂಡು ನಿಧಾನವಾಗಿ ಕೋಣೆಗೆ ಸೇರಿಕೊಂಡ...
ಮೇಲಿನ ಸಂಧರ್ಭಗಳು ಓದುಗರಿಗೆ ಏನನ್ನು ತೋರಿಸಿಕೊಡುತ್ತದೋ ನನಗೆ ತಿಳಿಯದು. ಆದರೆ ಇದು ಸರ್ವೇ ಸಾಮಾನ್ಯವಾಗಿರುವ ಸಂಗತಿ. ಕೆಲವರು ನಿರ್ಲಕ್ಷಿಸುತ್ತಾರೆ, ಕೆಲವರು ಈ ಲೋಕವೇ ಹೀಗೆಂದು ನಿಟ್ಟುಸಿರು ಬಿಡುತ್ತಾರೆ. ಹಾಗಾಗಿ ಕಾಶಿ -ರಾಜುವಿನಂಥ ಹಲವಾರು ಕಾಮುಕರು ನಮ್ಮ ಮನೆಯ ಪುಟ್ಟ ಹೆಣ್ಣುಮಕ್ಕಳ ಮುಗ್ಧತೆಯ ಲಾಭ ಪಡೆಯುತ್ತಾರೆ. ಹಾಗೆಂದು ಮೊದಲನೇ ದೃಶ್ಯಕ್ಕೂ ಮಿಕ್ಕಿದೆರಡು ದೃಶ್ಯಕ್ಕೂ ಏನು ಸಂಬಧವೆಂದು ಹೇಳುತ್ತೇನೆ. ನನಗೂ ನಿಮ್ಮ ಹಾಗೆಯೇ ಟ್ರಿನಿಟಿ ವೃತ್ತ, ಹೆಬ್ಬಾಳ ಫ್ಲೈ ಓವರ್ ಸಮೀಪ ನಿಲ್ಲುವ ವೇಶ್ಯಾವಾಟಿಕೆ ನಡೆಸುವ ಹೆಂಗಸರನ್ನು ನೋಡಿ ಅಪಾರ ಕೋಪ ಹಾಗು ಜಿಗುಪ್ಸೆ ಉಂಟಾಗುತ್ತಿತ್ತು. ಗೆಳಯರೊಡನೆ ಈ ವಿಷಯ ಚರ್ಚಿಸುವಾಗ ನನ್ನಿಂದಲೇ ಅತೀ ಉಗ್ರ ಪ್ರತಿಕ್ರಿಯೆ ದೊರೆಯುತ್ತಿತ್ತು. ಹಾಗೆಯೇ ನಮ್ಮ ಹೊಸದಿಗಂತ ಪತ್ರಿಕೆಯ ಮಾಜಿ ಸಂಪಾದಕರಾದ ಶ್ರೀ ಶಿವಸ್ವಾಮಿ ಅವರೊಡನೆ ಇದೇ ವಿಚಾರ ಚರ್ಚಿಸಿದೆ. ಮರ್ಯಾದಸ್ತರು ಓಡಾಡುವ ಇಂತಹ ನಗರಗಳಲ್ಲಿ ಹೀಗೆ ಅನುಚಿತವಾಗಿ ರಸ್ತೆ ಬದಿಗಳಲ್ಲಿ ನಿಲ್ಲುವ ಬಗೆ ಬಹು ಅಸಹ್ಯಕರ ಎಂದೂ ಹೇಳಿದೆ. ಆಗ ಶಿವಸ್ವಾಮಿಯವರ ಉತ್ತರವನ್ನು ಕೇಳಿ ನಾನೇ ಚಕಿತಳಾದೆ! ನಮ್ಮ ಸುತ್ತಮುತ್ತಲೇ ಇದ್ದು, ವಯಸ್ಸಿನ ಪರಿಗಣನೆ ಮಾಡದೆ ಇನ್ನೂ ಹುಟ್ಟಿ ಬೆಳೆಯದ, ಆಡುವ ವಯಸ್ಸಿನ ಮಕ್ಕಳನ್ನು ದುರುಪಯೋಗಿಸುವ ಇಂತಹ ಕಾಮುಕರು ನಮ್ಮ ಮಕ್ಕಳನ್ನು ಬಿಟ್ಟು ಅಂತಹ ಸ್ಥಳಗಳಿಗೆ ಹೋಗಿ ತಮ್ಮ ಕಾಮ ತ್ರಷೆ ತೀರಿಸಿಕೊಳ್ಳಬಹುದಲ್ಲವೇ?!!! ಹೌದು ಎಂದು ಒಪ್ಪಿಗೆ ನೀಡುವ ಧೈರ್ಯ ನನಗೆ ಇರಲಿಲ್ಲ... ಮರ್ಯಾದೆ ಬಿಟ್ಟು ಹೊರಗೆ ಹಣ ತೆತ್ತು ಪಡೆಯುವ ಗೋಜಿಗೆ ಹೋದವರೆಷ್ಟೋ! ಮತ್ತು ಅಕ್ಕಪಕ್ಕದ ಹೆಣ್ಣು ಮಕ್ಕಳ ಮುಗ್ಧತೆಯನ್ನು ದುರ್ಬಳಕೆ ಮಾಡುವವರಿನ್ನೆಷ್ಟೋ!!!
ನಿಮ್ಮ ಗಮನಕ್ಕೆ ಇಂತಹ ನಿರ್ದಯಿಗಳು ಬಂದಲ್ಲಿ ಹಿಂದೂ ಮುಂದು ನೋಡದೆ ಅವರನ್ನು ಅವಮಾನಿಸಿ. ಅವರ ಕುಕ್ರತ್ಯಗಳು ಎಲ್ಲರಿಗೂ ತಿಳಿದು ಅವರವರ ಮನೆ ಮಕ್ಕಳನ್ನು ಇಂಥವರಿಂದ ದೂರವಿಡಲಿ.. ನಿಮ್ಮ ಮನೆಯ ಹೆಣ್ಣು ಮಕ್ಕಳ ಜೊತೆ ವಿಶ್ವಾಸದಿಂದ ಮಾತನಾಡಿಸಿ ಅವರ ಜೊತೆ ಹೀಗೆ ಯಾರಾದರು ವ್ಯವಹರಿಸುತ್ತಾರೆಯೋ ಎಂದು ತಿಳಿಯಿರಿ. ಗದರಿಸಿ ಕೇಳಿದರೆ ಮೊದಲೇ ಭಯಭೀತರಾದ ಮಕ್ಕಳು ಇನ್ನೂ ಹೆದರಬಹುದು. ಪುಟ್ಟ ಹೆಣ್ಣು ಮಕ್ಕಳಿಗೆ ಯಾರೇ ಆಗಲಿ, ಮೈ ಕೈ ಮುತ್ತಿ ಮಾತಾಡಿಸಿದರೆ ಪ್ರತಿರೋಧಿಸಲು ಉತ್ತೇಜಿಸಿ...
ನಾಳೆ ನಮ್ಮ ಮಕ್ಕಳು ಬೆಳೆಯುವಾಗ ಇನ್ನೇನು ಹೊಸ ತೊಂದರೆಗಳು ಬರಬಹುದೋ ಎಂಬ ವಿಚಾರ ಬಂದರೆ ನನಗೆ ಈಗಲೇ ಗಾಬರಿಯಾಗುತ್ತದೆ. ಮುಗ್ದತೆಯ, ವಿಶ್ವಾಸದ ಕೊಲೆ ಮಾಡಿ, ಇನ್ನೂ ಚಿಗುರದ ಮೊಗ್ಗುಗಳನ್ನೇ ಚಿವುಟುವ ಕಾಮಂಧರೋ? ಗೌರವಸ್ಥರು ತಿರುಗಾಡುವ ಸ್ಥಳಗಳಲ್ಲಿ ನಿಂತ ವೇಶ್ಯೆಯರ ಸಹವಾಸ ಮಾಡಿ HIV ನಂಥಹ ಮಹಾಮಾರಿಯನ್ನು ಸ್ವಾಗತಿಸಿ, ಪಾಪವರಿಯದವರಿಗೆ ಹರಡುವ ಕಾಮುಕರೋ? ಯಾರು ಹಿತವರು ನಮಗೆ?!!