badge

Sunday, April 8, 2012

ಮರೀಚಿಕೆಯ ಬೆನ್ನೇರಿ ..

Photo courtesy : Internet

ಅಶೋಕ ಸ್ಥಾರಣ ಸ್ಥಾರ ಶೂರಃ ಶೂರಿರ್ಜನೇಶ್ವರಃ 
ಅನುಕೂಲಃ ಶತಾವರ್ತ ಪದ್ಮೀ ಪದ್ಮ ನಿಭೇಕ್ಷಣಃ|| ||
ತಾರಹ ನೆಂಬ ವಿಷ್ಣುವಿನ ಇನ್ನೊಂದು ನಾಮ ಮನಸ್ಸಿನಲ್ಲೇ ಧ್ಯಾನಿಸುತ್ತಾ  ಒಂದು ವಿಶೇಷ ಸ್ಥೈರ್ಯ ಬಂದ ಹಾಗೆನಿಸಿತು. ಹೌದು ಅವನೇ ಈ ಮಹಾಸಾಗರ ದಾಟುವ ಶಕ್ತಿ ನೀಡುವವ. ಅದೆಷ್ಟೇ ಬಿರುಗಾಳಿ ಏಳಲಿ, ರಾಕ್ಷಸ ಗಾತ್ರದ ಅಲೆ ಇರಲಿ, ಅವನೆದುರು ಅದು ತ್ರಣಮಾತ್ರ. ನನ್ನ ನಿರ್ಧಾರ ನನಗೆ ಸರಿಯೆನಿಸಿತ್ತು. ಇಷ್ಟು ಚಿಕ್ಕ ಊರಿನಲ್ಲಿ, ಇಂಥ ಮನೆಯಲ್ಲಿ ಹುಟ್ಟಿ – ಬೆಳೆದು ಇಂತಹ ನಿರ್ಧಾರಕ್ಕೆ ಬರಲು ಧೈರ್ಯ ಕೊಟ್ಟವನೇ ನಾನು ಚಿಕ್ಕಂದಿನಿಂದಲೂ ನಂಬಿ ನಿಂತ ಮಹಾವಿಷ್ಣು...
“ಏನೇ ಮೂಕಾಂಬಿಕೆ, ನಿನ್ನಪ್ಪ ಶ್ರಿಂಗೇರಿಯ ಶ್ರೀಪಾದರ ಮಗನಿಗೇ ನಿನ್ನ ಕೊಡಬೇಕೆಂದು ಇದ್ದಾನಂತೆ!! ಗಂಡನ ಮನೆ ಹೋಗೋ ತಯಾರಿ ಹೇಗಿದ್ಯೇ.. ಬೆಂಗಳೂರಿಗೆ ಹೋಗ್ತಿಯೇನೆ ಸುಬ್ಬೀ ” ಎಂದು ಬೊಚ್ಚು ಬಾಯಿಮಾಡಿ ನನ್ನನ್ನು ಕೀಟಲೆ ಮಾಡುವ ವೆಂಕಟೇಶ ಶಾಸ್ತ್ರಿಯವರಿಗೆ ಏನು ಹೇಳಬೇಕೋ ತೋಚದೆ ಕಲ್ಯಾಣಿಯಿಂದ ನೀರು ತರುವೆ ಎಂದು ನೆಪಮಾಡಿ ಓಡುವ ಭರದಲ್ಲಿ ಧೊಪ್ಪೆಂದು ಬಿದ್ದು ಕೂರುವ ಜಾಗವೆಲ್ಲ ನೋವಾಗಿ, ನಗು, ಅಳು, ನಾಚಿಕೆ ತಡೆಯಲಾರದೆ ಓಡಿದ ಪರಿ ನೆನೆದು ಈಗಲೂ ನಗು ಬರುತ್ತದೆ. ನೀರಿಗಾಗಿ ನನ್ನೊಡನೆ ಬರುತ್ತಿದ್ದ ಅಮಾವಾಸ್ಯೆ ಮುಖದ ಪೂರ್ಣಿಮಳಿಗೂ ಅಚ್ಚರಿ, ಅಸೂಯೆ ಮೂಡಿ “ಹೌದೇನೇ! ನಂಗೆ ಹೇಳಲೇ ಇಲ್ಲಾ” ಎಂದು ಸೊಲ್ಲುತ್ತಾ ಆದಷ್ಟೂ ತನ್ನ ಅಸೂಯೆಯನ್ನು ಮರೆಮಾಚುತ್ತಾ ಹುಸಿ ಮುನಿಸು ತೋರಿಸಲು ಯತ್ನಿಸಿದಾಗೆ ಅದೆಷ್ಟು ಜಂಭ ಪಟ್ಟಿದ್ದೆ. ಮತ್ತಿನ್ನೇನು, ಬಿ.ಎ ಫಸ್ಟ್ ಕ್ಲಾಸ್, ನೋಡಲೂ ಸುಂದರವಾಗಿರುವ ನನ್ನಂಥ ಹುಡುಗಿಯ ಕೈ ಹಿಡಿಯಲು ‘ಅವನೂ’ ಛೀ ಅವನಲ್ಲ “ಅವರೂ” ಪುಣ್ಯ ಮಾಡಿರಬೇಕಲ್ಲವೇ. ಇನ್ನು ಹತ್ತನೇ ಓದಿರುವ ಕರಿ ಮುಖದ ಪೂರ್ಣಿಮಳಿಗೆ ಇನ್ನೆಂಥ ಗಂಡು ಸಿಗುವುದು ಸಾಧ್ಯ. ಮದುವೆಯ ದಿನವಂತೂ ನನ್ನ ಕಡೆ ಪದೇಪದೇ ನೋಡಿ ಮೆಚ್ಚುಗೆಯ ದೃಷ್ಟಿ ಬೀರುವ ಅವರನ್ನು ನೋಡಿ ಇಂಥ ಸುದ್ರೂಪ ಸುಂದರಾಂಗನ ಮಡದಿ ನಾನೇ ಎಂದು ಬೀಗಿದೆ.
 ಕೃಷ್ಣವೇಣಿ ಗೌತಮೀನಾಂ ಪಯೋಷ್ನಿ ನರ್ಮದ ಜಲೈ.. ಎಂದು ಕಲಶಕ್ಕೆ ಅಲಂಕಾರ ಮಾಡುತ್ತಾ ಕುಲಿತಿದ್ದಾಗ ಅವರೊಮ್ಮೆ “ದಿಸ್ ಇಸ್ ಅಟ್ಟರ್ ನಾನ್-ಸೆನ್ಸ್, ಏನ್ ವರ್ಷ ಪೂರ್ತಿ ಮಂತ್ರ ಹೇಳ್ಕೊಂಡು .. ಗೆಟ್ ಅ ಲೈಫ್.. ಯಾವ್ದಾದ್ರು ಜಾಬ್ ಸಿಗುತ್ತಾ ನೋಡ್ಬಾರ್ದ ..” ಎಂದು ಹೇಳಿದಾಗ ಒಮ್ಮೆ ದುಃಖ ಒತ್ತರಿಸಿ ಬಂತಾದರೂ ಹೊರಗೆ ದುಡಿಯುವ ಗಂಡಸಿಗೆ ಮನೆಯಲ್ಲಿ ನನ್ನಂಥ ಗೊಡ್ಡು ಸಂಪ್ರದಾಯದ ಹೆಂಡತಿ ಸಿಕ್ಕಳೆಂದು ಬೇಸರವಿರಬಹುದು ಎಂದು ಟೈಟನ್ ಕಂಪೆನಿಯಲ್ಲಿ ಡಾಟಾ ಎಂಟ್ರಿ ಕೆಲಸಕ್ಕೆ ಸೇರಿಕೊಂಡೆ. ಅಂತಹ ಅಪರೂಪವಾದ ಕೆಲಸವೇನು ಆಗಿರದಿದ್ದರೂ ನನ್ನ ಸ್ವಂತ ಖರ್ಚಿಗೆ ಸಾಕಾಗುವಷ್ಟು ಸಂಬಳ ಕೊಡುತ್ತಿತ್ತು, ಮತ್ತೆ ಮನೆಯಿಂದ ಸ್ವಲ್ಪ ದೂರವಾಗಿ ನಾನು ಸಹ ಹೊರಗಿನ ಪ್ರಪಂಚ ನೋಡಲು ಸಹಾಯ ಮಾಡಿತು. ಮೊದಮೊದಲು ಸರಿಯಾದ ಬಸ್ ಹಿಡಿದು ಹೋಗುವುದು ಭಯವಾದರೂ ಕಾಲಕ್ರಮೇಣ ಅದು ಸಹ ರೂಢಿಯಾಗ ತೊಡಗಿತು.
ಇಂಥ ಕಂಪೆನಿಯಲ್ಲಿ ಕೆಲಸ ಮಾಡಲು ಅಲ್ಲಿ ಕೆಲಸ ನಿರ್ವಹಿಸುವ ಬೇರೆ ಹೆಣ್ಣುಮಕ್ಕಳಂತೆ ನಾನು ಹೊಸ –ಹೊಸ ವಿನ್ಯಾಸದ ಬಟ್ಟೆ ಬರೆ ತೊಟ್ಟುಕೊಳ್ಳುವ ಮನಸ್ಸಾಗಿ ಜೊತೆಗೆ ಕೆಲಸ ಮಾಡುವ ಹರಿಣಿಯ ಜೊತೆ ಮಲ್ಲೇಶ್ವರಂನಲ್ಲಿ ಸೀರೆ, ಚೂಡಿದಾರ್ ಎಲ್ಲ ಹೊಸದಾಗಿ ಕೊಳ್ಳತೊಡಗಿದೆ. ಇದೆಲ್ಲ ಗಮನಿಸುತ್ತಿದ್ದ ಇವರು ಇತ್ತೀಚಿಗೆ ಹೋಗಿ ಬರುವಾಗಲೆಲ್ಲ “ಏನು ಸಮಾಚಾರ, ಇತ್ತಲಿಂದೀಚೆಗೆ ಭಾರೀ ಬದಲಾವಣೆಗಳಾಗುತ್ತಿವೆ .. ನಿಮ್ಮ ಕಂಪೆನಿ ಬಾಸ್ ಇನ್ನೊಂದು ಮದುವೆಯಾಗೋ ಯೋಚನೆ ಮಾಡ್ತಾ ಇದ್ದಾನೇನೋ” ಎಂದು ಮೂದಲಿಸಿದಾಗ ಆದ ಅವಮಾನ ಮತ್ತು ದುಃಖ ಸೇರಿಸಿ “ಸುಮ್ಮನೆ ಮನೇಲಿ ಇದ್ದವಳನ್ನ ಆಫೀಸಿಗೆ ಹೋಗು ಅಂದಿರಿ.. ಈಗ ಏನೆಲ್ಲಾ ಅಸಂಬದ್ಧ ಮಾತಾಡ್ತೀರಿ ಛೀ !!!” ಎಂದು ಅತ್ತಿದ್ದೆ. ಆಗ  ನನ್ನನ್ನು ರಮಿಸುತ್ತ “ತಮಾಷೆಗೆ ಕಣೆ !” ಎಂದು ನನ್ನನ್ನು ಕೆಲಸ ಬಿಡದಂತೆ ಪ್ರೇರೇಪಿಸಿದರು.
ಆಗೊಂದು ದಿನ “ನನಗೆ ಇನ್ನು ಮುಂದೆ ಮಧ್ಯಾಹ್ನ ೨ ಗಂಟೆಗೆ ಷಿಫ್ಟ್ ” ಎಂದು ಹೇಳಿ “ಇನ್ನು ಮುಂದೆ ಮಧ್ಯಾಹ್ನದ ಅಡುಗೆ ಮಾಡಿ ಹೋಗು.. ಕೇಳಿಲ್ಲಿ , ಇನ್ನೊಂದು ಜನಕ್ಕೆ ಆಗುವಂತೆ ಸ್ವಲ್ಪ ಜಾಸ್ತಿ ಮಾಡು ನನ್ನ ಕಲೀಗ್ ಒಬ್ರು ದಿನಾ ಊಟಕ್ಕೆ ಬರುತ್ತಾರೆ ” ಎಂದಾಗ ಬೇಸರಿಸದೆ ಅವರು ಹೇಳಿದ ಮಾತು ಪಾಲಿಸುತ್ತಿದ್ದೆ. ಹೀಗೆ ಪ್ರತಿ ದಿನ ರಾತ್ರಿ ತುಂಬಾ ತಡವಾಗಿ ಬರುತ್ತಿದ್ದರಿಂದ, ಮತ್ತು ನಾನು ಬೇಗನೆ ಎದ್ದು ಎಲ್ಲ ತಯಾರಿ ಮಾಡಬೇಕಾದ್ದರಿಂದ ವಾರಗಟ್ಟಲೇ ಇವರ ತಲೆಯೇ ಕಾಣದಂತಾಗುತ್ತಿತ್ತು. ಮದುವೆಯಾಗಿ ವರ್ಷಕ್ಕೂ ಮೊದಲೇ ಇಂಥ ಬೇಸರಿಕೆ ನನ್ನ ಮೇಲೆ ಯಾಕೆಂದೇ ತಿಳಿಯದಾಯಿತು.
ಅಮೊಘಃ ಪುಂಡರೀಕಾಕ್ಷ ವ್ರಷಕರ್ಮ ವ್ರಷಾಕೃತಿಹಿ....
ಬೇರೆ ಬೇರೆ ಅವತಾರಗಳಲ್ಲಿ ಮತ್ತೆ ಬರುತ್ತಾನೆಂದ ಭಗವಂತ ನನ್ನ ಉದ್ಹ್ಧರಿಸಲು ಬಂದೆ ಬರುತ್ತಾನೆ ಎಂದು ಮನಸ್ಸಿಗೆ ಧೈರ್ಯ ತಂದುಕೊಂಡೆ. ಆದಷ್ಟೂ ಅವರ ಇಚ್ಛೆಗೇ ತಕ್ಕಂತೆ ಉಡುವುದು, ತೊಡುವುದು , ಅಡುಗೆ ಮಾಡಿ ಬಡಿಸುವುದು ಎಲ್ಲಾ ಮಾಡಿದೆ. ಸಣ್ಣ ಊರಿನವಳಾದ ನಾನಾದರೂ ಇಲ್ಲಿನ ಬೆಡಗಿಯರಂತೆ ಪತಿಯನ್ನು ಹತ್ತಿರ ಮಾಡಿಕೊಳ್ಳಲು ಉಪಯ ಹೇಗೆ ಹೂಡುವುದು? ಆಫೀಸಿನ ಹರಿಣಿ “ ರಾತ್ರಿಯೆಲ್ಲಾ ನಿದ್ದೇನೆ ಇಲ್ವೆ ಅಂಬಿಕಾ” ಎಂದು ಕಣ್ಣು ಮಿಟುಕಿಸಿ ನನಗೆ ಹೇಳುವಾಗ ಮದುವೆಯಾಗಿ ಆರು ವರ್ಷಕ್ಕೂ ಇಷ್ಟು ಅನ್ಯೋನ್ಯದಿಂದ ಇರುವ ಇವರನ್ನು ಕಂಡು ಮನಸ್ಸು ಕುರುಬಿತು.
ಅಂದು ಕೃಷ್ಣಾಷ್ಟಮಿ ದಿನ ಹರಿಣಿ ಅವರ ಮನೆಗೆ ಒತ್ತಾಯಿಸಿ ಕರೆದುಕೊಂಡು ಹೋದಳು, ರಾತ್ರಿ ಎಂಟಾದದ್ದು ನನಗೆ ಹೊಳೆಯಲೇ ಇಲ್ಲ. ಅವರ ಮನೆ ಸುತ್ತ ತೋಟ, ಬಾಳೆಮರ , ಅವರ ನಾಯಿ ಮಿಂಕು ಎಲ್ಲಾ ನೋಡುತ್ತಾ, ಬೆಂಗಳೂರಿನಲ್ಲಿ ಇಷ್ಟೊಂದು ದೊಡ್ಡ ಮನೆ, ಕೈತೋಟ ಎಲ್ಲಾ ಸಂಭಾಳಿಸುವುದು ಎಷ್ಟು ಕಷ್ಟ ಎಂದು ಯೋಚಿಸುತ್ತಿರುವಾಗಲೇ ಅವರ ಮನೆ ಗೇಟ್ ತೆರೆದ ಶಬ್ಧವಾಯಿತು. ಅರೆ! ಇವರೇನು ಇಲ್ಲಿ ಎಂದು ಉದ್ಗರಿಸಲು, ಹತ್ತಿರ ಬರುತ್ತಲೇ ಫಟೀರ್ ಎಂದು ನನ್ನ ಎಡಗೆನ್ನೆಯ ಮೇಲೆ ಒಂದು ಬಾರಿಸಿದರು. ಹರಿಣಿ “ಸ್ಟಾಪ್ ಇಟ್ ” ಎಂದು ಚೀತ್ಕರಿಸುತ್ತಿರುವುದನ್ನು ಲಕ್ಷಿಸದೆ “ಸುಮ್ನೆ ಆಫಿಸಿಂದ ಮನೆಗ್ ಬರಕ್ಕೇನೆ ರೋಗ.. ಹಡಬಿ ಸುತ್ತುತಾಳೆ  !”  ಎಂದು ನನ್ನನ್ನು ದರದರನೆ ಎಳೆದುಕೊಂಡು ಹೋದರು.
ಅವಮಾನ ಮತ್ತು ಜೋರಾಗಿ ಬಿದ್ದ ಏಟಿಗೆ ಪೈಪೋಟಿ ಎಂಬಂತೆ ಜ್ವರ ನನ್ನ ತಲೆಯಿಂದ ಅಂಗುಷ್ಠದವರೆಗೆ ಆವರಿಸಿತ್ತು. ಕೆನ್ನೆ ಮೇಲೆ ನೀಲಿಗಟ್ಟಿದ ಎರಡು ಬೆರಳುಗಳ ಚಿಹ್ನೆ ಅಪ್ಯಾಯಮಾನವಾಗಿತ್ತು. ಹರಿಣಿ ಮತ್ತೆಂದು ನನ್ನನ್ನು ಮನೆಗೆ ಕರಿಯುವುದಿಲ್ಲ ಎಂದೆನಿಸಿತು. ಆಫೀಸಿಗೆ ಹೋಗಲು ಸಾಧ್ಯವೇ ಇಲ್ಲ ಇನ್ನು ಮುಂದೆ ಎಂದುಕೊಂಡೆ. ಅಡುಗೆ ಮನೆಗೆ ಧಾವಿಸಿ ಕಾಫಿಯದರು ಕುಡಿಯೋಣ ಎಂದು ಹೋದರೆ, “ಇದೋ ಬಿಸಿ ಕಾಫಿ, ಬೇಗ ಕುಡಿ, ಆಫೀಸಿಗೆ ತಡವಾಗುತ್ತೆ ” ಎಂದು ನಾಟಕೀಯವಾಗಿ ಕೈಗೆ ಬಿಸಿ ಕಾಫಿಯ ಬಟ್ಟಲಿತ್ತರು. ಅವರ ಕೈಯಿಂದ ಇದೇ ಮೊದಲು ನಾನು ಕಾಫಿ ಕಂಡದ್ದು . ಒಮ್ಮೆ ಕಾಫಿಯನ್ನು ಮತ್ತೊಮ್ಮೆ ಅವರನ್ನು ದಿಟ್ಟಿಸಿದೆ. ನನಗೇನೋ ಸರಿಯಿಲ್ಲ ಎಂದೆನಿಸಿತು. ಕಾಫಿ ಹೀರಿ ಹರಿಣಿಯ ಮನೆಗೆ ಸೀದಾ ನಡೆದೆ.
          ರುದ್ರೋ ಬಹುಶಿರಾ ಬಭ್ರುರ್ವಿಶ್ವಯೋನಿಃ ಶುಚಿಶ್ರವಾಃ
ಸ್ವತಹ ಪವಿತ್ರನಾದ ಆ ಭಗವಂತ, ನಮ್ಮನ್ನು ಪವಿತ್ರನನ್ನಾಗಿಸುವನು. ಹರಿಣಿ ನನ್ನನ್ನು ನೋಡಿ ಒಂದು ಮಾತು ಆಡದೆ ಐಸ್ ಪ್ಯಾಕ್ ತಂದು ಕೊಟ್ಟಳು. ಅವಳ ಹತ್ತಿರ ಮಾತನಾಡಿ ಸ್ವಲ್ಪ ಸಮಾಧಾನವಯಿತಾದರು ಮುಂದೇನು ಎಂದು ತೋಚಲಿಲ್ಲ’. ಹರಿಣಿ ನನ್ನ ಕೈಗೊಂದು ವಿಸಿಟಿಂಗ್ ಕಾರ್ಡ್ ಕೊಟ್ಟು ನನ್ನ ಕೈಯನ್ನೊಮ್ಮೆ ಒತ್ತಿ ಸಾಂತ್ವನದ ನೋಟ ಬೀರಿದಳು.   ನಾನು ಎದ್ದು ನಿಂತೆ. ಹಿಂದೆ ಹರಿಣಿ. ಇಬ್ಬರೂ ಮತ್ತೆ ಮನೆಯತ್ತ ಹೊರಟೆವು.
ನನ್ನ ಸಂಶಯ ಸುಳ್ಳಾಗಲೆಂದು ಆ ಗರುಢವಾಹನನನ್ನು ದೀನಳಾಗಿ ಬೇಡಿದೆ. ನನ್ನ ಕೈ ಬಿಡಬೇಡಿರೆಂದು – ಅನ್ಯಥಾ ಶರಣಂ ನಾಸ್ತಿ ಎಂಬ ಭಾವದಿಂದ ಕೈಜೋಡಿಸಿದೆ. ಬಾಗಿಲು ತಟ್ಟುತ್ತಲೇ ಅವರ ಮುಖದ ಮೇಲೆ ಸುಖದ ಚಿರಾಯು ನಗೆ ನೋಡಿ ನನಗೆ ಮಾತ್ಸರ್ಯವಾಯಿತು. ಮತ್ತೊಂದು ಕ್ಷಣದಲ್ಲೇ ಅದು ಮಾಯವಾಗಿ ನನ್ನ ಕಣ್ಣು ನಾನೇ ನಂಬದಾಯಿತು.  ಮದುವೆಗೆ ಬಳುವಳಿಯಾಗಿ ಬಂದ ಹಲವಾರು ವಸ್ತುಗಳೊಡನೆ ನನ್ನಮ್ಮ ತೊಡಿಸಿದ್ದ, ಮತ್ತೆ ಇವರು ನನ್ನಿಂದ ತೆಗೆದುಕೊಂಡು ಲಾಕರ್ನಲ್ಲಿ ಇಟ್ಟಿರುತ್ತೇನೆಂದಿದ್ದ ಅಡ್ಡಿಗೆ ಸರ ಅಮಾವಾಸ್ಯೆ ಮುಖದ, ಅರೆಬರೆ ಅಂಗ ಪ್ರದರ್ಶಿಸುತ್ತ ನಿಂತಿದ್ದ ಪೂರ್ಣಿಮಾಳ ಗಳಸಿರಿಯಾಗಿದ್ದು ನೋಡಿ ಅಲ್ಲೇ ಮೂರ್ಚೆಹೋದೆ.
 ಮೈಸೂರಿನ ಬಾಲ್ಯದ ಮನೆಗೆ ವಾಪಸ್ಸು ಹಿಂದಿರುಗಿ ನನ್ನ ಕೋಣೆಯೇ ನನ್ನ ಬೋಧಿ ವೃಕ್ಷದಂತೆ ನನ್ನನ್ನು ಶಕ್ತಳಾಗಿಸಿದ್ದನ್ನು ನೆನೆದು ಆ ಪರಮಾತ್ಮನಿಗೆ ಕೈಜೋಡಿಸಿದೆ. ಅಪ್ಪ ಅಮ್ಮ ನನ್ನನ್ನು ಅರಿತು, ಸಮಾಜವನ್ನು  ಮೂವರೂ ಸೇರಿ ಎದುರಿಸುವ ಧೈರ್ಯ ತುಂಬಿದರು. ಕೊನೆವರೆಗೂ ಕಾಲ್ಗಸವಾಗಿ ಶೋಷಣೆಗೆ ಒಳಗಾಗುವುದು ಬೇಡವೆಂದು ನನ್ನನ್ನು ಸಂತೈಸಿದರು. ಏಕಾಂಗಿತನ ಅಷ್ಟು ಭಯಾನಕವಾಗಿ ಕಾಣದೆ ಅಪ್ಪ ಅಮ್ಮನ ಜೊತೆ ಅವರ ಕೊನೆಗಾಲಕ್ಕೆ ಸಹಾಯವಾಗಿ ಇರಲು ಪ್ರೇರೇಪಿಸಿತು. ನನ್ನ ನಿರ್ಧಾರ ಸರಿ ಎಂದೆನಿಸಿತು.
ಹರಿಣಿ ಕೊಟ್ಟ ವಿಸಿಟಿಂಗ್ ಕಾರ್ಡ್ ಮೇಲೆ ಕಣ್ಣಾಡಿಸುತ್ತಿದ್ದಾಗಲೇ ಹೊರಗೆ “ಮಿಸೆಜ್ ಮೂಕಂಬಿಕಾ.” ಎಂದು ಬೆಂಗಳೂರಿನ ಪ್ರಖ್ಯಾತ ಡೈವರ್ಸ್ ಲಾಯರ್ ಮಿಸೆಜ್ ವೀಣಾ ಪುರಂದರಿ ಕರೆದದ್ದು ಕೇಳಿಸಿತು.