badge

Sunday, September 18, 2011

ನಿನ್ನ ಪ್ರೇಮದ ಪರಿಯ

ಒಂದೊಂದೇ ಅಕ್ಷರ ಕೂಡಿಸಿ ಕೂಡಿಸಿ ಬರೆಯೋಕೆ ಕಷ್ಟವಾಗ್ತಿರೋದು ನಿಜ. ಕಳೆದೆರಡು ವರ್ಷಗಳಿಂದ ಕಣ್ಣು ದೃಷ್ಟಿಯೇ ಮಂದವಾಗಿದೆ. ಕಪ್ಪು ಕಪ್ಪಾಗಿ ಏನೇನೋ ಕಾಣಿಸುವುದು ಬಿಳಿ ಹಾಳೆ ನೋಡುವಾಗಲೆಲ್ಲ..  ಆದರೂ ಘಳಿಗೆಗೊಮ್ಮೆ ಎಂಬಂತೆ ಎದ್ದು ಕೂತು ಬರಹ ಮುಗಿಸುತ್ತೇನೆ ಎಂದು ನಂಬಿಕೆ. ನೀನೋ ನನಗೇನೋ ಹುಚ್ಚು ಅಂತ ತಿಳಿದುಕೊಂಡಿದ್ದೀಯ ಹೌದೋ? ಹೌದೆ ನಾನು ಹುಚ್ಚಾನೆ ಅನ್ನು. ಒಂಥರಾ ಹುಚ್ಚೆ ಇದು. ಇಂದಿನದಲ್ಲ ಈ ಪರಿ, ಅಂದು ನೀ ಫೇಲಾದಾಗ ಕ್ಲಾಸಿನ ಮುಂದೆ ಕೂತು ಸೊರ ಸೊರ ಎಂದು ಅಳುತ್ತಿದ್ದೆಯಲ್ಲ. ಅಂದೇ ಪ್ರಾರಂಭವಾಯಿತು. ನಿನಗೇನೋ ದುಃಖ ಆದರೆ ನನಗೆ ನಿಜವಾಗು ಖುಷಿಯೆನಿಸಿತ್ತು. ಇಲ್ಲವಾದರೆ ನೀನೆಲ್ಲಿ ನನ್ನ ಎದೆಗೊರಗಿ ಅಳುತ್ತಿದ್ದೆ? ನಿನ್ನ ಗಲ್ಲಗಳೆಲ್ಲ ಒದ್ದೆ ಮುದ್ದೆಯಾಗಿ ಮೆತ್ತಗೆ ನನ್ನ ಬಟ್ಟೆಗಳನೆಲ್ಲ ನೆನೆಸುತ್ತಿರುವಾಗ ನನಗೋ ಎಂತಹುದೋ ದಿವ್ಯ ಅನುಭವ. ನೀ ಅಸಹ್ಯವಾಗಿ ಸೊರ ಸೊರ ಎನ್ನುತ್ತ ಒಮ್ಮೆ ಕಣ್ಣನ್ನೂ ಮತ್ತೊಮ್ಮೆ ಮೂಗನ್ನೂ ಒರೆಸಿಕೊಳ್ಳುವಾಗ ನನ್ನ ನೋಡಬೇಕಿತ್ತು ನೀನು..
ನಿನಗಿಂತ ಒಂದೆರಡು ವಿಷಯಗಳಲ್ಲಿ ನಾನೂ ಫೇಲಾಗಿದ್ದೆ ಅಂತ ಯಾರು ನಂಬಲಾರರು. ಹೀಗೇಕೆ ಅಂತ ಒಮ್ಮೆಯೂ ಅನಿಸಲಿಲ್ಲ. ಅಂದು ನಿನ್ನ ಸೋಕಿ ಆದ ರಮ್ಯ ಅನುಭವ ಇಂದೂ ನೆನೆದರೆ ಈ ಬೊಚ್ಚು ಬಾಯಲ್ಲೂ ನಗೆಯಾಡುತ್ತದೆ.
ಅಂದು ನಿನ್ನ ದುಃಖದಲ್ಲಿ ಪಾಲಾಗದೆ ಅದನ್ನ ಅಸ್ವಾದಿಸಿದ್ದಕ್ಕೆ ಕ್ಷಮಿಸುವೆಯಲ್ಲ? ಕ್ಷಮಿಸಲೇ ಬೇಕು. ನೀ ಕೊಟ್ಟ ದುಖವೇನು ಕಮ್ಮಿಯೇ? ನನ್ನನ್ನುರಿಸಲೆಂದೇ ನನ್ನೆದುರಿಗೆ ನನ್ನ ಮಿತ್ರ ಶಾಂತಾರಾಮನ ಹತ್ತಿರ ಮಾತ್ರ ಮಾತನಾಡುತ್ತಿದ್ದೆ? ಕಳ್ಳಿ.
ಮೊನ್ನೆ ಪಾರ್ಕಿನಲ್ಲೂ ಇದೆ ವಿಷಯ ಹೇಳುತ್ತಿದ್ದ. ಪಾಪಿ. ಅವನಿಗದೇ ಸಾಕು ಜೀವನಕ್ಕೆ. ನೀನೇ ಅವನ ಹತ್ತಿರ ನಕ್ಕು ಮಾತಾಡಿಸಿದ ಮೊದಲ ಹಾಗು ಕೊನೆಯ ಹುಡುಗಿ ಅಲ್ಲ ಮುದುಕಿಯಿರಬೇಕು. ನೀನೇನೂ ಅಂತ ಅಪರೂಪ ಸುಂದರಿಯಲ್ಲ.
ಹುಣಸೆ  ಕೊರಡಿಗೆ ಬಿಳಿ ಬಣ್ಣ ಬಳಿದು ಲಂಗ ದಾವಣಿ ಸುತ್ತಿದ ಹಾಗೇ ಇದ್ದೆ, ಮದುವೆಯಾಗಿ ಎರಡೇ ವರ್ಷಗಳಲ್ಲಿ ಬೂದುಗುಮ್ಬಳಕಾಯಿಯ ಹಾಗೇ ಬಿರಿದೆಯಲ್ಲವೇ? ಹಾಗೆ ನೋಡಬೇಕೆಂದರೆ ನನ್ನಂಥ ಸ್ಪುರದ್ರೂಪಿ ಗಂಡು ನಿನಗೆ
ಸಿಗುತ್ತಿದನೇ? ನೋಡಲು ತರಗೆಲೆಯಂತೆ ಇದ್ದರೂ ,  ಆ ಎರಡು ಕಂಗಳಲಿ ಹೊರದುತ್ತಿದ್ದ ಕನಸಿನ ಬಾಣ ಬಿರುಸುಗಳು ನನ್ನನ್ನು ಕುರುಡು ಮಾಡಿತು. ಕುರುಡಾಗೇ ಇರುವೆ. ಹೆಣ್ಣಿನ ಕಣ್ಣಲ್ಲಿನ ಆಸೆ ಅಳೆಯುವಂಥ ಸಾಧನೆ ಯಾರೂ ಇನ್ನೂ ಮಾಡಿರಲಿಕ್ಕಿಲ್ಲ! ಆ ದೇವಾದಿದೇವರೂ ಸೋತು ಹೋದರಂತೆ ಪ್ರಯತ್ನಿಸಿ. ಅದರಿಂದಲೇ ತಾನೇ ಸೃಷ್ಟಿ, ಜಗತ್ತು ನಡೆಯುತ್ತಿರುವುದು. ಆ ಕಂಗಳ ಮಾಯೆ ಪ್ರೀತಿಯಾಗಿ, ಮಾತೆಯಾಗಿ, ಮಮತೆಯಾಗಿ ಎಲ್ಲರನ್ನು ಆಕ್ರಮಿಸಿದೆ? ನಾ ಹೇಗೆ
ಎಲ್ಲವುದನ್ನು ಮರೆತು ನಿನ್ನ ಸಾನಿಧ್ಯದಲ್ಲಿ ಮೂಕನಾಗಿ, ಮಗುವಾಗಿ, ಮಾಯವಾಗುತ್ತಿದ್ದೆ! ... ದಿನಗಟ್ಟಲೆ ಹಸಿವು ನಿದ್ರೆಯಿಲ್ಲದೆ ತಪಸ್ಸಿನ ತರಹ ನಿನ್ನ ದಾರಿ ಕಾಯುತ್ತಿರಲಿಲ್ಲವೇ? ಪ್ರೇಕ್ಷಕರಿಗೆ ಇದು ಅತಿಶಯವಾದರೆ ಆಗಲಿ, ಆದರೆ ನಿಜವಾಗಿ ಪ್ರೀತಿಸಿದವರಿಗೆ ಇದರ ಅನುಭವವಿರುತ್ತೆ. ಹೀಗೇ ಪ್ರೇಯಸಿಯ ಕಂಗಳಲ್ಲಿ ಲೋಕ ಮರೆತವರೆಷ್ಟು ಜನ!!! ಅದೇ ಕಣ್ಣುಗಳು ಊದಿ ಕೆಂಪಗೆ ಮಾಡಿಕೊಂಡು ಮದುವೆಯ ಫೋಟೋಗಳಲ್ಲಿ ಹೇಗೆ ಚಿಂಪಾಂಜಿಯ ಹಾಗೆ ಕಾಣುತ್ತಿದ್ದೆ? ಬಾಸಿಂಗ ಸೊಟ್ಟಗೆ ತಿರುಗಿ, ಬಳಿದ ಕಣ್ಕಪ್ಪು ಮೂಗಿಗೆಲ್ಲಾ ಸೋರಿ, ಕುಂಕುಮ ಅರಿಶಿನ ಮೆತ್ತಿದ್ದ ಮೂತಿ ನೆನೆದರೆ .. ಅತ್ತೂ ಅತ್ತೂ ಸುಮ್ಮನಾದೆ ಆಮೇಲೆ. ನನ್ನನ್ನು ಪಂಚೆ ಶಲ್ಯದಲ್ಲಿ ನೋಡಿ ಭಯವಾಯಿತೋ ಇಲ್ಲಾ ಮದುವೆಗೆ ಬಂದ ಶಾಂತಾರಾಮನ ಮೇಲೆ ಮನಸ್ಸು ಬಂತೋ?!! ಶಾಂತರಾಮನ ಜೊತೆ ಮದುವೆ ಆಗಿದ್ದರೆ ಚಂದ ಅನಿಸಿತ್ತೆ?? ಅದಕ್ಕೆ ಏನೋ ಅವನಿನ್ನೂ ಮಾಡುವೆ ಆಗದೆ ಇರುವುದು. ಅಂತು ನನ್ನ ವರಿಸಿ ಬಂದೆಯಲ್ಲ ಶಾರದೆ!!! ಅಷ್ಟು ಸಾಧಾರಣ ಹುಡುಗಿ, ನೋಡಲೂ ಸುಮಾರು ನನ್ನನ್ನು ಹೀಗೆ ಕಪಿಮುಷ್ಠಿಯಲ್ಲಿ ಹಿಡಿದುಕೊಂಡಿರಲು ಹೇಗೆ ಸಾಧ್ಯ. ನನ್ನ ಅರ್ಧದಷ್ಟು ಇಲ್ಲ, ಆದರು ಅದೆಂಥ ಶಕ್ತಿ? ನೀ ಬೇಡ ಎಂದ ಒಂದೇ ಒಂದು ಕೆಲಸ ನಾ ಮಾಡಿದೇನೆ? ನನ್ನ ಪ್ರೆಮವೃಕ್ಷ ನಿನ್ನಲ್ಲಿ ಬೆಳೆಯುತ್ತಿದ್ದಾಗ ಹೇಗೆ ನಳನಳಿಸಿದೇ? ಅದಕ್ಕೆ ನಾನೇ ಕಾರಣ ಅಲ್ಲವೇ? ನೀ ಬೆವೆತು ತೊಪ್ಪೆಯಾಗಿ ಒಂದೊಂದು ಮೆಟ್ಟಿಲೇರುವಾಗ ನಿನ್ನ ಹೊತ್ತುಕೊಳ್ಳಬೇಕು ಎನಿಸ್ಸಿತ್ತು ನಿಜ ಆದರೆ ಮೊದಲಿನಂತೆ ಸಣ್ಣಗೆ ಇದ್ದರೆ ಎತ್ತಿಕೊಳುತ್ತಿದ್ದೆನೇನೋ.. ಆ ಸಮಯದಲ್ಲಿ ಕರೆಂಟ್ ಹೋದರೂ  ನನ್ನ ಮೇಲೆ ರೇಗುವಾಗ , ಮಧ್ಯ ರಾತ್ರಿ ಮೂರು ನಾಲ್ಕು ಗಂಟೆಗೂ ನನ್ನ ಕೈಲಿ ಹುಣಿಸೆ ಹಣ್ಣು ಕುಟ್ಟಿಸಿಕೊಂಡು ತಿನ್ನುವಾಗ, ಗ್ಯಾಸ್ ಆಗಿ ಹೊಟ್ಟೆ ಚುಳಕ್ಕೆಂದರೂ ನೋವು ಎಂದು ಇಡಿ ರಾತ್ರಿ ಹೆದರಿ ಬಸವಳಿದಾಗ ನಿನ್ನ ಮೇಲೆ ಮೋಹ ಮತ್ತೆ ಹೆಚ್ಚಾಗುತ್ತಿತ್ತು.  ನನ್ನ ಕೈಗೊಂದು ದೀಪಾವಳಿ ಬೋನಸ್ನಂತೆ ಕೊಟ್ಟೆಯಲ್ಲ ಪುಟ್ಟ ಮಿಂಚುಮರಿ. ಅಬ್ಬ !!! ಅದಂತೂ ಈಗಲು ನನ್ನ ರೋಮ ರೋಮಗಳನ್ನು ನಿಮಿರಿಸುತ್ತದೆ. ಅದೇ ಬಿಳಿ ಬೊಂಬೆ. ಕಣ್ಣು ಮೂಗು ಎಲ್ಲ ನಿಂದೆ. ನನ್ನ ಮೇಲೆ ಹಗೆ ಇತ್ತೋ ಏನೋ. ನನ್ನ ರೂಪ ಒಂಚೂರು ಬರಲಿಲ್ಲ ಅದಕ್ಕೆ. ನೀನೆ ನಿಮ್ಮಮ್ಮನ ಜೊತೆ ಸೇರಿ ಮಾಡಿರಬೇಕು ಈ ಪಿತೂರಿ. ಅವಳಿನ್ನು ದೊಡ್ಡ ಚೋರಿ. ಹುಟ್ಟುತ್ತಲೇ ನನ್ನ ಕಿರು ಬೆರಳನ್ನ ಹಿಡಿದು ಬಾಯಿಗೆ ಹಾಕಿಕೊಂಡು ನನ್ನನ್ನು ಅರ್ಧ ಗಾಳಿ ಹೋದ ಬಲೂನಿನ ಹಾಗೇ ಮೆತ್ತಗೆ ಮಾಡಿ ಬಿಟ್ಟಳು. ನೀನು ನೀನೆ ಹೇಳಿಕೊಟ್ಟಿರಬೇಕು ಇದೆಲ್ಲ. ಅದಕ್ಕೆ ಹಾಲೂಡಿಸುವಾಗ ನಿನ್ನ ಮುಖದಲ್ಲಾದ ಹೊನಲು ನೋಡಿ ನನಗು ತಾಯಾಗಬೇಕೆನಿಸಿತ್ತು. ನಿನ್ನನ್ನು ನೋಡಿ ನನಗೆಕಿಲ್ಲ ಇಂಥ ಭಾಗ್ಯ ಅನಿಸಿತ್ತು.
ಈಗಲೂ ಮಕ್ಕಳು ನಿನ್ನ ಹತ್ತಿರ ಬರುವಾಗ ನೀ ತೋರಿಸುವ ಮಮತೆ ನನನ್ನು ಮತ್ತೆ ನಿನ್ನತ್ತ ಸೆಳೆಯುತ್ತದೆ. ಇಷ್ಟು ವರ್ಷಗಳಲ್ಲಿ ಏನೂ ಬದಲಾಗಿಲ್ಲ ಎಂದೆನಿಸುತ್ತದೆ. ಅಂದು ಕಂಡ ಹುಣಿಸೆ ಕೊರಡು ಬೇರು ಬಿಟ್ಟು , ಸಿಹಿಯಾದ ಹಣ್ಣು ಕೊಡುವ ಹೆಮ್ಮರವಾಗಿದೆ. ನನ್ನ ತಲೆ ನೆರೆತು, ಬೊಕ್ಕಾಗಿ, ಹಲ್ಲಿನ ಸೆಟ್ಟು ಆಗಾಗ ಅಡುಗೆ ಮನೆಯ ಕಟ್ಟೆಯ ಮೇಲೆ ಹೊಳೆಯುತ್ತಿದ್ದರೂ ನಿನ್ನ ಒಲುಮೆಯ ಚಿಲುಮೆ ಅಷ್ಟೆ ಸಮೃಧ್ಧವಾಗಿದೆ. ಪ್ರೀತಿ ತೋರಿಸಲು ಸಮಯ - ಸ್ಥಳ ನೋಡಬಾರದು, ಇಂದೇ ನಿನ್ನ ಶಾರದೆಗೆ " ಐ ಲವ್ ಯೂ" ಹೇಳು ಅಂತ ಶಾಂತಾರಾಮ ಮೊನ್ನೆ ಪಾರ್ಕಿನಲ್ಲಿ ಹೇಳಿ ಹೋದ. ಅವನು ಹೇಳಬೇಕೆಂದಿದ್ದನೋ ಏನೋ .. ನಿನ್ನೊಳಿದೆ ನನ್ನ ಮನಸು ಶಾರದೆ.. ನಗೆ ನನ್ನ ಬೊಚ್ಚು ಬಾಯಿ ಸುಂದರಿ......